ಸುರಪುರದಲ್ಲಿ 40ನೇ ನಾಡಹಬ್ಬ ಮಹೋತ್ಸವ ಸಂಭ್ರಮ

KannadaprabhaNewsNetwork |  
Published : Oct 22, 2026, 01:15 AM IST
ಸುರಪುರದ ಗರುಡಾದ್ರಿ ಕಲಾಮಂದಿರದಲ್ಲಿ ನಡೆದ 40ನೇ ನಾಡಹಬ್ಬ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಓಬಾಜೆಟ್ಟಿ ಹಾಗೂ ಮದ್ದೀನ್ ಮಹಲ್ ಹನುಮಾನ ಮಂದಿರದ ಟ್ರಸ್ಟ್ ವತಿಯಿಂದ ಉತ್ಸವದ ಯಶಸ್ಸಿಗೆ ಶ್ರಮಿಸಿದ ಪ್ರಮುಖರನ್ನು ಗೌರವಿಸಲಾಯಿತು | Kannada Prabha

ಸಾರಾಂಶ

ನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಸಾಂಸ್ಕೃತಿಕ ಉತ್ಸವಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಸುರಪುರದಲ್ಲಿ ಒಂಬತ್ತು ದಿನಗಳ ಕಾಲ ನಡೆದ 40ನೇ ವರ್ಷದ ನಾಡಹಬ್ಬ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಿದ್ದು, ಉತ್ಸವದ ಯಶಸ್ಸು ನಮಗೆಲ್ಲರಿಗೂ ಸಂತೋಷ ಮತ್ತು ತೃಪ್ತಿ ತಂದಿದೆ ಎಂದು ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ರಾಜಾ ಮುಕುಂದನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಸಾಂಸ್ಕೃತಿಕ ಉತ್ಸವಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಸುರಪುರದಲ್ಲಿ ಒಂಬತ್ತು ದಿನಗಳ ಕಾಲ ನಡೆದ 40ನೇ ವರ್ಷದ ನಾಡಹಬ್ಬ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಿದ್ದು, ಉತ್ಸವದ ಯಶಸ್ಸು ನಮಗೆಲ್ಲರಿಗೂ ಸಂತೋಷ ಮತ್ತು ತೃಪ್ತಿ ತಂದಿದೆ ಎಂದು ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ರಾಜಾ ಮುಕುಂದನಾಯಕ ಹೇಳಿದರು.

ನಗರದ ಗರುಡಾದ್ರಿ ಕಲಾಮಂದಿರದಲ್ಲಿ ದಸರಾ ಅಂಗವಾಗಿ ಕನ್ನಡ ಸಾಹಿತ್ಯ ಸಂಘ, ಪಬ್ಲಿಕ್ ರಿಕ್ರೆಯೇಷನ್ ಕ್ಲಬ್ ಹಾಗೂ ನಾಡಹಬ್ಬ ಉತ್ಸವ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ 40ನೇ ನಾಡಹಬ್ಬ ಮಹೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುರಪುರದ ಸಾಂಸ್ಕೃತಿಕ ಪರಂಪರೆಯ ಬೆಳವಣಿಗೆಗೆ ದಿ.ರಾಜಾ ಮದನಗೋಪಾಲನಾಯಕ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಮಕ್ಕಳಲ್ಲಿ ಹಾಗೂ ಮುಂದಿನ ಪೀಳಿಗೆಯಲ್ಲಿ ಸಾಂಸ್ಕೃತಿಕ ಪ್ರಜ್ಞೆ ಬೆಳೆಸಲು ಅವರು ನೀಡಿದ ಪ್ರೇರಣೆಯನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ನಾಡಹಬ್ಬದ ಯಶಸ್ಸಿಗೆ ಶ್ರಮಿಸಿದ ಸಮಿತಿಯ ಎಲ್ಲ ಪದಾಧಿಕಾರಿಗಳು, ಸದಸ್ಯರು, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದರು.

