ಕನ್ನಡಪ್ರಭ ವಾರ್ತೆ ಬೆಂಗಳೂರು
‘ನಾನು ಕೂಡ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ. ನಾನು ಯಾವಾಗಲೂ ರೇಸ್‌ನಲ್ಲಿ ಇರುತ್ತೇನೆ’ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ತಿಳಿಸಿದ್ದಾರೆ.‘2013ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿದ್ದಾಗ ಎಲ್ಲರೂ ಸೇರಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೆವು. ಆದರೆ ನಾನು ಸೋತೆ. ಒಂದು ವೇಳೆ ನಾನು ಗೆದ್ದಿದ್ದರೆ ಏನಾಗುತ್ತಿತ್ತು ಗೊತ್ತಿಲ್ಲ’ ಎಂದೂ ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಇದೇ ವೇಳೆ 2013ರಲ್ಲಿ ಸರ್ಕಾರ ಅಧಿಕಾರಕ್ಕೆ ನಾನೊಬ್ಬನೇ ತಂದಿದ್ದೇನೆ ಎಂದು ಇಲ್ಲಿವರೆಗೂ ಎಲ್ಲೂ ನಾನು ಹೇಳಿಲ್ಲ. ಎಲ್ಲರೂ ಸೇರಿ ಕೆಲಸ ಮಾಡಿದ್ದೆವು. ಜನರು ಗೆಲ್ಲಿಸಿದ್ದರು ಎಂದಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದಲಿತ ನಾಯಕರು ಮುಖ್ಯಮಂತ್ರಿ ಆಗಬೇಕು ಎಂದು ಬಹಳ ದಿನದಿಂದ ಕೇಳುತ್ತಿದ್ದಾರೆ. ನಾವು ಊಟಕ್ಕೆ ಸೇರಿದ ತಕ್ಷಣ ಆಗಿಬಿಡುತ್ತದೆಯೇ? ನಾವೆಲ್ಲಾ ಸಮಾನ ಮನಸ್ಕರಿದ್ದೇವೆ. ಒಳಮೀಸಲಾತಿ ಬಗ್ಗೆ ಹೋರಾಟ ಅಯಿತು. ನಮ್ಮ ಸಮಸ್ಯೆಗಳ ಚರ್ಚೆ ಮಾಡಲು ಸೇರಿದ್ದೆವು’ ಎಂದರು.ಸಿಎಂ ಬದಲಾವಣೆಯ ಕೂಗು ಬಂದರೆ ನಿಮ್ಮನ್ನು ಪರಿಗಣಿಸುವಂತೆ ಕೇಳುತ್ತೀರಾ? ಎಂಬ ಪ್ರಶ್ನೆಗೆ, ‘ಆ ಸಂದರ್ಭ ಬರಲಿ. ಸಂದರ್ಭ ಇನ್ನೂ ಬಂದಿಲ್ಲ. ಎಐಸಿಸಿ ಅಧ್ಯಕ್ಷರನ್ನು ನಾನೇನು ಹೋಗಿ ಭೇಟಿ ಮಾಡುವುದಿಲ್ಲ. ಬೇಕಾದಾಗ ನಾನು ಹೋಗಿ ಅವರನ್ನು ಭೇಟಿ ಮಾಡುತ್ತೇನೆ’ ಎಂದು ಹೇಳಿದರು.
ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಗೆದ್ದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ. ಪ್ರತಿ ಬಾರಿ ಕೆಪಿಸಿಸಿ ಅಧ್ಯಕ್ಷರಿಗೆ ಒಂದು ಅವಕಾಶ ಕೊಡುತ್ತಾರೆ. ಅದು ಕೆಲವು ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.ಆ ಕನಸು ಈಗ ಈಡೇರುತ್ತದೆಯೇ ಎಂಬ ಪ್ರಶ್ನೆಗೆ, ’ನನಗೆ ಆ ಕನಸೇ ಬಿದ್ದಿಲ್ಲವಲ್ಲ’ ಎಂದು ನಗುತ್ತಾ ಹೇಳಿದರು.
ರಾಹುಲ್ ಬಂದ ಬಳಿಕ ತೀರ್ಮಾನ:ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬಂದ ನಂತರ ಪಕ್ಷದಲ್ಲಿ ಅಂತಹ ಬೆಳವಣಿಗೆಗಳಿದ್ದರೆ ಚರ್ಚೆ ಮಾಡಿ ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ರಾಜ್ಯ ರಾಜಕೀಯದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೊತ್ತಿರುವಷ್ಟು ಯಾರಿಗೂ ಗೊತ್ತಿಲ್ಲ. ಪಕ್ಷದಲ್ಲಿ ಅಂತದ್ದೇನಾದರು ಗೊಂದಲಗಳಿದ್ದರೆ ರಾಹುಲ್ ಗಾಂಧಿ ಅವರು ಬಂದ ಬಳಿಕ ತೀರ್ಮಾನ ಮಾಡುತ್ತಾರೆ ಎಂದು ಹೆಳಿದರು.
