ಪಿಕಪ್ ವಾಹನ ಅಡ್ಡಗಟ್ಟಿ ₹3 ಲಕ್ಷ ಮೌಲ್ಯದ 44 ಕ್ವಿಂಟಾಲ್ ಹಸಿ ಅಡಕೆ ದರೋಡೆ

KannadaprabhaNewsNetwork |  
Published : Dec 14, 2025, 02:30 AM IST
ಗುಬ್ಬಿ ಪಟ್ಟಣದ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿ, ಸ್ನೇಹಜೀವನ ಫೌಂಡೇಶನ್  ಆಶಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ವೈದ್ಯಧಿಕಾರಿ ಡಾ.ಬಿಂದು ಮಾಧವ. | Kannada Prabha

ಸಾರಾಂಶ

ನರಸಿಂಹರಾಜಪುರಖರೀದಿಸಿದ ಹಸಿ ಅಡಕೆಯನ್ನು ಮಾರಾಟಕ್ಕೆಂದು ಕೊಂಡೊಯ್ಯುತ್ತಿದ್ದ ಪಿಕಪ್ ವಾಹನ ಅಡ್ಡಗಟ್ಟಿದ ಐವರ ತಂಡ ₹3 ಲಕ್ಷ ಮೌಲ್ಯದ 44 ಕ್ವಿಂಟಾಲ್ ಅಡಕೆಯ ಒಟ್ಟು 67 ಮೂಟೆಗಳು, ₹29 ಸಾವಿರ ನಗದು, 2 ಮೊಬೈಲನ್ನು ದರೋಡೆ ಮಾಡಿದ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

- 5 ಜನ ದರೋಡೆಕೋರರಿಂದ ಕೃತ್ಯ । ₹29 ಸಾವಿರ ನಗದು, 2 ಮೊಬೈಲ್‌ ಕಸಿದು ಪರಾರಿ । ಕತ್ತಿಯಿಂದ ಹಲ್ಲೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಖರೀದಿಸಿದ ಹಸಿ ಅಡಕೆಯನ್ನು ಮಾರಾಟಕ್ಕೆಂದು ಕೊಂಡೊಯ್ಯುತ್ತಿದ್ದ ಪಿಕಪ್ ವಾಹನ ಅಡ್ಡಗಟ್ಟಿದ ಐವರ ತಂಡ ₹3 ಲಕ್ಷ ಮೌಲ್ಯದ 44 ಕ್ವಿಂಟಾಲ್ ಅಡಕೆಯ ಒಟ್ಟು 67 ಮೂಟೆಗಳು, ₹29 ಸಾವಿರ ನಗದು, 2 ಮೊಬೈಲನ್ನು ದರೋಡೆ ಮಾಡಿದ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.

ಎನ್.ಆರ್.ಪುರ- ಬಾಳೆಹೊನ್ನೂರು ಮಧ್ಯೆ ಬರುವ ಅಳೇಹಳ್ಳಿಯ ಮುಖ್ಯ ರಸ್ತೆಯಲ್ಲಿ ವಾಹನ ಹೋಗುತ್ತಿದ್ದಾಗ ದರೋಡೆಕೋರರು ಪಿಕಪ್ ವಾಹನ ಅಡ್ಡಗಟ್ಟಿ 3 ಲಕ್ಷ ರುಪಾಯಿ ಬೆಲೆ ಬಾಳುವ 44 ಕ್ವಿಂಟಾಲ್ ಹಸಿ ಅಡಿಕೆ ಇರುವ 67 ಮೂಟೆ , 29 ಸಾವಿರ ರುಪಾಯಿ ನಗದು, 2 ಮೊಬೈಲ್ ದರೋಡೆ ಮಾಡಿದ ಘಟನೆ ಶುಕ್ರವಾರ ಮದ್ಯರಾತ್ರಿ ನಡೆದಿದೆ.

ಕಳಸ ತಾಲೂಕಿನ ಹೆಮ್ಮಕ್ಕಿ ಗ್ರಾಮದ ಕೆ.ರವಿ ಅವರು ಕಳಸ ಸಮೀಪದ ಕಾರಗದ್ದೆ ತೋಟದಿಂದ 44 ಕ್ವಿಂಟಾಲ್ ಹಸಿ ಅಡಕೆ ಖರೀದಿ ಮಾಡಿ ಅದನ್ನು 67 ಚೀಲಗಳಿಗೆ ಹಾಕಿ ಭದ್ರಾವತಿಯಲ್ಲಿ ಮಾರಾಟ ಮಾಡಲು ಪಿಕಪ್ ವಾಹನದಲ್ಲಿ ಚಾಲಕ ವಿಶ್ವಾಸ್ ನೊಂದಿಗೆ ಸಂಜೆ 7.30ಕ್ಕೆ ಕಳಸದಿಂದ ಹೊರಟು ಬಾಳೆಹೊನ್ನೂರಿಗೆ ಬಂದು ಊಟ ಮಾಡಿ ನರಸಿಂಹರಾಜಪುರದ ಕಡೆಗೆ ಹೊರಟಿದ್ದರು.