ಸುರೇಶ ಆರ್. ಸಜ್ಜನ ಪ್ರಸ್ತಾವನೆಗೈದು, ಈ ಬಾರಿ ವಿಭಿನ್ನ ರೀತಿಯಲ್ಲಿ ಆನೆಯ ಮೇಲೆ ಅಂಬಾರಿ ಹೊತ್ತ ನಾಡದೇವತೆಯ ಮೆರವಣಿಗೆ ಸೇರಿದಂತೆ ವಿವಿಧ ಕಾರ‍್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ರಾಜಮನೆತನದ ಪರಂಪರೆ ಮತ್ತು ಇತಿಹಾಸದೊಂದಿಗೆ ಸುರಪುರಕ್ಕೆ ಅವಿನಾಭಾವ ಸಂಬಂಧವಿದೆ. ರಾಜಮನೆತನದ ಆಶೀರ್ವಾದ ಮತ್ತು ಸಹಕಾದಿಂದ ಅನೇಕ ಸಾಂಸ್ಕೃತಿಕ ಕರ‍್ಯಕ್ರಮಗಳು ನಡೆಯುತ್ತಿವೆ. ಸುರಪುರ ಸಂಸ್ಥಾನದ ಅರಸರು ಆನೆ-ಅಂಬಾರಿ ಶೋಭಾಯಾತ್ರೆಗೆ ಚಾಲನೆ ನೀಡಿರುವುದು ಸಂತಸದ ಸಂಗತಿ. ಅವರ ಸಲಹೆಯಂತೆ ಮುಂದಿನ ವರ್ಷದಿಂದ ಉತ್ಸವವನ್ನು ‘ದಸರಾ ದರ್ಬಾರ್’ ಎಂಬ ಹೆಸರಿನಲ್ಲಿ ಇನ್ನಷ್ಟು ವೈಭದಿಂದ ಆಚರಿಸಲು ಉದ್ದೇಶಿಸಲಾಗಿದೆ ಎಂದರು. ಜತೆಗೆ ಆನೆ ತರಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಹೈಕೊರ್ಟ್ ವಕೀಲ ಜೆ.ಅಗಸ್ಟಿನ್ ಮಾತನಾಡಿ, ಸಂಘಟನೆಯ ಮೂಲಕ ಬೆಳೆದು ಬಂದ ನಾಡಹಬ್ಬದ ಪರಂಪರೆ ಹಾಗೂ ಸುರಪುರದ ಇತಿಹಾಸವ ಸ್ಮರಿಸಿದರು. ಸವಾಲಗಳನ್ನು ಸ್ವೀಕರಿಸುವ ವ್ಯಕ್ತಿ ಇತಿಹಾಸ ಸೃಷ್ಟಿಸುತ್ತಾನೆ. ಗರುಡಾದ್ರಿ ಕಲಾಮಂದಿರದ ನಿರ್ಮಾಣದ ಸವಾಲನ್ನು ಸ್ವೀಕರಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ದಿ. ರಾಜಾ ಮದನಗೋಪಾಲನಾಯಕ ಅವರ ಸಾಧನೆ ಗಮನಾರ್ಹ. ಅದೇ ರೀತಿ, ರಾಜಾ ಮುಕುಂದನಾಯಕ ಅವರು ಶ್ರೇಷ್ಠ ಸಂಘಟನಾಕಾರರಾಗಿದ್ದು, ಚತುರತೆ ಹಾಗೂ ಸಾಂಸ್ಕೃತಿಕ ಕಾಳಜಿಯೊಂದಿಗೆ ಕನ್ನಡದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುರಪುರ ಸಾಂಸ್ಕೃತಿಕ ಬದುಕಿಗೆ ಹೊಸ ಚೈತನ್ಯ ನೀಡಿ ಅದ್ಭುತ ಇತಿಹಾಸ ಸೃಷ್ಟಿವಲ್ಲಿ ಅವರ ಕೊಡುಗೆ ಮಹತ್ವದಾಗಿದೆ ಎಂದು ಶ್ಲಾಘಿಸಿದರು. ಮುಂದಿನ 41ನೇ ನಾಡಹಬ್ಬ ಉತ್ಸವದಲ್ಲಿ ಕವಿ ಸಮ್ಮೇಳನ ಆಯೋಜಿಸುವಂತೆ ಸಲಹೆ ನೀಡಿದರು.

