ಕನ್ನಡಪ್ರಭ ವಾರ್ತೆ ಬೆಂಗಳೂರು
ಲೈಂಗಿಕ ಸಮಸ್ಯೆ ಪರಿಹಾರ ನೆಪದಲ್ಲಿ ₹48 ಲಕ್ಷ ಹಣ ಸುಲಿಗೆ ಮಾಡಿ ವಂಚಿಸಿದ್ದಾಗಿ ಆರೋಪಿಸಿ ನಾಟಿ ವೈದ್ಯನ ವಿರುದ್ಧ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರು ದಾಖಲಿಸಿದ್ದಾರೆ.ವಿಜಯ್ ಗುರೂಜಿ ಎಂಬುವರ ವಿರುದ್ಧ ಆರೋಪ ಬಂದಿದ್ದು, ಶಿವಮೊಗ್ಗ ಜಿಲ್ಲೆಯ ಸಾಫ್ಟ್‌ವೇರ್ ಉದ್ಯೋಗಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ವಂಚನೆ ಪ್ರಕರಣ ದಾಖಲಾದ ಬಳಿಕ ತಪ್ಪಿಸಿಕೊಂಡಿರುವ ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮೂರು ವರ್ಷಗಳಿಂದ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ತಂದೆ-ತಾಯಿ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ಪತ್ನಿ ಜತೆ ನಗರದಲ್ಲಿ ವಾಸವಾಗಿದ್ದೇನೆ. ಲೈಂಗಿಕ ಸಮಸ್ಯೆ ಸಲುವಾಗಿ ಕೆಂಗೇರಿ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಆಗ ಆಸ್ಪತ್ರೆಗೆ ತೆರಳುವಾಗ ಉಲ್ಲಾಳ ರಸ್ತೆಯ ಕೆಎಲ್‌ಇ ಕಾನೂನು ಮಹಾವಿದ್ಯಾಲಯ ಸಮೀಪ ಕಂಡು ಬಂದ ಆಯುರ್ವೇದಿಕ್ ಟೆಂಟ್ ಹೊರಗೆ ಬೋರ್ಡ್‌ನಲ್ಲಿ ಲೈಂಗಿಕ ಸಮಸ್ಯೆಗೆ ಶೀಘ್ರ ಪರಿಹಾರ ಎಂದಿತ್ತು. ಅಲ್ಲಿ ಹೋಗಿ ನನ್ನ ಕಷ್ಟವನ್ನು ಹೇಳಿದೆ. ಅಲ್ಲಿದ್ದ ಒಬ್ಬಾತ ನಮ್ಮ ವಿಜಯ್ ಗುರೂಜಿ ಅವರನ್ನು ಕರೆಸುತ್ತೇನೆ. ನಿಮಗೆ ಪರಿಹಾರ ನೀಡುತ್ತಾರೆಂದು ಭರವಸೆ ನೀಡಿದ್ದರು ಎಂದು ದೂರಿನಲ್ಲಿ ಹೇದ್ದಾರೆ.ನಂತರ ವಿಜಯ್ ಗುರೂಜಿ ಎಂಬುವವವರು ಟೆಂಟ್ ಬಳಿ ಕರೆಸಿ ಪರೀಕ್ಷಿಸಿ ಮೊದಲು ಒಂದು ಗ್ರಾಂ ತೂಕದ ದೇವರಾಜ್ ಬೂಟಿ ಎಂಬ ಹೆಸರಿನ ಔಷಧಿ ಯಶವಂತಪುರದಲ್ಲಿರುವ ವಿಜಯಲಕ್ಷ್ಮೀ ಆಯರ್ವೇದಿಕ್ ಶಾಪ್‌ನಲ್ಲಿ ಸಿಗಲಿದೆ. ಅದಕ್ಕೆ ₹1.6 ಲಕ್ಷ ಇರುತ್ತದೆ. ತೆಗೆದುಕೊಂಡು ಬನ್ನಿ. ಈ ಔಷಧಿ ಬೇರೆ ಎಲ್ಲೂ ಸಿಗುವುದಿಲ್ಲ, ಇದನ್ನು ನಾನು ಹರಿದ್ವಾರದಿಂದ ತರಿಸಿರುತ್ತೇನೆ. ಈ ಔಷಧಿಯನ್ನು ಖರೀದಿಗೆ ನಗದು ಪಾವತಿಸಬೇಕು ಹಾಗೂ ಬೇರೆ ಯಾರನ್ನು ಕರೆದುಕೊಂಡು ಹೋಗಕೂಡದು. ಹೋದರೆ ಔಷಧಿಗೆ ಯಾವುದೇ ಶಕ್ತಿ ಬರುವುದಿಲ್ಲವೆಂದು ಷರತ್ತು ವಿಧಿಸಿದ್ದರು. ಅಂತೆಯೇ ಆ ಆಯುರ್ವೇದಿಕ್ ಮಳಿಗೆಗೆ ಹೋಗಿ ಒಬ್ಬನೇ ಔಷಧಿ ಖರೀದಿಸಿದ್ದೆ ಎಂದು ಅಲವತ್ತುಕೊಂಡಿದ್ದಾರೆ.