ರಾತ್ರಿ 10.30ರ ಸುಮಾರಿಗೆ ಅಳೇಹಳ್ಳಿ ಹತ್ತಿರ ಬರುತ್ತಿದ್ದಾಗ ಹಿಂಭಾಗದಿಂದ ಇನ್ನೊಂದು ಪಿಕಪ್ ವಾಹನದಲ್ಲಿ ಬಂದವರು ಹಸಿ ಅಡಕೆ ಮೂಟೆ ಇದ್ದ ಪಿಕಪ್ ವಾಹನಕ್ಕೆ ಅಡ್ಡಲಾಗಿ ನಿಲ್ಲಿಸಿದ್ದಾರೆ. ಅದರಲ್ಲಿದ್ದ ಮೂವರು ಅಪರಿಚಿತರು ಕತ್ತಿ, ಕಬ್ಬಿಣದ ರಾಡು ಹಿಡಿದು ಇಳಿದಿದ್ದಾರೆ. ಅದೇ ಸಮಯಕ್ಕೆ ಬಾಳೆಹೊನ್ನೂರು ಕಡೆಯಿಂದಲೇ ಸ್ಲೆಂಡರ್ ಬೈಕ್ ನಲ್ಲಿ ಬಂದ ಇಬ್ಬರು ಈ ಮೂವರ ಜತೆಗೂಡಿದ್ದಾರೆ.

ಒಬ್ಬನ ಕೈಯಲ್ಲಿ ಅಡಕೆ ಕೊನೆ ಕೊಯ್ಯುವ ಹರಿತವಾದ ಕತ್ತಿ ಹಿಡಿದಿದ್ದನು. ಇದರಿಂದ ಭಯ ಭೀತರಾದ ಕೆ.ರವಿ ಹಾಗೂ ವಿಶ್ವಾಸ್‌ ತಮ್ಮ ಪಿಕಪ್ ವಾಹನದ ಗ್ಲಾಸ್ ಏರಿಸಿದ್ದಾರೆ. ದರೋಡೆಕೋರರು ಗ್ಲಾಸ್ ಒಡೆದು ಅವಾಚ್ಯ ಶಬ್ದದಿಂದ ಬೈದು ರವಿ ಅವರನ್ನು ಹಿಡಿದು ಎಳೆದಾಡಿ ಕುತ್ತಿಗೆಗೆ ಕತ್ತಿಯಿಟ್ಟು ಹಲ್ಲೆಗೆ ಮುಂದಾಗಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ರವಿ ಕೈಗೆ ಕತ್ತಿಯ ಏಟು ಬಿದ್ದಿದೆ. ಆ ಸಂದರ್ಭದಲ್ಲಿ ಅವರಲ್ಲಿ ಒಬ್ಬ ರಾಡಿನಿಂದ ರವಿಯ ಬಲ ಪಕ್ಕೆಗೆ ಹೊಡೆದಿದ್ದಾನೆ. ವಾಹನ ಚಾಲನಾ ಸ್ತಿತಿಯಲ್ಲಿದ್ದಾಗಲೇ ದರೋಡೆಕೋರರು ವಾಹನದ ಕೀ ಕಿತ್ತುಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ಅಡಕೆ ಇದ್ದ ವಾಹನ ಮುಂದಕ್ಕೆ ಹೋಗಿ ದರೋಡೆಕೋರರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಆಗ ದರೋಡೆಕೋರರು ರವಿಯನ್ನು ವಾಹನದಿಂದ ಕೆಳಗೆ ಎಳೆದು ಜೇಬಿನಲ್ಲಿದ್ದ ₹29 ಸಾವಿರ ನಗದು, ಮೊಬೈಲ್ ಕಿತ್ತು ಕೊಂಡಿದ್ದಾರೆ. ನಂತರ ವಿಶ್ವಾಸ್ ಎದೆಗೆ ಗುದ್ದಿ, ಮೊಬೈಲ್ ಕಿತ್ತುಕೊಂಡಿದ್ದಾರೆ. ಕೊಲೆ ಮಾಡುವುದಾಗಿ ಬೆದರಿಸಿ ಇಬ್ಬರ ಕೈಗಳನ್ನು ಕಟ್ಟಿದ ದರೋಡೆಕೋರರು ಇಬ್ಬರನ್ನು ಪಿಕಪ್ ವಾಹನದಲ್ಲಿ ಕೂರಿಸಿದ್ದಾರೆ. ಎರಡೂ ಪಿಕಪ್ ವಾಹನವನ್ನು ದರೋಡೆ ಕೋರರೇ ಚಾಲನೆ ಮಾಡಿಕೊಂಡು ಬಿ.ಎಚ್.ಕೈಮರ ಮಾರ್ಗವಾಗಿ ಕುದುರೆಗುಂಡಿ ಕಡೆಗೆ ಸಾಗಿ ಕಾಡು ದಾರಿಯಲ್ಲಿ ನಿಲ್ಲಿಸಿ ರವಿ ಅವರ ವಾಹನದಲ್ಲಿದ್ದ ಎಲ್ಲಾ 67 ಚೀಲ ಹಸಿ ಅಡಕೆಯನ್ನು ಅವರ ವಾಹನಕ್ಕೆ ತುಂಬಿಸಿ ಕೊಂಡಿದ್ದಾರೆ. ರವಿ ಅವರ ಪಿಕಪ್ ವಾಹನವನ್ನು ಸ್ವಲ್ಪ ದೂರದ ವರೆಗೂ ಚಾಲನೆ ಮಾಡಿಕೊಂಡು ಬಂದು ನಿಲ್ಲಿಸಿದ ಮೂವರು ದರೋಡೆಕೋರರು ಅಡಕೆ ಮೂಟೆ ತುಂಬಿದ್ದ ಅವರ ವಾಹನದಲ್ಲಿ ಎನ್.ಆರ್.ಪುರದ ಕಡೆಗೆ ಹೋಗಿದ್ದಾರೆ.

