ಮಹಾದಾಸೋಹಕ್ಕೆ ೪೫೦ ಕ್ವಿಂಟಲ್‌ ಜಿಲೇಬಿ, 5 ಲಕ್ಷ ಮಿರ್ಚಿ!

KannadaprabhaNewsNetwork | Published : Jan 15, 2025 12:45 AM

ಸಾರಾಂಶ

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಬರುವ ಲಕ್ಷೋಪ ಲಕ್ಷ ಭಕ್ತರಿಗೆ ಪ್ರಸಾದ ಭೋಜನದ ವ್ಯವಸ್ಥೆಗೆ ಭರ್ಜರಿ ಸಿದ್ಧತೆ ಮಾಡಲಾಗುತ್ತಿದೆ.

ಗವಿಮಠದ ಜಾತ್ರೆಯ ದಾಸೋಹ ಪರಂಪರೆಯಲ್ಲಿಯೇ ಇದು ದಾಖಲೆ ಲೆಕ್ಕಾಚಾರ

16 ಕ್ವಿಂಟಲ್‌ ಒಳ್ಳೆಣ್ಣೆ, 3 ಕ್ವಿಂಟಲ್ ತುಪ್ಪ, 130 ಕ್ವಿಂಟಲ್ ಸಾವಯವ ಬೆಲ್ಲ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಬರುವ ಲಕ್ಷೋಪ ಲಕ್ಷ ಭಕ್ತರಿಗೆ ಪ್ರಸಾದ ಭೋಜನದ ವ್ಯವಸ್ಥೆಗೆ ಭರ್ಜರಿ ಸಿದ್ಧತೆ ಮಾಡಲಾಗುತ್ತಿದೆ. ಈ ವರ್ಷ ರಥೋತ್ಸವದ ದಿನ ಭಕ್ತರಿಗೆ ಜಿಲೇಬಿಯ ಸವಿ ಸವಿಯುವ ಸುಸಂದರ್ಭ. ಇದಕ್ಕಾಗಿ ಭರ್ಜರಿ ೪೫೦ ಕ್ವಿಂಟಲ್‌ ಜಿಲೇಬಿ (14 ಲಕ್ಷ) ಸಿದ್ಧ ಮಾಡುವ ಕಾರ್ಯ ಭರದಿಂದ ಸಾಗಿದೆ. ಹಾಗೆಯೇ ರಥೋತ್ಸವದ ಮಾರನೇ ದಿನ ಪ್ರತಿ ಬಾರಿಯಂತೆ 5 ಲಕ್ಷ ಮಿರ್ಚಿ ಭಜ್ಜಿಯನ್ನು ಮಾಡುವ ಸಿದ್ಧತೆ ನಡೆಯುತ್ತಿದೆ.

ನಾಡಿನ ಜಾತ್ರೆಗಳ ಪರಂಪರೆಯ ಮಹಾದಾಸೋಹದಲ್ಲಿ ಈ ಲೆಕ್ಕಾಚಾರ ದಾಖಲೆಯಾಗಿದೆ ಎನ್ನುವುದು ಗಮನಾರ್ಹ ಸಂಗತಿ.

೪೫೦ ಕ್ವಿಂಟಲ್‌ ಜಿಲೇಬಿ:

ಜಾತ್ರಾ ಮಹೋತ್ಸವಕ್ಕೆ ಪ್ರತಿ ವರ್ಷವೂ ಒಂದಿಲ್ಲೊಂದು ಸಾಹಸಕ್ಕೆ ಕೈ ಹಾಕುವ ಸಿಂಧನೂರಿನ ಎಪಿಎಂಸಿ ವರ್ತಕರು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ವಿಜಯಕುಮಾರ ಅವರ ನೇತೃತ್ವದಲ್ಲಿ ಕಳೆದ ವರ್ಷ 30 ಟನ್ ಶೇಂಗಾ ಹೋಳಿಗೆ ಮಾಡಿ, ದಾಖಲೆ ಮಾಡಿದ್ದರು. ಈ ವರ್ಷ ೪೫೦ ಕ್ವಿಂಟಲ್‌ ಜಿಲೇಬಿ ತಯಾರು ಮಾಡಿ, ಬಡಿಸಲಿದ್ದಾರೆ.

ಈಗಾಗಲೇ ಗವಿಮಠದ ಮಹಾದಾಸೋಹದ ಆವರಣದಲ್ಲಿ ದೊಡ್ಡದಾದ ಟೆಂಟ್ ಹಾಕಲಾಗಿದ್ದು, ಅಲ್ಲಿ ಜಿಲೇಬಿ ತಯಾರಿಸುವ ಕಾರ್ಯವನ್ನು ಹಗಲು ಇರಳು ಮಾಡುತ್ತಿದ್ದಾರೆ.

