₹81 ಲಕ್ಷ ಜತೆ ಹೋದ ದರೋಡೆಕೋರಗೆ ಶೋಧ

KannadaprabhaNewsNetwork |  
Published : Nov 24, 2025, 02:15 AM ISTUpdated : Nov 24, 2025, 11:12 AM IST
  Money

ಸಾರಾಂಶ

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂಗೆ ತುಂಬಲು ಹೊರಟಿದ್ದ ₹7.11 ಕೋಟಿ ದೋಚಿದ ಪ್ರಕರಣ ಸಂಬಂಧ ಮತ್ತಿಬ್ಬರು ದರೋಡೆಕೋರರನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಇದುವರೆಗೆ ಪ್ರಕರಣ ಸಂಬಂಧ ಬಂಧಿಸಲ್ಪಟ್ಟ ದರೋಡೆಕೋರರ ಸಂಖ್ಯೆ 8ಕ್ಕೆ ಏರಿದಂತಾಗಿದೆ.

 ಬೆಂಗಳೂರು :  ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂಗೆ ತುಂಬಲು ಹೊರಟಿದ್ದ ₹7.11 ಕೋಟಿ ದೋಚಿದ ಪ್ರಕರಣ ಸಂಬಂಧ ಮತ್ತಿಬ್ಬರು ದರೋಡೆಕೋರರನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಇದುವರೆಗೆ ಪ್ರಕರಣ ಸಂಬಂಧ ಬಂಧಿಸಲ್ಪಟ್ಟ ದರೋಡೆಕೋರರ ಸಂಖ್ಯೆ 8ಕ್ಕೆ ಏರಿದಂತಾಗಿದೆ.

ಕಮ್ಮನಹಳ್ಳಿಯ ರಾಕೇಶ್ ಹಾಗೂ ಜಿತೇಶ್ ಬಂಧಿತರಾಗಿದ್ದು, ನಗರದ ಹೊರವಲಯದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ದರೋಡೆಯಾದ ಹಣದಲ್ಲಿ ಬಹುತೇಕ ಜಪ್ತಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬನಿಗೆ ಹುಡುಕಾಟ ನಡೆದಿದೆ. ಆತನ ಬಳಿ ಇನ್ನುಳಿದ ₹81 ಲಕ್ಷ ಹಣಕ್ಕೆ ಸಹ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದುವರೆಗೆ ಗೋವಿಂದಪುರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯಕ್ ಸೇರಿದಂತೆ ಎಂಟು ಮಂದಿ ಬಂಧಿತರಾಗಿದ್ದಾರೆ. ಅಲ್ಲದೆ ₹6.29 ಕೋಟಿ ವಶಪಡಿಸಿಕೊಳ್ಳಲಾಗಿದೆ.

ನಗರದ ಹೊರವಲಯದಲ್ಲಿ ಶನಿವಾರ ರಾತ್ರಿ ರಾಕೇಶ್‌ ಸಿಕ್ಕಿಬಿದ್ದರೆ, ಭಾನುವಾರ ತಡರಾತ್ರಿ ಜಿತೇಶ್‌ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ಮೂಲಗಳು ಹೇಳಿವೆ.

ರವಿ ಸೋದರ ರಾಕೇಶ್:

ಎಟಿಎಂ ಹಣ ದರೋಡೆ ಕೃತ್ಯದಲ್ಲಿ ಕಮ್ಮನಹಳ್ಳಿಯ ರವಿ ಹಾಗೂ ಆತನ ಸೋದರ ರಾಕೇಶ್ ಪಾಲ್ಗೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೈದರಾಬಾದ್‌ನಲ್ಲಿ ರವಿ ಸಿಕ್ಕಿಬಿದ್ದರೆ, ಅಣ್ಣನ ಮಾಹಿತಿ ಮೇರೆಗೆ ಬೆಂಗಳೂರು ಹೊರ ವಲಯದಲ್ಲಿ ರಾಕೇಶ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಎಟಿಎಂ ಹಣ ದರೋಡೆ ಕೃತ್ಯದಲ್ಲಿ ಆರ್‌ಬಿಐ ಅಧಿಕಾರಿಗಳ ವೇಷ ಧರಿಸಿ ಪಾತ್ರ ವಹಿಸಿದ್ದಲ್ಲದೆ, ದರೋಡೆ ಬಳಿಕ ಹಣವನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಸಮೀಪದ ತಮ್ಮ ತೋಟದ ಮನೆಯಲ್ಲಿ ಈ ಸೋದರರು ಬಚ್ಚಿಟ್ಟಿದ್ದರು ಎಂದು ಪೊಲೀಸ್ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಸಣ್ಣಪುಟ್ಟ ಕೆಲಸ ಮಾಡಿಕೊಂಡು ಈ ಸೋದರರು ತಿರುಗಾಡುತ್ತಿದ್ದರು. ಒಂದೇ ಪ್ರದೇಶದಲ್ಲಿ ನೆಲೆಸಿದ್ದರಿಂದ ಕ್ಸೇವಿಯರ್ ಜತೆ ಸೋದರರಿಗೆ ಸ್ನೇಹವಿತ್ತು. ಸುಲಭವಾಗಿ ಹಣ ಸಂಪಾದಿಸಲು ದರೋಡೆ ಕೃತ್ಯಕ್ಕೆ ರವಿ ಹಾಗೂ ಆತನ ಸೋದರ ರಾಕೇಶ್ ಸಾಥ್ ಕೊಟ್ಟಿದ್ದರು ಎಂದು ತಿಳಿದು ಬಂದಿದೆ....ಬಾಕ್ಸ್....

