ಒಪ್ಪಿಗೆ ನೀಡಿದ ಅರ್ಬನ್ ವಾಟರ್ ಸಪ್ಲೈ ಬೋರ್ಡ್: ಶಾಸಕ ಬಿ.ವೈ.ವಿಜಯೇಂದ್ರ
ಪಟ್ಟಣದ ಜನತೆಯಲ್ಲಿ ಯಾರೊಬ್ಬರೂ ಕೆರೆಕಟ್ಟೆ ನೀರು ಕುಡಿದು ಸಮಸ್ಯೆ ಆಗದಿರಲೆಂದು ಕೇಂದ್ರದ ಅಮೃತ್ ಯೋಜನೆ-೨ರ ಅಡಿ ₹೪೫ ಕೋಟಿ ಅನುದಾನಕ್ಕೆ ಅರ್ಬನ್ ವಾಟರ್ ಸಪ್ಲೈ ಬೋರ್ಡ್ ಒಪ್ಪಿಗೆ ನೀಡಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಶುಕ್ರವಾರ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮಾಂತರದಲ್ಲಿ ಜಗಜೀವನ್ ಮಿಷನ್ ಅಡಿಯಲ್ಲಿ, ಹಾಗೆಯೇ ಅಮೃತ-೧ ನಲ್ಲಿ ಕಾರ್ಪೋರೇಷನ್ ಮಹಾನಗರ ಪಾಲಿಕೆಗೆ ಹಣ ದೊರಕುತ್ತದೆ. ಅಮೃತ -೨ರಲ್ಲಿ ಪುರಸಭೆಗಳಿಗೆ ದೊರಕುತ್ತದೆ. ಆ ಪ್ರಕಾರ ಶಿರಾಳಕೊಪ್ಪ ಪುರಸಭೆ ಆಗಿ ಪರಿವತರ್ನೆ ಆದ ಹಿನ್ನೆಲೆಯಲ್ಲಿ ಮುಂದಿನ ೨೫ ವರ್ಷಕ್ಕೆ ಯೋಜನೆ ರೂಪಿಸಲು ಹಣ ಮಂಜೂರಾಗಿದೆ.ಈ ಕಾಮಗಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಶೇ. ೫೦ರಷ್ಟು ಅನುದಾನ, ಶೇ. ೩೦ರಷ್ಟು ರಾಜ್ಯ ಸರ್ಕಾರದ ಅನುದಾನ, ಉಳಿದ ಶೇ. ೨೦ರಷ್ಟಕ್ಕೆ ಸ್ಥಳೀಯ ಸಂಸ್ಥೆಗಳು ಕೈಜೋಡಿಸಬೇಕು ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ೧೦೦ ವರ್ಷ ತುಂಬುವ ವೇಳೆಗೆ ಈ ಯೋಜನೆಯ ಕಾರ್ಯ ಪೂಣರ್ಗೊಳ್ಳುವಂತೆ ಕ್ರಮ ಕೈಗೊಳ್ಳಲಾಗಿದ್ದು, ಇದೊಂದು ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದೆ. ಶಿಕಾರಿಪುರ ಪುರಸಭೆ ಕುಡಿಯುವ ನೀರಿನ ಯೋಜನೆಗೆ ೧೦ ಕೋಟಿ ರು. ಸಹ ಮಂಜೂರಾಗಿದೆ.