ನರಸಿಂಹರಾಜಪುರದ 8 ಗ್ರಾಪಂಗೆ ತಲಾ ₹45 ಲಕ್ಷ ಅನುದಾನ ಬಿಡುಗಡೆ: ಶಾಸಕ ಟಿ.ಡಿ.ರಾಜೇಗೌಡ

KannadaprabhaNewsNetwork |  
Published : Nov 18, 2025, 12:15 AM IST
 ನರಸಿಂಹರಾಜಪುರ ತಾಲೂಕಿನ ಸೀತೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗ್ರಾಮ ಪಂಚಾಯಿತಿ ಕಟ್ಟಡವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಎಂ.ಎಸ್.ರೇಖಾ ಮತ್ತಿತರರು ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ತಾಲೂಕಿನ 8 ಗ್ರಾಮ ಪಂಚಾಯಿತಿಗಳಿಗೆ ತಲಾ ₹45 ಲಕ್ಷ ರು. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. ಸೋಮವಾರ ಸೀತೂರು ಗ್ರಾಪನ ₹54 ಲಕ್ಷ ವೆಚ್ಚದ ನೂತನ ಕಟ್ಟಡ ಹಾಗೂ ಘನ ತ್ಯಾಜ್ಯ ವಿಲೇವಾರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಸೀತೂರು ಗ್ರಾಪಂ ವ್ಯಾಪ್ತಿಯ ಕುದುರೆಗುಂಡಿ- ಹಳ್ಳಿಬೈಲು ರಸ್ತೆ ಅಭಿವೃದ್ದಿಗೆ ₹4.50 ಕೋಟಿ, ಶೇಡ ಗಾರು ಪಿಕಪ್ ಗೆ ₹34 ಲಕ್ಷ, ಬೆಳ್ಳೂರು ವೆಟನರಿ ಆಸ್ಪತ್ರೆಗೆ ₹34 ಲಕ್ಷ, ಶಾಲೆ- ಅಂಗನವಾಡಿಗೆ ₹25 ಲಕ್ಷ ಬಿಡುಗಡೆ ಮಾಡಿದ್ದೆ. ಈ ಭಾಗದ ಗ್ರಾಮೀಣ ರಸ್ತೆ ಅಭಿವೃದ್ದಿಗೆ ₹75 ಲಕ್ಷ ಮಂಜೂರು ಮಾಡಿದ್ದೇನೆ. ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದು ವಿವರಿಸಿದರು.

- ಸೀತೂರು ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ 8 ಗ್ರಾಮ ಪಂಚಾಯಿತಿಗಳಿಗೆ ತಲಾ ₹45 ಲಕ್ಷ ರು. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಸೋಮವಾರ ಸೀತೂರು ಗ್ರಾಪನ ₹54 ಲಕ್ಷ ವೆಚ್ಚದ ನೂತನ ಕಟ್ಟಡ ಹಾಗೂ ಘನ ತ್ಯಾಜ್ಯ ವಿಲೇವಾರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಸೀತೂರು ಗ್ರಾಪಂ ವ್ಯಾಪ್ತಿಯ ಕುದುರೆಗುಂಡಿ- ಹಳ್ಳಿಬೈಲು ರಸ್ತೆ ಅಭಿವೃದ್ದಿಗೆ ₹4.50 ಕೋಟಿ, ಶೇಡ ಗಾರು ಪಿಕಪ್ ಗೆ ₹34 ಲಕ್ಷ, ಬೆಳ್ಳೂರು ವೆಟನರಿ ಆಸ್ಪತ್ರೆಗೆ ₹34 ಲಕ್ಷ, ಶಾಲೆ- ಅಂಗನವಾಡಿಗೆ ₹25 ಲಕ್ಷ ಬಿಡುಗಡೆ ಮಾಡಿದ್ದೆ. ಈ ಭಾಗದ ಗ್ರಾಮೀಣ ರಸ್ತೆ ಅಭಿವೃದ್ದಿಗೆ ₹75 ಲಕ್ಷ ಮಂಜೂರು ಮಾಡಿದ್ದೇನೆ. ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದು ವಿವರಿಸಿದರು.

ಕುದುರೆಗುಂಡಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರಾಗಿದೆ. ನಾನು ಶಾಸಕನಾದ ಮೇಲೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಶೃಂಗೇರಿಯಲ್ಲಿ ₹32 ಕೋಟಿ ವೆಚ್ಚದಲ್ಲಿ 100 ಹಾಸಿಗೆ ಆಸ್ಪತ್ರೆಗೆ ಶಂಕು ಸ್ಥಾಪನೆ ಮಾಡಿದ್ದೇನೆ. ಕೊಪ್ಪದಲ್ಲಿ ತಾಯಿ-ಮಕ್ಕಳ ಆಸ್ಪತ್ರೆಗೆ ₹12 ಕೋಟಿ ಮಂಜೂರಾಗಿದೆ. ಜಯಪುರದಲ್ಲಿ ₹12 ಕೋಟಿ ವೆಚ್ಚದಲ್ಲಿ ಸಮುದಾಯ ಆಸ್ಪತ್ರೆ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ ಆಗಿದೆ ಎಂದರು.