ದರೋಡೆ ಹಣದಲ್ಲಿ ಕೆಟಿಎಂ ಬೈಕ್‌

ಮೂರು ದಿನಗಳ ಹಿಂದೆ ಹೊಸ ಕೆಟಿಎಂ ಬೈಕ್ ಅನ್ನು ಜಿತೇಶ್ ಖರೀದಿಸಿದ್ದಾನೆ. ಈ ಬೈಕ್‌ ಕೊಳ್ಳಲು ಆತ ದರೋಡೆ ಹಣ ಬಳಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದರೋಡೆ ಕೃತ್ಯಕ್ಕೂ ಮುನ್ನವೇ ಬೈಕ್ ಖರೀದಿಗೆ ಆತ ಯೋಜಿಸಿದ್ದ. ದರೋಡೆ ಬಳಿಕ ಆತ ಬೈಕ್ ಕೊಂಡಿದ್ದಾನೆ. ಹೀಗಾಗಿ ದರೋಡೆ ಮಾಡಿದ ಸಂಪಾದಿಸಿದ ಹಣವನ್ನು ಬೈಕ್‌ಗೆ ಖರೀದಿಗೆ ಪಾವತಿಸಿರುವ ಮಾಹಿತಿ ಇದೆ ಎಂದು ಮೂಲಗಳು ತಿಳಿಸಿವೆ -ಬಾಕ್ಸ್-

ದರೋಡೆ ವೇಳೆ ಸಂವಹನಕ್ಕೆ ಆ್ಯಪ್

ದರೋಡೆ ಕೃತ್ಯದ ವೇಳೆ ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಆರೋಪಿಗಳು ಮೊಬೈಲ್ ಬಳಸದೆ ಸಂವಹನಕ್ಕೆ ಪ್ರತ್ಯೇಕ ಆ್ಯಪ್ ಬಳಸಿದ್ದರು ಎಂದು ತಿಳಿದು ಬಂದಿದೆ.

ಮೊಬೈಲ್ ಕರೆ ಮಾತ್ರವಲ್ಲದೆ ವಾಟ್ಸಪ್ ಅನ್ನು ಸಹ ಆರೋಪಿಗಳು ಉಪಯೋಗಿಸಿರಲಿಲ್ಲ. ಮೊಬೈಲ್‌ನಲ್ಲಿ ವಾಟ್ಸಪ್ ಬಳಸಿದರೂ ಪೊಲೀಸರಿಗೆ ಜಾಡು ಸಿಗುತ್ತದೆ ಎಂದು ಆರೋಪಿಗಳಿಗೆ ಭಯವಿತ್ತು. ಹೀಗಾಗಿ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗುವ ‘ಇಮೋ’ (imo) ಆ್ಯಪನ್ನು ಪರಸ್ಪರ ಸಂವಹನಕ್ಕೆ ಬಳಸಿದ್ದರು ಎಂದು ಮೂಲಗಳು ಹೇಳಿವೆ.ಬಾಕ್ಸ್...

ವೃದ್ಧ ದಂಪತಿ ಕಾರು ಬಳಕೆ

ದರೋಡೆ ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರು ಬಾಣಸವಾಡಿ ಸಮೀಪ ನೆಲೆಸಿರುವ ವೃದ್ಧ ದಂಪತಿಗೆ ಸೇರಿದ್ದಾಗಿದೆ. ದರೋಡೆ ಕೃತ್ಯಕ್ಕಾಗಿ ಇನ್ನೋವಾ ಕಾರನ್ನು ವೃದ್ಧ ದಂಪತಿಯಿಂದ ಬಾಡಿಗೆಗೆ ಗೋವಿಂದಪುರ ಠಾಣೆ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯಕ್ ಪಡೆದಿದ್ದ. ತನ್ನೂರಿಗೆ ಹೋಗಲು ಬಾಡಿಗೆಗೆ ಕಾರು ಬೇಕಿದೆ ಎಂದು ಸುಳ್ಳು ಹೇಳಿ ಆತ ಕಾರು ಬಾಡಿಗೆ ಪಡೆದಿದ್ದ ಎನ್ನಲಾಗಿದೆ.ಬಾಕ್ಸ್...

ಜಿತೇಶ್ ಬಳಿ ಹಣ ಜಪ್ತಿ

ಕಮ್ಮನಹಳ್ಳಿಯ ಆರೋಪಿ ಜಿತೇಶ್ ಬಳಿ ಸ್ಪಲ್ಪ ಹಣ ಜಪ್ತಿಯಾಗಿದೆ. ಈ ಹಣದ ಪರಿಶೀಲನೆ ನಡೆದಿದ್ದು, ಇನ್ನು ಬಾಕಿ ಉಳಿದ ದರೋಡೆ ಹಣಕ್ಕೆ ಆರೋಪಿಗಳಿಂದ ಬಾಯ್ಬಿಡಿಸಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬಿಜೆಪಿ ಎಷ್ಟು ಕೇಸ್‌ ಸಿಬಿಐಗೆ ನೀಡಿದೆ? : ಸಿಎಂ
ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!