ಹುಬ್ಬಳ್ಳಿಯಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯರಿಂದ ಮನೆಗಳ ಹಸ್ತಾಂತರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಕೊಳಗೇರಿ ಅಭಿವೃದ್ಧಿ ಮಂಡಳಿ (ಸ್ಲಂ ಬೋರ್ಡ್)ಯಿಂದ ಹುಬ್ಬಳ್ಳಿ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ನಿರ್ಮಿಸಲಾದ ಒಟ್ಟು 42,346 ಮನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನ. 29ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ಹೇಳಿದರು.
ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ನಿರ್ಮಾಣ ಹಂತದ ಮನೆಗಳು ಹಾಗೂ ಕಾರ್ಯಕ್ರಮ ಆಯೋಜಿಸುವ ಹಳೇ ಮಂಟೂರು ರಸ್ತೆಯ ಸ್ಥಳವನ್ನು ಭಾನುವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಈಗಾಗಲೇ ಕಾರ್ಯಕ್ರಮ ಆಯೋಜನೆಗೆ ಸ್ಥಳ ಗುರುತಿಸಿದ್ದು, 17-18 ಎಕರೆ ಪ್ರದೇಶದಲ್ಲಿ ಬೃಹತ್ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ. ಸುಮಾರು 1.5 ಲಕ್ಷ ಆಸನಗಳ ವ್ಯವಸ್ಥೆಗೆ ಜಾಗವು ಅನುಕೂಲಕರವಾಗಿದೆ ಎಂದರು.
36,789 ಮನೆ ಹಂಚಿಕೆ:ಈ ಹಿಂದೆಯೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸ್ಲಂ ಬೋರ್ಡ್‌ನಿಂದ ರಾಜ್ಯದಲ್ಲಿ 1.83 ಲಕ್ಷ ಮನೆ ಹಾಗೂ ರಾಜೀವ್ ಗಾಂಧಿ ವಸತಿ ಯೋಜನೆಯಡಿ 47,863 ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರು. ಒಟ್ಟು 2.30 ಲಕ್ಷ ಮನೆ ನಿರ್ಮಿಸುವ ಗುರಿ ಸರ್ಕಾರ ಹೊಂದಿತ್ತು. ಆದರೆ, ಮುಂದಾದ ರಾಜಕೀಯ ಬೆಳವಣಿಗೆಯಿಂದ ಇದು ನನೆಗುದಿಗೆ ಬಿದ್ದಿತ್ತು. ಬಳಿಕ 2018ರಲ್ಲಿ ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಸರ್ಕಾರ ಒಂದೇ ಒಂದು ಮನೆ ನೀಡಲಿಲ್ಲ. ಪುನಃ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣವೇ ಈ ಯೋಜನೆ ಕೈಗೆತ್ತಿಕೊಂಡು ಅನುಷ್ಠಾನಗೊಳಿಸುತ್ತಿದ್ದು, ಕಳೆದ ವರ್ಷ 36,789 ಮನೆಗಳನ್ನು ಹಂಚಿಕೆ ಸಹ ಮಾಡಿದೆ ಎಂದರು.
ಪ್ರಸ್ತುತ ಒಂದು ಮನೆ ನಿರ್ಮಾಣಕ್ಕೆ ₹7.50 ಲಕ್ಷ ಬೇಕಾಗುತ್ತದೆ. ಆದರೆ, ಕೇಂದ್ರ ಸರ್ಕಾರ ಪಿಎಂ ಆವಾಸ್ ಯೋಜನೆಯಡಿ ₹1.50 ಲಕ್ಷ ನೀಡಿ ಶೇ.18ರಷ್ಟು ಜಿಎಸ್‌ಟಿ ಹಾಕಿ ಬಡವರಿಂದ ₹1.38 ಲಕ್ಷ ವಾಪಸ್ ಪಡೆಯುತ್ತಿದೆ. ಇನ್ನು ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಸಾಮಾನ್ಯರಿಗೆ ₹1.50 ಲಕ್ಷ, ಎಸ್ಸಿ-ಎಸ್ಟಿಗೆ ₹2 ಲಕ್ಷ ನೀಡುತ್ತದೆ. ಹಾಗೆಯೇ ₹4 ಲಕ್ಷ ವರೆಗೆ ಫಲಾನುಭವಿಗಳಿಂದ ಪಡೆಯಬೇಕಿತ್ತು. ಆದರೆ, ಬಡವರಿಗೆ ಇದು ಕಷ್ಟ-ಸಾಧ್ಯ. ಬಡವರ ಸಲುವಾಗಿ ಫಲಾನುಭವಿಗಳ ವಂತಿಕೆಯನ್ನು ಸಹ ರಾಜ್ಯ ಸರ್ಕಾರವೇ ಭರಿಸುವ ತೀರ್ಮಾನವನ್ನು ಮುಖ್ಯಮಂತ್ರಿಗಳು ಕೈಗೊಂಡಿದ್ದಾರೆ. 2.30 ಲಕ್ಷ ಮನೆಗಳಿಗೆ ₹9,500 ಕೋಟಿ ಆಗಲಿದ್ದು, ಇದರ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿದೆ ಎಂದರು.ಬಿಜೆಪಿಗೆ ಕಾಳಜಿಯಿಲ್ಲ:
ಈ ನಿಟ್ಟಿನಲ್ಲಿ 2024 ಫೆಬ್ರುವರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮೊದಲ ಹಂತವಾಗಿ ₹500 ಕೋಟಿ ಬಿಡುಗಡೆ ಮಾಡಿದ್ದರಿದ ಕಳೆದ ವರ್ಷ 36,789 ಮನೆ ನಿರ್ಮಿಸಿ ಹಂಚಿಕೆ ಮಾಡಲು ಸಾಧ್ಯವಾಯಿತು. ಇದರೊಟ್ಟಿಗೆ ಬಡವರಿಗಾಗಿ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗೂ ಸಾಕಷ್ಟು ಅನುದಾನವನ್ನು ಸರ್ಕಾರ ವ್ಯಯಿಸುತ್ತಿದೆ. ಆದರೆ, ಬಿಜೆಪಿಗೆ ಬಡವರ ಬಗ್ಗೆ ಕಾಳಜಿಯೇ ಇಲ್ಲ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ವಿಪ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅಲ್ತಾಫ ಹಳ್ಳೂರ, ಅನಿಲಕುಮಾರ ಪಾಟೀಲ ಸೇರಿದಂತೆ ಹಲವರಿದ್ದರು.