ಕುಸಿತ ನಿಯಂತ್ರಣಕ್ಕಾಗಿ 437 ಪ್ರದೇಶ ಗುರುತು: ಜಿಲ್ಲಾಧಿಕಾರಿ

KannadaprabhaNewsNetwork |  
Published : Nov 06, 2025, 02:30 AM IST
ಜಿಲ್ಲಾಧಿಕಾರಿ ಮಾತನಾಡಿದರು  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹೆಚ್ಚಿನ ವಿಪತ್ತುಗಳು ಕಂಡುಬರುತ್ತಿದ್ದು, ಪ್ರವಾಹಗಳು, ಗುಡ್ಡ ಕುಸಿತಗಳು ಸಂಭವಿಸುತ್ತಿದ್ದು, ಇವುಗಳ ನಿಯಂತ್ರಣಕ್ಕಾಗಿ ಈಗಾಗಲೇ 437 ಗುಡ್ಡ ಕುಸಿತ ಪ್ರದೇಶಗಳನ್ನು ಗುರುತಿಸಿ, ಗುಡ್ಡ ಕುಸಿತದ ಸಂಭವನೀಯತೆ ಬಗ್ಗೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗಿದೆ.

ವಿಪತ್ತು ಎದುರಿಸುವಲ್ಲಿ ಮುನ್ನೆಚ್ಚರಿಕೆ ಕುರಿತು ಸಮಯ್ ರೇಖಾ ಸಮ್ಮೇಳನ

ಕನ್ನಡಪ್ರಭ ವಾರ್ತೆ ಕಾರವಾರ

ರಾಜ್ಯದಲ್ಲಿ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶ ಮತ್ತು ಕರಾವಳಿ ಪ್ರದೇಶಗಳನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯು ಪ್ರತಿ ವರ್ಷ ನಿರಂತರವಾಗಿ ಗುಡ್ಡ ಕುಸಿತ, ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಅತ್ಯಂತ ಸಮರ್ಥ, ಪರಿಣಾಮಕಾರಿಯಾಗಿ ಎದುರಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಕೈಗಾದಲ್ಲಿ ಸಮಯ್ ರೇಖಾ-2025 ಸಮ್ಮೇಳನ ನಡೆಯಿತು.

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹೆಚ್ಚಿನ ವಿಪತ್ತುಗಳು ಕಂಡುಬರುತ್ತಿದ್ದು, ಪ್ರವಾಹಗಳು, ಗುಡ್ಡ ಕುಸಿತಗಳು ಸಂಭವಿಸುತ್ತಿದ್ದು, ಇವುಗಳ ನಿಯಂತ್ರಣಕ್ಕಾಗಿ ಈಗಾಗಲೇ 437 ಗುಡ್ಡ ಕುಸಿತ ಪ್ರದೇಶಗಳನ್ನು ಗುರುತಿಸಿ, ಗುಡ್ಡ ಕುಸಿತದ ಸಂಭವನೀಯತೆ ಬಗ್ಗೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ತುರ್ತು ಸಂದರ್ಭದಲ್ಲಿ ರಕ್ಷಣೆಗಾಗಿ 5 ಚಂಡಮಾರುತ ಆಶ್ರಯ ಕಟ್ಟಡಗಳನ್ನು ನಿರ್ಮಿಸಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ 24x7 ಕಾರ್ಯನಿರ್ವಹಿಸುವ ತುರ್ತು ಸ್ಪಂದನಾ ಕೇಂದ್ರ ತೆರೆಯಲಾಗಿದೆ ಎಂದರು.

ಕೇರಳದ ಎಸ್.ಡಿ.ಎ.ಎಂ.ಎ.ನ ಮಾಜಿ ಸದಸ್ಯ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಕ್ಲೈಮೇಟ್ ಜೇಂಜ್ ಸ್ಟಡೀಸ್‌ನ ಮಾಜಿ ನಿರ್ದೇಶಕ ಪ್ರೊ. ಡಾ. ಕೇಶವ್ ಮೋಹನ್, ವಿಕೋಪಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಎಐ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬಹುದಾಗಿದ್ದು, ಇದರಿಂದ ನೈಜ ಸಮಯದಲ್ಲಿ ನಿಖರ ಮುನ್ಸೂಚನೆ ಪಡೆಯಲು ಹಾಗೂ ಪರಿಣಾಮಕಾರಿಯಾಗಿ ತಡೆಯಲು ಸಾಧ್ಯ ಎಂದರು.