ಕಾಡು ಪ್ರಾಣಿ ಹಾಗೂ ಮನುಷ್ಯರ ನಡುವೆ ಸಂಘರ್ಷದಿಂದ ಶೃಂಗೇರಿ ಕ್ಷೇತ್ರದಲ್ಲಿ 9 ಜನರನ್ನು ಕಳೆದುಕೊಂಡಿದ್ದೇವೆ. ಪ್ರತಿ ಕುಟುಂಬಕ್ಕೂ ₹15 ರಿಂದ 20 ಲಕ್ಷ ಪರಿಹಾರ ನೀಡಲಾಗಿದೆ. ಜೊತೆಗೆ ನಾನು ವೈಯ್ಯಕ್ತಿಕವಾಗಿಯೂ ಹಣ ನೀಡಿದ್ದೇನೆ. ಇಡೀ ರಾಜ್ಯದಲ್ಲಿ ಕಾಡು ಪ್ರಾಣಿಗಳಿಂದ 60 ರಿಂದ 70 ಜನ ಬಲಿಯಾಗಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ 5 ಪುಂಡ ಆನೆ ಸೆರೆಯ ಹಿಡಿಯಲಾಗಿದೆ. ಇನ್ನೂ 4 ರಿಂದ 5 ಆನೆಯನ್ನು ಸೆರೆ ಹಿಡಿಯಲಾಗುವುದು ಎಂದರು.

ಜಲ ಜೀವನ್ ಮಿಷನ್ ಯೋಜನೆಯಡಿ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕಿನ ಜನರಿಗೆ ನೀರು ನೀಡಲು 60 ಕೋಟಿ ರು. ಮಂಜೂರಾಗಿದೆ. ಅಲ್ಲದೆ 3 ತಾಲೂಕುಗಳಲ್ಲಿ ಭದ್ರಾ, ತುಂಗಾ ನದಿಯಿಂದ ಶಾಶ್ವತ ಕುಡಿಯುವ ನೀರಿಗಾಗಿ ₹700 ಕೋಟಿ ಮಂಜೂರಾಗಿದೆ.ಈ ಕಾಮಗಾರಿಗಳು ಮುಗಿದರೆ ಮುಂದೆ ಶೃಂಗೇರಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ ಎಂದರು.

ಗ್ರಾಪಂ ಸದಸ್ಯ ಎನ್‌.ಪಿ.ರಮೇಶ ಮಾತನಾಡಿ, ಕಳೆದ 65 ವರ್ಷದ ಹಿಂದೆ ನಿರ್ಮಾಣಗೊಂಡಿದ್ದ ಗ್ರಾಮ ಪಂಚಾಯಿತಿ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿತ್ತು.2019 ರಲ್ಲಿ ಶಾಸಕ ಟಿ.ಡಿ.ರಾಜೇಗೌಡ ಶಂಕುಸ್ಥಾಪನೆ ಮಾಡಿದ್ದರು. ಶಾಸಕರು ₹25 ಲಕ್ಷ ಮಂಜೂರು ಮಾಡಿದ್ದಾರೆ. ಇನ್ನೂ ಕೆಲಸಗಳು ಬಾಕಿ ಇದೆ. 65 ವರ್ಷದಿಂದ ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕೆಲಸ ಮಾಡಿದವರನ್ನು ನೆನಪಿಸಿಕೊಳ್ಳಬೇಕಾಗಿದೆ. ಈ ಭಾಗದಲ್ಲಿ ಗ್ರಾಮೀಣ ರಸ್ತೆ ಹಾಳಾಗಿದೆ. ವಿದ್ಯುತ್ ಸಮಸ್ಯೆ ಇದೆ. 33 ಕೆ.ವಿ. ಪವರ್ ಸ್ಛೇಷನ್ ಈ ಭಾಗಕ್ಕೆ ಮಂಜೂರು ಮಾಡಿಸಿಕೊಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಗ್ರಾಪಂ ಸದಸ್ಯ ಎಚ್.ಇ.ದಿವಾಕರ್ ಮಾತನಾಡಿ, ಸೀತೂರು ಗ್ರಾಮ ಪಂಚಾಯಿತಿಯಲ್ಲಿ 7 ಗ್ರಾಮಗಳಿದ್ದು 6 ಸಾವಿರ ಜನ ಸಂಖ್ಯೆ ಇದೆ. ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಶಾಸಕ ರಾಜೇಗೌಡರು ಅನುದಾನ ನೀಡಿದ್ದಾರೆ. ಸೀತೂರು ಗ್ರಾಮ ಪಂಚಾಯಿತಿಯಲ್ಲಿ 32 ಮಿನಿ ನೀರು ಸರಬರಾಜು ಯೋಜನೆ ಇದೆ. ಗ್ರಾಪಂ ಅನುದಾನದಲ್ಲಿ ಮೋಟರ್ ರಿಪೇರಿ, ವಿದ್ಯುತ್ ಬಿಲ್ ಕಟ್ಟಲು ಖರ್ಚಾಗುತ್ತದೆ.ಆದ್ದರಿಂದ ಗ್ರಾಪಂ ಅನುದಾನ ಜಾಸ್ತಿ ಮಾಡಬೇಕು. ಕೊಳವೆ ಬಾವಿ ಜಾಸ್ತಿ ಬೇಕು ಎಂದರು.

