ಹುಬ್ಬಳ್ಳಿ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಮೇಯರ್ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ "ಮೇಯರ್ ಜತೆ ಮಾತುಕತೆ " ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 41 ದೂರುಗಳು ಬಂದವು. ಸ್ವಚ್ಛತೆ, ಕಸ ವಿಲೇವಾರಿ, ಬೀದಿದೀಪ ನಿರ್ವಹಣೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಸಾರ್ವಜನಿಕರು ಮೇಯರ್ ಬಳಿ ಅಳಲು ತೋಡಿಕೊಂಡರು.
ಜಗದೀಶ ಉಣಕಲ್ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ಯೋಜನೆಯಡಿ ಅಭಿವೃದ್ಧಿ ಪಡಿಸಿದ ರಸ್ತೆ, ಟೆಂಡರ್ ಶ್ಯೂರ್ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳ ಪಾದಚಾರಿ ಮಾರ್ಗಗಳು ಒತ್ತುವರಿಯಾಗಿವೆ. ಇದನ್ನು ತೆರವುಗೊಳಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಪೊಲೀಸ್ ಇಲಾಖೆ ಸಹಾಯ ಪಡೆದು ಒತ್ತುವರಿ ತೆರವುಗೊಳಿಸುವುದಾಗಿ ತಿಳಿಸಿದರು.ವಾರ್ಡ್ ಸಂಖ್ಯೆ 52ರ ರಾಜು ಕರೆ ಮಾಡಿ, ಡೆವಲೆಪರ್ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಅಧಿಕಾರಿಗಳು ಇ-ಸ್ವತ್ತು ನೀಡಲು ವಿಳಂಬ ಮಾಡುತ್ತಿದ್ದಾರೆ. ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ಇ-ಸ್ವತ್ತು ಮಾಡಿಕೊಟ್ಟಿಲ್ಲ ಎಂದರು. ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ಮೂಲ ಮಾಲೀಕರ ತೆರಿಗೆ ವಸೂಲಿ ಮಾಡುವ ಜತೆಗೆ ಇ-ಸ್ವತ್ತು ನೀಡಲು ಸೂಚಿಸುವುದಾಗಿ ತಿಳಿಸಿದರು.
ನೇಕಾರ ನಗರದಲ್ಲಿ ಒಳಚರಂಡಿ ಚೇಂಬರ್ ಒಡೆದು ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದ್ದು, ಈ ಸಮಸ್ಯೆ ಪರಿಹರಿಸುವಂತೆ ಮಲ್ಲಪ್ಪ ಮನವಿ ಮಾಡಿದರು. ಹಂದಿಗಳ ಹಿಡಿಯುವ ಕಾರ್ಯಾಚರಣೆಗೆ ಸೂಚನೆಫೋನ್ ಇನ್ ಕಾರ್ಯಕ್ರಮದ ನಂತರ ಮೇಯರ್ ರಾಮಪ್ಪ ಬಡಿಗೇರ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಹಂದಿಗಳ ಉಪಟಳ ಹೆಚ್ಚಾಗಿದ್ದು, ಅವುಗಳನ್ನು ಹಿಡಿಯುವ ಕಾರ್ಯಾಚರಣೆಗೆ ಸೂಚಿಸಲಾಗಿದೆ. ಹಂದಿ, ಬೀದಿ ನಾಯಿ, ಬಿಡಾಡಿ ದನ ನಿರ್ವಹಣೆ ಕುರಿತು 3 ತಿಂಗಳ ಹಿಂದೆಯೇ ಸಭೆ ನಡೆಸಲಾಗಿತ್ತು. ಆಟೋ ಟಿಪ್ಪರ್‌ಗಳ ಮೂಲಕವೂ ಜಾಗೃತಿ ಮೂಡಿಸಲಾಗಿತ್ತು. ಆ ನಂತರ ಬಿಡಾಡಿ ದನಗಳ ಹಾವಳಿ ಕಡಿಮೆಯಾಗಿದೆ ಎಂದರು.ಹಂದಿಗಳ ಮಾಲೀಕರು ಜನವರಿ ವರೆಗೆ ಕಾಲಾವಕಾಶ ಕೇಳಿದ್ದರು. ಆ ಅವಧಿ ಮುಗಿದಿದ್ದು, ತಂಡಗಳನ್ನು ಕರೆಸಿ, ಪೊಲೀಸ್ ಇಲಾಖೆ ನೆರವು ಪಡೆದು ಕಾರ್ಯಾಚರಣೆ ನಡೆಸಬೇಕು ಎಂದರು.ಕಸ ಸಂಗ್ರಹಕ್ಕೆ ಮನೆ ಮನೆಗೆ ವಾಹನಗಳು ಹೋದರೂ ಕೆಲವರು ವಾಹನಗಳಲ್ಲಿ ಕಸ ಹಾಕುವುದಿಲ್ಲ. ಸಮರ್ಪಕ ಕಸ ವಿಲೇವಾರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಕಳೆದ ಬಾರಿಯ ಫೋನ್ ಇನ್‌ನಲ್ಲಿ 47 ದೂರುಗಳು ಬಂದಿದ್ದವು. ಅದರಲ್ಲಿ 17 ದೂರುಗಳು ಬಾಕಿ ಇವೆ. ಈ ಬಾರಿಯ ಫೋನ್‌ಇನ್‌ನಲ್ಲಿ ಸ್ವಚ್ಛತೆ, ಕಸ ವಿಲೇವಾರಿ, ಬೀದಿ ದೀಪ ನಿರ್ವಹಣೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು 41 ದೂರುಗಳು ಬಂದಿವೆ ಎಂದರು. ಈ ವೇಳೆ ಪಾಲಿಕೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.