ಪೊಲೀಸ್ ಇಲಾಖೆಯ ಫೋರೆನ್ಸಿಕ್ ಲ್ಯಾಬ್ ಹುಬ್ಬಳ್ಳಿಯ ಉಪ ನಿರ್ದೇಶಕ ಡಾ. ಚಂದ್ರಶೇಖರ್, ವಿಪತ್ತು ಸಂದರ್ಭದಲ್ಲಿ ಜೀವ ಹಾನಿಯಾದವರ ದೇಹದ ಅಂಗಾಂಗಗಳ ಡಿಎನ್ಎ ಮೂಲಕ ವಾರಸುದಾರರನ್ನು ಗುರುತಿಸಲು ಸುಲಭವಾಗಲಿದ್ದು, ಮೃತರ ರಕ್ತದ ಮಾದರಿ, ಹಲ್ಲುಗಳು, ಬೇರು ಸಹಿತವಾದ ಕೂದಲು, ಮೂಳೆ ಸಂಗ್ರಹಿಸುವ ಮತ್ತು ಸಂರಕ್ಷಿಸುವ ವಿಧಾನಗಳ ಕುರಿತು ತಿಳಿಸಿದರು.

ತೇಜಸ್ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಆ್ಯಂಡ್ ಮಿಟಿಗೇಶನ್ ಸೆಂಟರ್‌ನ ಉಪಾಧ್ಯಕ್ಷ ಮತ್ತು ನಿರ್ದೇಶಕ ಪ್ರಭು ವಿ.ವಿ., ವಿಪತ್ತು ಸಂದರ್ಭದಲ್ಲಿ ತ್ವರಿತ ಕಾರ್ಯಚರಣೆ ಕೈಗೊಳ್ಳಲು ಅನುಕೂಲವಾಗುವಂತೆ ರಕ್ಷಣಾ ಉಪಕರಣಗಳು, ವಾಹನಗಳು, ಸಿಬ್ಬಂದಿ ಕುರಿತ ಸಮಗ್ರ ಮಾಹಿತಿ ಹೊಂದಿರಬೇಕು ಎಂದರು.

ಮಂಗಳೂರಿನ ಕರ್ಸ್ತೂಬಾ ಮೆಡಿಕಲ್ ಕಾಲೇಜ್ ನ ತುರ್ತು ಚಿಕಿತ್ಸೆ ವಿಭಾಗದ ಸಹಾಯಕ ಪ್ರೋಫೆಸರ್ ಡಾ. ನಿಖಿಲ್ ಪಾಲ್ ತುರ್ತು ಚಿಕಿತ್ಸೆ ಕುರಿತು ತಿಳಿಸಿದರು.

ಐಎನ್ಎಸ್ ಪತಂಜಲಿಯ ಸರ್ಜನ್ ಕ್ಯಾ. ವಿವೇಕ್ ಭಟ್, ಯಾವುದೇ ರೀತಿಯ ವಿಪತ್ತು ಸಂದರ್ಭದಲ್ಲಿ ರಕ್ಷಣಾ ಪಡೆಗಳು ಸಾರ್ವಜನಿಕರ ನೆರವಿಗೆ ಆಗಮಿಸಲಿದೆ ಎಂದರು.

ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್, ಜಿಲ್ಲೆಯಲ್ಲಿನ ವೈದ್ಯಕೀಯ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಅನಾಟಮಿ ವಿಭಾಗದ ಪ್ರೊಫೆಸರ್ ಡಾ. ಸುಮಾ, ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ವಿಶೇಷಾಧಿಕಾರಿ ಡಾ. ದಿವ್ಯ ಪ್ರಕಾಶ್, ಕ್ರಿಮ್ಸ್‌ನ ವೈದ್ಯ ಡಾ. ಅಮಿತ್ ಕುಮಾರ್, ಕೈಗಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅಜಯ್ ದುಬೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.

ಎನ್‌ಪಿಸಿಐಎಲ್ ಕೈಗಾದ ಸ್ಥಳ ನಿರ್ದೇಶಕ ವಿನೋದ್ ಕುಮಾರ, ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮ ಮತ್ತು ಮುನ್ನೆಚ್ಚರಿಕೆಯಾಗಿ ನಿರಂತರವಾಗಿ ನಡೆಸುವ ಅಣಕು ಕಾರ್ಯಾಚರಣೆ ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ವಿದ್ಯಾರ್ಥಿಗಳ ಬಾಳಿಗೆ ಸೂರ್ಯನಂತೆ ಬೆಳಕಾಗಬೇಕು
ಗಾಂಧಿ ಹೆಸರ ಅಳಿಸಲು ಬಿಜೆಪಿ ಪಿತೂರಿ: ಸಿಎಂ