ಇದೇ ಸಂದರ್ಭದಲ್ಲಿ ಗ್ರಾಪಂ ಸ್ಥಾಪಕ ಅಧ್ಯಕ್ಷ ಎಸ್.ಡಿ.ವಿ.ಗೋಪಾಲರಾವ್ ಹಾಗೂ ಇತರರನ್ನು ಅಭಿನಂದಿಸಲಾಯಿತು.

ಸಭೆಯಲ್ಲಿ ಸೀತೂರು ಗ್ರಾಪಂ ಅಧ್ಯಕ್ಷೆ ಎಂ.ಎಸ್. ರೇಖಾ, ಉಪಾಧ್ಯಕ್ಷೆ ಪ್ರೇಮ, ಶೃಂಗೇರಿ ಕ್ಷೇತ್ರ ಎಪಿಎಂಸಿ ಅಧ್ಯಕ್ಷ ಎಸ್‌.ಡಿ.ರಾಜೇಂದ್ರ, ಮಾಜಿ ಮಂಡಲ ಪ್ರಧಾನ ಎಸ್‌.ಡಿ.ವಿ.ಗೋಪಾಲರಾವ್, ಸೀತೂರು ಸಹಕಾರ ಸಂಘದ ಅಧ್ಯಕ್ಷ ಬೆಮ್ಮನೆ ಮೋಹನ್,ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದೀಪ್, ಗ್ರಾಪಂ ಸದಸ್ಯರಾದ ಎಸ್‌.ಉಪೇಂದ್ರ ರಾವ್, ಎಚ್‌.ಎಲ್. ವಿಜಯ, ಬಿ.ಆರ್.ಸಿದ್ದಪ್ಪಗೌಡ, ಸುಜಾತಾ, ದಾಮಿನಿ, ಪಿ.ಕವಿತ,ತಾಪಂ ಇ.ಒ. ನವೀನ್ ಕುಮಾರ್, ಎಂಜಿನಿಯರ್ ಸಾಗರ್, ನರೇಗ ಯೋಜನೆ ಸಹಾಯಕ ನಿರ್ದೇಶಕ ಮನೀಶ್, ಪಿಡಿಒ ಶ್ರೀನಿವಾಸ್, ಕಾರ್ಯದರ್ಶಿ ನವೀನ್ ಕುಮಾರ್, ಉಪೇಂದ್ರ ರಾವ್, ಅನಿಲ್ ಕುಮಾರ್‌ ಇದ್ದರು.

-- ಬಾಕ್ಸ್ --

ಪ್ರತಿಪಕ್ಷಗಳಿಂದ ಅಪಪ್ರಚಾರ:

ನನ್ನ ಕ್ಷೇತ್ರದ ಜನರಿಗೆ ಕೆಟ್ಟ ಹೆಸರು ತರುವ ಯಾವುದೇ ಕೆಲಸ ನಾನು ಮಾಡಿಲ್ಲ. ನನ್ನ ಮೇಲೆ ವಿರೋಧ ಪಕ್ಷಗಳ ಮುಖಂಡರು ಅಪಪ್ರಚಾರ ಮಾಡಿದರು.ಇದನ್ನು ಯಾರೂ ನಂಬಬಾರದು. ಈಗಾಗಲೇ ಕೊಪ್ಪದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಸತ್ಯ ಶೋಧನೆ ಸಭೆ ಮಾಡಿದ್ದೇವೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

-- ಬಾಕ್ಸ್ --

ರಾಣಿ ಚೆನ್ನಮ್ಮ ಶಾಲೆಗೆ ಹಣ ಮಂಜೂರು

ಸೀತೂರು ಗ್ರಾಮಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ₹22 ಕೋಟಿ ಮಂಜೂರಾಗಿದೆ .ಆದರೆ, ಜಾಗದ ಸಮಸ್ಯೆಯಿಂದ ಕಾಮಗಾರಿ ನೆನಗುದಿಗೆ ಬಿದ್ದಿದೆ. ಜಾಗ ಹುಡುಕಿಕೊಟ್ಟರೆ ತಕ್ಷಣ ಕಾಮಗಾರಿ ಮುಂದುವರಿಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.

PREV

Recommended Stories

ಮಕ್ಕಳ ಪ್ರತಿಭೆಗೆ ಚಿತ್ರಕಲಾ ಸ್ಪರ್ಧೆ ವೇದಿಕೆ
ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದಕ್ಕೆ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿದೆ: ಎಚ್‌.ಎನ್.ಅಶೋಕ್