ರಥೋತ್ಸವದ ದಿನದಂದು ಪ್ರಸಾದದ ಜೊತೆಗೆ ಜಿಲೇಬಿ ಬಡಿಸಲಾಗುತ್ತದೆ. ಎರಡು ದಿನಗಳ ಕಾಲವೂ ಈ ಜಿಲೇಬಿಯನ್ನು ಭಕ್ತರು ಸವಿಯಲಿದ್ದಾರೆ.

ಸುಮಾರು ೫೦ ಕ್ವಿಂಟಲ್ ಮೈದಾ ಹಿಟ್ಟು, ೧೩೦ ಕ್ವಿಂಟಲ್‌ ಸಾವಯವ ಬೆಲ್ಲ, ೧೬೦೦ ಲೀಟರ್‌ ಎಣ್ಣೆ, ೩೦೦ ಲೀಟರ್‌ ತುಪ್ಪ, ೨೦ ಕೆಜಿ ಯಾಲಕ್ಕಿ, ೧೫೦ ಲೀಟರ್ ಮೊಸರನ್ನು ಇದಕ್ಕೆ ಬಳಸಲಾಗುತ್ತಿದೆ.

ಇದೆಲ್ಲವನ್ನು ಒಳಗೊಂಡು ಸುಮಾರು ೪೫೦ ಕ್ವಿಂಟಲ್‌ ಜಿಲೇಬಿಯನ್ನು ತಯಾರಿಸಲಾಗುತ್ತದೆ. ಸುಮಾರು ೧೪ ಲಕ್ಷ ಜಿಲೇಬಿ ತಯಾರಾಗಲಿವೆ.

ಇದಕ್ಕಾಗಿ ೧೨೦ ಬಾಣಸಿಗರು, ಅವರಿಗೆ ಸಹಾಯ ಮಾಡಲು ೧೫೦ ಜನ ಹಾಗೂ ಕಾರ್ಯಕರ್ತರು ನಿರಂತರವಾಗಿ ಸೇವೆ ಮಾಡುತ್ತಿದ್ದಾರೆ. ಈ ಜಿಲೇಬಿಗಳನ್ನು ತಯಾರಿಸಿದ ನಂತರ ವ್ಯವಸ್ಥಿತವಾಗಿಡಲು ೧೩೦೦ ಟ್ರೇಗಳನ್ನು ಸಿಂಧನೂರಿನ ಮಹಾನಂದಿ ಪ್ಲಾಸ್ಟಿಕ್ ಮಾಲೀಕ ಲಕ್ಷ್ಮಣ್ ಶೆಟ್ಟಿ ಉಚಿತವಾಗಿ ನೀಡಿದ್ದಾರೆ.

5 ಲಕ್ಷ ಮಿರ್ಚಿ:

ರಥೋತ್ಸವದ ಮಾರನೆ ದಿನ ಬರುವ ಭಕ್ತರಿಗೆ ಬರೋಬ್ಬರಿ 5 ಲಕ್ಷ ಮಿರ್ಚಿಯನ್ನು ತಯಾರು ಮಾಡಿ, ಬಡಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕವಾಗಿ ಸುಮಾರು ನಾಲ್ಕೈದು ನೂರು ಜನರು ಹಗಲಿರುಳು ಶ್ರಮಿಸುತ್ತಾರೆ.

ಕಳೆದ ಐದಾರು ವರ್ಷಗಳಿಂದ ಪ್ರತಿ ವರ್ಷವೂ ರಥೋತ್ಸವ ಮಾರನೇಯ ದಿನ ಮಿರ್ಚಿ ಭಜ್ಜಿ ನೀಡಲಾಗುತ್ತದೆ.

ಇದಕ್ಕಾಗಿ 25 ಕ್ವಿಂಟಲ್ ಕಡಲೆ ಹಿಟ್ಟು, 20 ಕ್ವಿಂಟಲ್ ಹಸಿಮೆಣಸಿನಕಾಯಿ, 10 ಬ್ಯಾರಲ್‌ ಒಳ್ಳೆ ಎಣ್ಣೆ ಬಳಕೆ ಮಾಡಲಾಗುತ್ತದೆ. 25 ಕೆಜಿ ಅಜವಾನ್, 20 ಕೆಜಿ ಸೋಡಾಪುಡಿ ಬಳಕೆ ಮಾಡಲಾಗುತ್ತದೆ.

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಮೊದಲೆರಡೂ ದಿನ ಜಿಲೇಬಿ ಮಾಡಿ, ಬಡಿಸಲಾಗುತ್ತದೆ. ಇದಕ್ಕಾಗಿ ಹದಿನಾಲ್ಕು ಲಕ್ಷ ಜಿಲೇಬಿ ತಯಾರಿಸುವ ಕಾರ್ಯ ನಡೆಯುತ್ತಿದೆ ಎನ್ನುತ್ತಾರೆ ದಾಸೋಹ ಉಸ್ತುವಾರಿ ರಾಮನಗೌಡ.

Share this article