ರಾಜ್ಯಕ್ಕೆ ಕೇಂದ್ರದಿಂದ ಗ್ರಾಮೀಣ ವಸತಿ ಯೋಜನೆಯ ೪೦೦ ಕೋಟಿ ರು. ಬಿಡುಗಡೆ: ಕೋಟ

KannadaprabhaNewsNetwork | Published : Sep 14, 2024 1:57 AM

ಸಾರಾಂಶ

ನಗರಾಡಳಿತ ಸಂಸ್ಥೆಗಳ ವಾಜಪೇಯಿ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆಯ ಪ್ರಗತಿ ಪರಿಶೀಲಿಸಿದ ಕೋಟ, ಸಾಧ್ಯವಾದಷ್ಟು ಬೇಗ ವಸತಿ ಯೋಜನೆಯ ಪ್ರಗತಿಯನ್ನು ಮಾಡಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹಿಂದಿನ ವರ್ಷಗಳ ವಸತಿ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರದಿಂದ ಗ್ರಾಮೀಣ ವಸತಿ ಯೋಜನೆಗೆ ೪೦೦ ಕೋಟಿ ರು. ಮತ್ತು ನಗರ ವಸತಿ ಯೋಜನೆಗೆ ೭೫ ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಅವರು ಉಡುಪಿ ಜಿಲ್ಲೆಯ ನಗರ ಸ್ಥಳೀಯಾಡಳಿತದ ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.ನಗರಾಡಳಿತ ಸಂಸ್ಥೆಗಳ ವಾಜಪೇಯಿ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆಯ ಪ್ರಗತಿ ಪರಿಶೀಲಿಸಿದ ಕೋಟ, ಸಾಧ್ಯವಾದಷ್ಟು ಬೇಗ ವಸತಿ ಯೋಜನೆಯ ಪ್ರಗತಿಯನ್ನು ಮಾಡಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲು ಸೂಚಿಸಿದರು.ಉಡುಪಿ ಜಿಲ್ಲೆಯಲ್ಲಿರುವ ಉಡುಪಿ ನಗರಸಭೆ, ಕುಂದಾಪುರ ಪುರಸಭೆ, ಕಾರ್ಕಳ ಪುರಸಭೆ, ಬೈಂದೂರು ಪಟ್ಟಣ ಪಂಚಾಯಿತಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಜೊತೆ ಸಮಾಲೋಚಿಸಿ ಮಾಹಿತಿ ಪಡೆದು, ಶೇ.೮೦ರಷ್ಟು ಮಾತ್ರ ಬಡವರ ವಸತಿ ಯೋಜನೆಯು ಅನುಷ್ಠಾನವಾಗಿದ್ದು, ಉಳಿಕೆ ಮನೆಗಳ ಪ್ರಗತಿಯನ್ನು ಕೂಡಲೇ ಪರಿಶೀಲಿಸಿ, ಪೂರ್ಣ ಪ್ರಮಾಣದಷ್ಟು ಬಡವರ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.* ಪಿಎಂ ಸ್ವನಿಧಿ ಅನುಷ್ಠಾನಕ್ಕೆ ಸೂಚನೆ

ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಬೀದಿ ವ್ಯಾಪಾರಿಗಳು ಮತ್ತು ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯನ್ನು ಗರಿಷ್ಠ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಅಕ್ಟೋಬರ್ ಮೊದಲ ವಾರದೊಳಗೆ ಸ್ವನಿಧಿ ಯೋಜನೆಯ ಪೂರ್ಣ ಪ್ರಮಾಣದ ಅನುಷ್ಠಾನವನ್ನು ಮಾಡಿ, ಫಲಾನುಭವಿಗಳಿಗೆ ಯೋಜನೆಯ ಉಪಯೋಗ ಪಡೆಯಲು ಕ್ರಮತೆಗೆದುಕೊಳ್ಳಬೇಕೆಂದು ಸೂಚಿಸಿದರು.ಸಭೆಯಲ್ಲಿ ಉಡುಪಿ ನಗರಸಭೆ, ಕಾಪು ಪುರಸಭೆ, ಕಾರ್ಕಳ ಪುರಸಭೆ, ಕುಂದಾಪುರ ಪುರಸಭೆ, ಬೈಂದೂರು ಪಟ್ಟಣ ಪಂಚಾಯಿತಿ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ವಸತಿ ಯೋಜನೆಯ ನೋಡಲ್ ಅಧಿಕಾರಿಗಳು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರವೀಂದ್ರ ಉಪಸ್ಥಿತರಿದ್ದರು.

Share this article