ಗಂಗಾಮತಸ್ಥ ಸಮಾಜದ ದೇವಾಲಯಗಳ ಅಭಿವೃದ್ದಿಗೆ 45 ಲಕ್ಷ ರು. ಅನುದಾನ: ಶಾಸಕ ಕೆ.ಎಸ್‌.ಆನಂದ

KannadaprabhaNewsNetwork | Published : Jan 22, 2024 2:16 AM

ಸಾರಾಂಶ

ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಕೆ.ಎಸ್‌.ಆನಂದ್‌ ಮಾತಾನಾಡಿ, ಗಂಗಾಮತಸ್ಥ ಸಮಾಜದ ಅನೇಕ ಗ್ರಾಮಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದು, ಆ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಕಡೂರು

ಕ್ಷೇತ್ರದಲ್ಲಿರುವ ಗಂಗಾಮತಸ್ಥ ಸಮಾಜದ ದೇವಾಲಯಗಳ ಅಭಿವೃದ್ದಿಗಾಗಿ ₹45 ಲಕ್ಷ ಅನುದಾನ ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತದಿಂದ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಂಗಾಮತಸ್ಥ ಸಮಾಜದ ಅನೇಕ ಗ್ರಾಮಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದು, ಆ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಮಾಜದ ನಿರ್ದಿಷ್ಠ ದೇವಾಲಯಗಳು ಅಭಿವೃದ್ದಿಗೊಳ್ಳದೆ ಇರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ತಮ್ಮ ಅನುದಾನದ ಅಡಿಯಲ್ಲಿ ತಾಲೂಕಿನ ತಂಗಲಿ, ಅಂಚೇಚೋಮನಹಳ್ಳಿ, ಮಲ್ಲಿದೇವಿಹಳ್ಳಿ ಗ್ರಾಮದಲ್ಲಿ ದೇವಾಲಯ ಅಭಿವೃದ್ಧಿಗೆ ತಲಾ ₹10 ಲಕ್ಷ, ತುರುವನಹಳ್ಳಿ ಗ್ರಾಮದಲ್ಲಿ ₹5 ಲಕ್ಷ, ಮತಿಘಟ್ಟ ಗ್ರಾಮದಲ್ಲಿ ₹3 ಲಕ್ಷ ನೀಡಿದ್ದು, ಕಡೂರು ಪಟ್ಟಣದಲ್ಲಿನ ಸಮಾಜದ ಸಮುದಾಯಭವನದ ಜೀರ್ಣೋಧ್ದಾರಕ್ಕಾಗಿ ₹15 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಗಂಗಾಮತಸ್ಥ ಸಮಾಜವು ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದು, ಮೀನುಗಾರಿಕೆ ಇಲಾಖೆಯಿಂದ ಸೌಲಭ್ಯ ದೊರಕಿಸಲಾಗುವುದು. ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಪಟ್ಟಣದಲ್ಲಿ ಉತ್ತಮ ನಿವೇಶನ ಗುರುತಿಸಿ ಸುಸಜ್ಜಿತ ಸಮುದಾಯಭವನ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಶ್ರೇಷ್ಠವಾದ ಗಂಗಾಮತಸ್ಥ ಸಮಾಜವು ಪೂಜಾ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂದೆ ಬರಲು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಮಾಜದ ಅಭಿವೃದ್ಧಿಗೆ ರಾಜಕಾರಣ ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಸಮಾಜದ ಅಭಿವೃದ್ಧಿಗೊಳಿಸಬೇಕಿದೆ ಎಂದರು.

12ನೇ ಶತಮಾನದಲ್ಲಿ ಶೋಷಿತ ವರ್ಗಗಳ ಹಾಗೂ ಕೆಳ ವರ್ಗದವರ ಮಹಿಳೆಯರ ಮೇಲಿನ ಶೋಷಣೆಯನ್ನು ಅಂಬಿಗರ ಚೌಡಯ್ಯ ಅವರು ಕಟುವಾಗಿ ವಿರೋಧಿಸುತ್ತಿದ್ದರು. ಯಾವುದೇ ಒಂದು ವಿಷಯ ನಿಷ್ಠುರವಾಗಿ ಸತ್ಯದ ಹಾದಿಯಲ್ಲಿ ಅಂಬಿಗರ ಚೌಡಯ್ಯ ಹೇಳುತ್ತಿದ್ದರು. ಸಮಾಜದಲ್ಲಿ ನಡೆಯುತ್ತಿದ್ದ ಮೂಢನಂಬಿಕೆಗಳನ್ನು ತಿದ್ದುವ ಕೆಲಸ, ಕಾಯಕಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಮುಂದಿನ ದಿನಗಳಲ್ಲಿ ಗಂಗಾಮತಸ್ಥ ಸಮಾಜದ ವತಿಯಿಂದ ಹಮ್ಮಿಕೊಂಡಿರುವ ಅದ್ಧೂರಿ ಅಂಬಿಗರ ಚೌಡಯ್ಯ ಜಯಂತಿಯು ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಲಿದ್ದು, ಆ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕನಾಗಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಗಂಗಾಮತಸ್ಥ ಸಮಾಜದ ರಾಜ್ಯ ನಿರ್ದೇಶಕ ಎನ್.ವಿ. ಕುಮಾರ್ ಮಾತನಾಡಿ, ಒಗ್ಗೂಡುವ ಮೂಲಕ ಸಮಾಜದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು. ಹಿಂದುಳಿದ ಸಮಾಜಗಳ ಪರವಾಗಿರುವ ಶಾಸಕರಿಗೆ ಎಲ್ಲರ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಕ ಬಿದರೆ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ತಹಸೀಲ್ದಾರ್ ಮಂಜುನಾಥ್, ಪುರಸಭೆ ಸದಸ್ಯೆ ಜ್ಯೋತಿ ಆನಂದ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಅರೇಹಳ್ಳಿ ಮಲ್ಲಿಕಾರ್ಜುನ್, ಬ್ಲಾಕ್‌ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರೇವತಿ ನಾಗರಾಜ್, ಮಹೇಶ್, ರಂಗಸ್ವಾಮಿ, ಎನ್.ಪಿ.ಉಮೇಶ್, ಫೈನಾನ್ಸ್ ಮಂಜುನಾಥ್, ಕರಲಿಂಗಪ್ಪ, ಸಿ.ಎಚ್.ಲೋಕೇಶ್, ಬೀರೂರು ಶ್ರೀನಿವಾಸ್, ಉಡುಗೆರೆ ನಂಜುಂಡಪ್ಪ, ಪ್ರಕಾಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತಿತರಿದ್ದರು.

Share this article