ಪ್ರತಿ ಕ್ವಿಂಟಲ್ ರಾಗಿಗೆ 4290 ರು. ಬೆಂಬಲ ಬೆಲೆ ನಿಗದಿ: ಡೀಸಿ ಶಿವಶಂಕರ್

KannadaprabhaNewsNetwork |  
Published : Nov 17, 2024, 01:17 AM IST
ಬೆಂ.ಗ್ರಾ ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಿತು. | Kannada Prabha

ಸಾರಾಂಶ

ರೈತರು ಕಡ್ಡಾಯವಾಗಿ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ದತ್ತಾಂಶದಲ್ಲಿ ನೋಂದಾಯಿಸಿಕೊಂಡು, ಫ್ರೂಟ್ಸ್ ಐಡಿ ಪಡೆದಿರಬೇಕು. ನೋಂದಣಿ ಪ್ರಕ್ರಿಯೆಯಲ್ಲಿ ಫ್ರೂಟ್ಸ್ ಐಡಿ ಕಡ್ಡಾಯ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಕನಿಷ್ಠ ಬೆಂಬಲ ಬೆಲೆಯಡಿ ರೈತರಿಂದ ರಾಗಿ ಖರೀದಿಸಲು ಡಿ.1ರಿಂದ ನೋಂದಣಿ ಪ್ರಕ್ರಿಯೆ ಶುರುವಾಗಲಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ಸೂಚಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರೈತರಿಂದ ರಾಗಿ ಖರೀದಿಸಲು ಪೂರ್ವ ಸಿದ್ಧತಾ ಕ್ರಮಗಳ ಮೊದಲನೆಯ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.

ಪ್ರತಿ ಕ್ವಿಂಟಲ್ ರಾಗಿಗೆ ₹4290 ಬೆಂಬಲ ಬೆಲೆಯನ್ನು ಸರ್ಕಾರ ನಿಗದಿ ಪಡಿಸಿದೆ. ಕನಿಷ್ಟ ಬೆಂಬಲ ಯೋಜನೆಯಡಿ ರಾಗಿ ಖರೀದಿಗೆ ಸಂಬಂಧಿಸಿದಂತೆ ಸಂಗ್ರಹಣಾ ಏಜೆನ್ಸಿಗಳು ಪ್ರತಿ ತಾಲೂಕು ಹಂತದಲ್ಲಿ ಅಗತ್ಯಕ್ಕೆ ತಕ್ಕಂತೆ ಖರೀದಿ ಕೇಂದ್ರಗಳನ್ನು ತೆರೆಯಬೇಕು. ರಾಗಿ ಖರೀದಿಗೆ ಸಂಬಂಧಿಸಿದಂತೆ ನೋಂದಣಿ ಪ್ರಕ್ರಿಯೆಗೆ ನಿಗದಿತ ಸ್ಥಳಗಳನ್ನು ಗುರಿತಿಸಿ ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದರು.ಖರೀದಿ ಕೇಂದ್ರಗಳ ನೋಂದಣಿಗೆ ಅವಶ್ಯಕತೆ ಇರುವ ಟೇಬಲ್, ಚೇರ್, ಕಂಪ್ಯೂಟರ್ ಗಳು, ವಿದ್ಯುತ್ ಸಂಪರ್ಕ, ಇಂಟರ್ನೆಟ್, ತೂಕದ ಯಂತ್ರ ವ್ಯವಸ್ಥೆ ಮಾಡಿ, ರೈತರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಿ ಎಂದು ಕೃಷಿ ಮಾರುಕಟ್ಟೆ ಮತ್ತು ಎ.ಪಿ.ಎಂ.ಸಿ ಅಧಿಕಾರಿಗಳಿಗೆ ಸೂಚಿಸಿದರು.

ಡಿ.1ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು ಜನವರಿಯಲ್ಲಿ ರಾಗಿ ಖರೀದಿ ಪ್ರಕ್ರಿಯೆ ಶುರುವಾಗಲಿದೆ. ಹಾಗಾಗಿ ರೈತರಿಂದ ಖರೀದಿಸಿದ ರಾಗಿಯನ್ನು ಕ್ರೋಢೀಕರಿಸಿ ಶೇಖರಿಸಲು ಉಗ್ರಾಣಗಳು ವ್ಯವಸ್ಥಿತ ಗುಣಮಟ್ಟದಲ್ಲಿ ಇದೆಯೇ ಎಂದು ಪರಿಶೀಲಿಸಿ, ಅವಶ್ಯವಿದ್ದಲ್ಲಿ ಹೆಚ್ಚುವರಿ ಉಗ್ರಾಣಗಳನ್ನು ನಿಗದಿ ಪಡಿಸುವಂತೆ ತಿಳಿಸಿದರು.

ರೈತರು ಕಡ್ಡಾಯವಾಗಿ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ದತ್ತಾಂಶದಲ್ಲಿ ನೋಂದಾಯಿಸಿಕೊಂಡು, ಫ್ರೂಟ್ಸ್ ಐಡಿ ಪಡೆದಿರಬೇಕು. ನೋಂದಣಿ ಪ್ರಕ್ರಿಯೆಯಲ್ಲಿ ಫ್ರೂಟ್ಸ್ ಐಡಿ ಕಡ್ಡಾಯ ಎಂದು ಹೇಳಿದರು.

ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಜಿ.ಶಂಕರಮೂರ್ತಿ, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ತನ್ವೀರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಕಲಾವತಿ, ಉಪನಿರ್ದೇಶಕಿ ಗಾಯಿತ್ರಿ, ಜಿಲ್ಲಾ ಉಗ್ರಾಣ ಕೇಂದ್ರಗಳ ವ್ಯವಸ್ಥಾಪಕರು ಇತರರಿದ್ದರು.

ರಾಗಿ ನೋಂದಣಿ, ಖರೀದಿ ಕೇಂದ್ರದ ವಿವರ:

ರೈತ ಭವನ ಕೇಂದ್ರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎಪಿಎಂಸಿ ಆವರಣ, ದೊಡ್ಡಬಳ್ಳಾಪುರ, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ಕೆಂಪಲಿಂಗನಹಳ್ಳಿ ಕ್ರಾಸ್, ಕುಣಿಗಲ್ ರಸ್ತೆ, ನೆಲಮಂಗಲ, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ಕುರುಬರ ದೊಡ್ಡಿ ರಸ್ತೆ, ಚಿಕ್ಕಬಳ್ಳಾಪುರ ರಸ್ತೆ ದೇವನಹಳ್ಳಿ, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಅಕ್ಷರ ದಾಸೋಹ ಕೇಂದ್ರ, ವೀರಭದ್ರೇಶ್ವರ ರೈಸ್ ಮಿಲ್ ಕಾಂಪೌಂಡ್, ಮಾಲೂರು ರಸ್ತೆ, ಹೊಸಕೋಟೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!