ಬೈಕ್ ನಲ್ಲಿ ಬಂದಿದ್ದ ಇಬ್ಬರು ಕತ್ತಿ ಹಿಡಿದುಕೊಂಡು ರವಿ- ವಿಶ್ವಾಸ್ ಅವರ ಕಾವಲು ಕಾದುಕೊಂಡಿದ್ದು 1 ಗಂಟೆ ನಂತರ ಇಬ್ಬರ ಕೈಗಳನ್ನು ಬಿಚ್ಚಿ 200 ಮೀ. ದೂರದಲ್ಲಿ ನಿಮ್ಮ ಪಿಕಪ್ ವಾಹನ ಇದೆ ತೆಗೆದುಕೊಂಡು ಹೋಗಿ. ಆದರೆ, ಈ ವಿಚಾರ ಯಾರಿಗೂ ಹೇಳಬಾರದು ಎಂದು ಬೆದರಿಸಿ ಹೋಗಿದ್ದಾರೆ. ಅಲ್ಲಿಂದ ತಮ್ಮ ಪಿಕಪ್ ವಾಹನದ ಬಳಿ ಬಂದು ರವಿ ಹಾಗೂ ವಿಶ್ವಾಸ್ ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನರಸಿಂಹರಾಜಪುರ ಠಾಣೆಗೆ ದೂರು ನೀಡಿದ್ದಾರೆ.

-- ಬಾಕ್ಸ್ --

ತೆಲುಗು, ತಮಿಳು ಮಾತನಾಡುತ್ತಿದ್ದ ದರೋಡೆಕೋರರು

ತೆಲುಗು, ತಮಿಳು ಭಾಷೆ ಮಾತನಾಡುತ್ತಿದ್ದ ದರೋಡೆಕೋರರು ರವಿ ಹಾಗೂ ವಿಶ್ವಾಸ್ ಜೊತೆಗೆ ಮಾತ್ರ ಕನ್ನಡದಲ್ಲೇ ಮಾತನಾಡುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅವರು ಮಾತನಾಡುವಾಗ ಮಂಜುನಾಥ, ಕಾಟೇಶ, ಕಾರ್ತಿಕ ಎಂದು ಸಂಭೋದಿಸುತ್ತಿದ್ದರು. ಪಿಕಪ್ ವಾಹನ ಹಾಗೂ ಬೈಕ್ಗಳ ನಂಬರ್ ಗೊತ್ತಾಗಲಿಲ್ಲ. ಆದರೆ, ಪಿಕಪ್, ಬೈಕ್ ವಾಹನಗಳು ಹಾಗೂ ದರೋಡೆಕೋರರು ಬಂದರೆ ಗುರುತಿಸುತ್ತೇವೆ ಎಂದು ಹಲ್ಲೆಗೆ ಒಳಗಾದ ಕೆ.ರವಿ ಹಾಗೂ ವಿಶ್ವಾಸ್ ಪೊಲೀಸರಿಗೆ ತಿಳಿಸಿದ್ದಾರೆ. ನರಸಿಂಹರಾಜಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