ನಿವೃತ್ತ ಪ್ರಾಂಶುಪಾಲ ರಾಘವೇಂದ್ರ ಗುಡಗುಂಟಿ, ಯು.ಕೆ.ನಾಯಕ, ಶ್ರೀನಿವಾಸ ಜಾಲವಾದಿ, ಪಾರಪ್ಪ ಗುತ್ತೇದಾರ,ಗಂಗಾಧರ ರುಮಾಲ,ಗೋವರ್ಧನ ಜವ್ಹಾರ್, ಯಲ್ಲಪ್ಪ ಹುಲಕಲ್, ಎಸ್.ಎನ್.ಪಾಟೀಲ, ರಾಘವೇಂದ್ರ ಬಾಡಿಯಾಳ, ಸಿದ್ದಣ್ಣ ಮುಧೋಳ, ರಾಘವೇಂದ್ರ ಭಕ್ರಿ ಸೇರಿದಂತೆ ಸಮಿತಿಯ ಸದಸ್ಯರು, ಮಕ್ಕಳು, ಪೋಷಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಶಿಲ್ಪಾ ದೇವರಗೋನಾಲ ಪ್ರಾರ್ಥನಾ ಗೀತೆ ಹಾಡಿದರು. ದೇವು ಹೆಬ್ಬಾಳ ಸ್ವಾಗತಿಸಿದರು. ರಾಜಶೇಖರ ದೇಸಾಯಿ ನಿರೂಪಿಸಿ, ವಂದಿಸಿದರು.

ಮಕ್ಕಳು, ಪೋಷಕರು ಹಾಗೂ ಶಿಕ್ಷಕರಿಗೆ ಸನ್ಮಾನ: ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಉದ್ದೇಶದಿಂದ ನಾಡಹಬ್ಬ ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳು ಹಾಗೂ ಸ್ಪರ್ಧೆಗಳ ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ, ಪೋಷಕರು ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಾಡಹಬ್ಬ ಉತ್ಸವ ಸಮಿತಿಯ ಗೌರವಾಧ್ಯಕ್ಷ ರಾಜಾ ಪಾಮನಾಯಕ, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಅರವಿಂದಕುಮಾರ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ನ.ಯೋ.ಪ್ರಾ. ಮಾಜಿ ಅಧ್ಯಕ್ಷ ಪ್ರಕಾಶ ಸಜ್ಜನ, ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ ನಿಂಬೂರ, ಸಮಿತಿ ಉಪಾಧ್ಯಕ್ಷೆ ಜಯಲಲಿತಾ ವ್ಹಿ.ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಬಸಪ್ಪ ಯಾಳವಾರ, ಉದ್ಯಮಿ ಜ್ಞಾನಚಂದ್ ಜೈನ್ ವೇದಿಕೆಯಲ್ಲಿದ್ದರು. ಬಳಿಕ ಸುರಪುರದ ಓಬಾಜೆಟ್ಟಿ ಹಾಗೂ ಮದ್ದೀನ್ ಮಹಲ್ ಹನುಮಾನ್ ಮಂದಿರದ ಟ್ರಸ್ಟ್ ವತಿಯಿಂದ ನಾಡಹಬ್ಬದ ಆಚರಣೆಯ ಯಶಸ್ಸಿಗೆ ಶ್ರಮಿಸಿದ ಪ್ರಮುಖರಾದ ರಾಜಾ ಪಾಮನಾಯಕ, ರಾಜಾ ಮುಕುಂದನಾಯಕ, ಕಿಶೋರ ಚಂದ ಜೈನ್, ಬಸವರಾಜ ಜಮದ್ರಖಾನಿ, ಅರವಿಂದಕುಮಾರ, ಜೆ.ಅಗಸ್ಟಿನ್, ಸುರೇಶ ಸಜ್ಜನ, ಪ್ರಕಾಶ ಸಜ್ಜನ, ಶಿವಕುಮಾರ ಸ್ವಾಮಿ ಮಸ್ಕಿ, ಮಹೇಶ ಜಹಾಂಗೀರದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭ್ಯರ್ಥಿ ಶಶೀಲ್‌ ನಮೋಶಿಗೆ ಅಭೂತಪೂರ್ವ ಬೆಂಬಲ: ರವೀಂದ್ರ ಶೆಟ್ಟಿ
ಶ್ರದ್ದಾ ಭಕ್ತಿಯಿಂದ ದೇವರನ್ನು ಆರಾಧಿಸಿದರೆ ಯಶಸ್ಸು ಸಿದ್ದಿ