ಶಿವಕುಮಾರ ಕುಷ್ಟಗಿ
ಗದಗ: ರೈತ ಉತ್ಪಾದನಾ ಗುಂಪಿನ ಸದಸ್ಯರ ಮೂಲಕ ಕಡಲೆ ಮಾರಾಟ ಮಾಡಿದ ರೈತರಿಗೆ ವ್ಯಾಪಾರಿ ನಾಲ್ಕೈದು ತಿಂಗಳಾದರೂ ನಯಾಪೈಸೆ ನೀಡಿಲ್ಲ. ಸುಮಾರು ₹6.5 ಕೋಟಿ ಬಾಕಿ ಉಳಿದಿದೆ!ಪ್ರತಿ ಗ್ರಾಮಗಳಲ್ಲಿ ತಾಪಂ ಅಡಿಯಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯ ಅಡಿಯಲ್ಲಿ ರೈತ ಉತ್ಪಾದಕರ ಗುಂಪುಗಳನ್ನು ರಚನೆ ಮಾಡಲಾಗಿದೆ. ಅವುಗಳ ಮೂಲಕ ರೈತರು ಬೆಳೆದ ಬೆಳೆಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಖರೀದಿದಾದರು ರೈತರಿದ್ದಲ್ಲಿಗೇ ಬಂದು ಖರೀದಿ ಮಾಡಿ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಬೇಕು. ಇದರಿಂದ ರೈತರಿಗೆ ಬಾಡಿಗೆ, ದಲಾಲಿ, ಹಮಾಲಿ ಉಳಿಯುತ್ತದೆ ಎನ್ನುವ ಕಾರಣಕ್ಕೆ ಈ ಯೋಜನೆಗೆ ರೈತರು ಹೆಚ್ಚು ಆಸಕ್ತಿ ತೋರಿ ಕಡಲೆ ಮಾರಾಟ ಮಾಡಿದ್ದರು. ಆದರೆ, ವ್ಯಾಪಿಗಳಿಂದ ರೈತರಿಗೆ ಮೋಸವಾದ ವಾಸನೆ ಬರುತ್ತಿದೆ.
6.5 ಕೋಟಿ ಹಣ ಬಾಕಿ: ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಗದಗ ಮತ್ತು ಮುಂಡರಗಿ ತಾಲೂಕಿನ ವಿವಿಧ ಗ್ರಾಮಗಳ 450 ರೈತರಿಂದ ಕಡಲೆಯನ್ನು ನೂತನ ಎಂಟರ್‌ಪ್ರೈಸಸ್ ಎಂಬ ಸಂಸ್ಥೆಯವರು ಖರೀದಿಸಿದ್ದಾರೆ. ಖರೀದಿಯಾಗಿ 6 ತಿಂಗಳು ಕಳೆದಿದೆ, ರೈತರಿಗೆ ಬರಬೇಕಾದ ₹6.5 ಕೋಟಿ ನೀಡದೇ ಸಂಸ್ಥೆಯವರು ಸತಾಯಿಸುತ್ತಿದ್ದಾರೆ. ರೈತರು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.ಅನ್ಯಾಯ ಹೇಗೆ?: ಗದಗ ತಾಲೂಕಿನಲ್ಲಿ ಕಳೆದ ಸಾಲಿನಲ್ಲಿಯೇ ರೈತ ಉತ್ಪಾದಕರ ಗುಂಪುಗಳ ಸದಸ್ಯರ ಮೂಲಕ ದಾವಣಗೆರೆ ಮೂಲದ ಕಂಪನಿಯ ವ್ಯಕ್ತಿಯೋರ್ವರು ಗೋವಿನಜೋಳವನ್ನು ಖರೀದಿಸಿದ್ದು, ಸಮಯಕ್ಕೆ ಸರಿಯಾಗಿ ರೈತರಿಗೆ ಹಣವನ್ನು ನೀಡಿದ್ದಾರೆ. ಇದರಿಂದ ರೈತರಿಗೆ ಹೆಚ್ಚಿನ ವಿಶ್ವಾಸ ಮೂಡಿದೆ. ರೈತ ಉತ್ಪಾದಕರ ಗಂಪಿನ ಸದಸ್ಯರ ಹೊರತಾಗಿಯೂ ಹಲವಾರು ರೈತರ ನೇರ ಸಂಪರ್ಕ ಪಡೆದುಕೊಂಡಿದ್ದು, ಆ ಮೂಲಕ ಪ್ರಸಕ್ತ ಸಾಲಿನಲ್ಲಿ ಕಡಲೆ ಖರೀದಿ ಮಾಡಿದ್ದಾರೆ. ಆದರೆ ಹಣವನ್ನೇ ನೀಡಿಲ್ಲ.