ಹೀಗೆ ಹಂತ ಹಂತವಾಗಿ 48 ಲಕ್ಷ ರುಗೆ ಔಷಧಿ ಖರೀದಿಸಿದೆ. ಆದರೆ ಆ ಔಷಧಿಯಿಂದ ಯಾವುದೇ ಪ್ರಯೋಜನವಾಗಿಲ್ಲ. ನನಗೆ ಚಿಕಿತ್ಸೆ ನೆಪದಲ್ಲಿ ವಂಚಿಸಿರುವ ವಿಜಯ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.ಬಾಕ್ಸ್)0
1 ಗ್ರಾಂ ಔಷಧಿಗೆ ₹1.60 ಲಕ್ಷ ಪಾವತಿಯಶವಂತಪುರದ ವಿಜಯಲಕ್ಷ್ಮೀ ಆಯರ್ವೇದಿಕ್ ಅಂಗಡಿಯಲ್ಲಿ ದೇವರಾಜ್ ಬೂಟಿ ಎಂಬ ಔಷಧಿ ಖರೀದಿಸಿ ತಂದು ಗುರೂಜಿ ರವರನ್ನು ಭೇಟಿ ಮಾಡಿದೆ. ಯಾವ ರೀತಿ ಉಪಯೋಗಿಸಬೇಕೆಂದು ತಿಳಿಸಿದ್ದ. ಇದರ ಜೊತೆಗೆ ಭವನ ಬೂಟಿ ತೈಲ ಎಂಬ ಆಯಿಲ್ ನೀಡಿದ್ದು ಈ ಆಯಿಲ್ ಒಂದು ಗ್ರಾಂಗೆ ₹76 ಸಾವಿರ ಎಂದಿದ್ದರು. ಒಟ್ಟು 15 ಗ್ರಾಂ ಆಯಿಲ್ ಖರೀದಿಸುವಂತೆ ಸೂಚಿಸಿದರು. ಅಂತೆಯೇ ನಾನು ಪ್ರತಿ ವಾರಕ್ಕೆ ಒಂದು ಗ್ರಾಂ ನಂತೆ ₹17 ಲಕ್ಷಕ್ಕೆ ಖರೀದಿಸಿದೆ. ನಂತರ ಅವರು ನನಗೆ ಮೂರು ಬಾರಿ ದೇವರಾಜ್ ಬೂಟಿ ಎಂಬ ಹೆಸರಿನ ಪೌಡರ್ ಅನ್ನು ಹೆಚ್ಚುವರಿಯಾಗಿ ನೀಡಿದ್ದರು. ಇದಕ್ಕೆ ತಲಾ 1 ಗ್ರಾಂಗೆ ₹1.60 ಲಕ್ಷ ಎಂದು ತಿಳಿಸಿದ್ದರು. ಆಗ ನನ್ನ ಬಳಿ ಸಾಕಷ್ಟು ಹಣವಿಲ್ಲವೆಂದು ಅವರಿಗೆ ಹೇಳಿದೆ. ಆಗ ದೇವರಾಜ ಬೂಟಿ ಔಷಧಿ ಪಡೆಯದಿದ್ದರೆ ಇಲ್ಲಿಯವರೆಗೆ ನೀಡಿರುವ ಚಿಕಿತ್ಸೆ ಫಲಕಾರಿಯಾಗುವುದಿಲ್ಲವೆಂದರು. ಕೊನೆಗೆ ಖಾಸಗಿ ಬ್ಯಾಂಕ್‌ನಲ್ಲಿ ₹20 ಲಕ್ಷ ಸಾಲ ಪಡೆದು ಔಷಧಿ ಖರೀದಿಸಿದೆ.
ನಾಟಿ ವೈದ್ಯರ ಟೆಂಟ್ ಎತ್ತಂಗಡಿಈ ವಂಚನೆ ಕೃತ್ಯ ಬೆನ್ನಲ್ಲೇ ರಸ್ತೆ ಬದಿ ನಾಟಿ ವೈದ್ಯರ ಟೆಂಟ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಲೈಂಗಿಕ ಸಮಸ್ಯೆ ಪರಿಹಾರ ಸೋಗಿನಲ್ಲಿ ಜನರಿಗೆ ವಂಚಿಸಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.