₹6.5 ಕೋಟಿ ಬಾಕಿ ಉಳಿಸಿಕೊಂಡಿರುವ ವ್ಯಕ್ತಿ ಪ್ರಭಾವಿಯೇ ಆಗಿದ್ದಾರೆ ಎನ್ನುತ್ತಾರೆ ರೈತರು. ಈ ವಿಷಯವನ್ನು ರೈತರು ಈಗಾಗಲೇ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಪೊಲೀಸ್ ವರಿಷ್ಠಾಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಅದೇಕೋ ಜಿಲ್ಲಾಡಳಿತ ಇದನ್ನು ಗೌಪ್ಯವಾಗಿಡಲು ಪ್ರಯತ್ನ ಮಾಡುತ್ತಿದೆ. ಜ. 14ರಂದು ಖರೀದಿ ಮಾಡಿದ ಕಂಪನಿಯ ವ್ಯಕ್ತಿಯನ್ನು ಗದಗಕ್ಕೆ ಕರೆಯಿಸಿ ಚರ್ಚಿಸಿದ್ದರೂ ಇದುವರೆಗೂ ಯಾವುದೇ ಪ್ರಗತಿಯೂ ಆಗಿಲ್ಲ. ರೈತರಿಗೆ ಹಣವೂ ಬಂದಿಲ್ಲ.ಯಾವ ರೈತರಿಗೆ ತೊಂದರೆ?: ಗದಗ ತಾಲೂಕಿನ ಅಂತೂರು, ಬೆಂತೂರು, ಕುರ್ತಕೋಟಿ, ನೀಲಗುಂದ, ಚಿಕ್ಕಹಂದಿಗೋಳ, ಶ್ಯಾಗೋಟಿ, ಅಸುಂಡಿ, ಬಿಂಕದಕಟ್ಟಿ, ಕದಡಿ, ಬಳಗಾನೂರು, ಮುಂಡರಗಿ ತಾಲೂಕಿನ ಹಳ್ಳಿಗುಡಿ, ಹರ್ಲಾಪುರ, ತಿಮ್ಮಾಪುರ ಗ್ರಾಮಗಳ 400ಕ್ಕೂ ಅಧಿಕ ರೈತರು ಈ ಅನ್ಯಾಯದಿಂದಾಗಿ ತತ್ತರಿಸಿ ಹೋಗಿದ್ದಾರೆ. ಈ ವಿಷಯವಾಗಿ ಸಧ್ಯದಲ್ಲಿಯೇ ರೈತರು ಪೊಲೀಸ್ ಠಾಣೆಯ ಮೆಟ್ಟಿಲೇರುವ ಸಾಧ್ಯತೆ ನಿಚ್ಚಳವಾಗಿದೆ.
ಕಳೆದ ಸಾಲಿನ ಗೋವಿನಜೋಳವನ್ನು ರೈತರ ಉತ್ಪಾದನಾ ಗುಂಪುಗಳ ಸದಸ್ಯರ ಮೂಲಕ ಖರೀದಿಸಿ ಸರಿಯಾಗಿ ಹಣ ನೀಡಿದ್ದರು. ಆದರೆ ಪ್ರಸಕ್ತ ಖರೀದಿಸಿದ ಕೆಲವು ಗ್ರಾಮಗಳಲ್ಲಿ ಗುಂಪಿನ ಸದಸ್ಯರನ್ನು ಸಂಪರ್ಕಿಸದೇ ನೇರವಾಗಿ ಖರೀದಿಸಿದ್ದಾರೆ. ಇನ್ನು ಕೆಲವು ಗ್ರಾಮಗಳಲ್ಲಿ ಗುಂಪಿನ ಸದಸ್ಯರ ಮೂಲಕವೇ ಖರೀದಿಸಿದ್ದಾರೆ. ಆದರೆ ಹಣವನ್ನು ನೀಡದೇ ಇರುವುದರಿಂದಾಗಿ ರೈತರು ಪ್ರತಿನಿತ್ಯವೂ ರೈತ ಉತ್ಪಾದನಾ ಗುಂಪಿನ ಸದಸ್ಯರನ್ನು ಹಣಕ್ಕಾಗಿ ಕೇಳುವಂತಾಗಿದೆ. ಆದರೆ ಗುಂಪಿನ ಸದಸ್ಯರು ಏನು ಮಾಡಬೇಕು ದಿಕ್ಕೋ ತೋಚದಂತಾಗಿದ್ದಾರೆ. ಈ ವಿಷಯವಾಗಿ ಹಲವಾರು ರೈತರು ತಮಗೆ ಆಗುತ್ತಿರುವ ತೊಂದರೆಯ ಬಗ್ಗೆ ಖುದ್ದು ಬಂದು ಸಂಪರ್ಕ ಮಾಡಿ, ಮಾಹಿತಿ ನೀಡಿದ್ದಾರೆ. ಇದು ಬೇರೆ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಈ ಕುರಿತು ಪ್ರಕರಣ ದಾಖಲಿಸಿದಲ್ಲಿ ತನಿಖೆ ನಡೆಸಲಾಗುವುದು ಎಂದು ಗದಗ ಎಸ್‌ಪಿ ಬಿ.ಎಸ್. ನೇಮಗೌಡ್ರ ಹೇಳಿದರು.