ರಾಜ್ಯಪಾಲರಿಗೆ ಬಿಜೆಪಿಯವರು ದೂರು ನೀಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಬಿಜೆಪಿಯವರನ್ನು ನಾವೇನೂ ಸರ್ಟಿಫಿಕೇಟ್ ಕೇಳುತ್ತಿಲ್ಲ. ಅಧ್ಯಕ್ಷನಾಗಿ ನಾನೇ ಮುಂದುವರಿಯುತ್ತೇನೆ ಎಂದು ವಿಜಯೇಂದ್ರ ಅವರು ಹೇಳಿಕೆ ಕೊಟ್ಟಿದ್ದಾರೆ. ಆ ಹೇಳಿಕೆಯ ಅಗತ್ಯ ಇದೆಯೇ? ಮೊದಲು ಅವರ ಮನೆಯ ಸಮಸ್ಯೆ ಸರಿಪಡಿಸಿಕೊಳ್ಳಲು ಹೇಳಿ’ ಎಂದು ತಿರುಗೇಟು ನೀಡಿದರು.ಪರಂ ಹೇಳಿಕೆಯಲ್ಲಿ ತಪ್ಪೇನಿದೆ; ಸತೀಶ್:‘ನಾನೂ ಕೂಡ ಸಿಎಂ ಸ್ಥಾನದ ಆಕಾಂಕ್ಷಿ’ ಎಂದು ಪರಮೇಶ್ವರ್ ಅವರು ಮುಂಚೆಯೂ ಹೇಳಿದ್ದರು. ಈಗಲೂ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ?’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಗೃಹ ಸಚಿವ ಪರಮೇಶ್ವರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೆ, ‘ಎಲ್ಲವೂ ನನ್ನಿಂದಲೇ ಆಗಿದೆ ಎನ್ನುವುದು ತಪ್ಪು’ ಎನ್ನುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಟಾಂಗ್ ನೀಡಿದ್ದಾರೆ.ಬೆಳಗಾವಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ನಾನೂ ಕೂಡ ಸಿಎಂ ಹುದ್ದೆಯ ಆಕಾಂಕ್ಷಿ’ ಎಂಬ ಪರಮೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಪರಮೇಶ್ವರ್ ಅವರು 7 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಅವರು ಬಹಳಷ್ಟು ಕಾರ್ಯಕ್ರಮ ಮಾಡಿದ್ದರಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂತು. ಹೀಗಾಗಿ, ಅವರು ಸಿಎಂ ಹುದ್ದೆ ಅಪೇಕ್ಷಿಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು. ಸಿಎಂ ರೇಸ್‌ನಲ್ಲಿ ತಾವು ಇದ್ದಿರಾ ಎಂಬ ಪ್ರಶ್ನೆಗೆ, ಅದನ್ನು ಕೇಳಲು ಹೋಗಬೇಡಿ. ಹೇಳುವ ಅವಶ್ಯಕತೆಯೂ ಈಗಿಲ್ಲ ಎಂದರು.ಇದೇ ವೇಳೆ, ಡಿಕೆಶಿಗೆ ಟಾಂಗ್ ನೀಡಿದ ಜಾರಕಿಹೊಳಿ, ಕೆಲವೇ ಜನರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ಬಹಳಷ್ಟು ಜನ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ದುಡಿದಿದ್ದಾರೆ. ರಾಜ್ಯದ ಜನ ಮತ ಹಾಕಿದ್ದರಿಂದ ನಾವು ಶಾಸಕರು, ಮಂತ್ರಿ ಆಗಿದ್ದೇವೆ. ನಮಗೆ ಇತಿ ಮಿತಿ ಇರಬೇಕು. ಎಲ್ಲವೂ ನನ್ನಿಂದಲೇ ಆಗಿದೆ ಎನ್ನುವುದು ತಪ್ಪು. ಪಕ್ಷ ಅಧಿಕಾರಕ್ಕೆ ಬರಲು ಎಲ್ಲರ ಸಹಕಾರವಿದೆ. ಅದರ ಶ್ರೇಯಸ್ಸನ್ನು ಕೆಲವೇ ಜನರು ತೆಗೆದುಕೊಳ್ಳುವುದನ್ನು ನಾನು ಒಪ್ಪುವುದಿಲ್ಲ. ಸ್ವಾಭಾವಿಕವಾಗಿ ಎಲ್ಲರೂ ಹಕ್ಕು ಮಂಡಿಸುತ್ತಾರೆ. ಎಲ್ಲರಿಗೂ ಅಧಿಕಾರ ಸಿಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದರಲ್ಲಿ ತಪ್ಪಿಲ್ಲ ಎಂದು ಹೇಳಿದರು.++++1960ರಲ್ಲಿ ತೇನ್ ಸಿಂಗ್ ಹಿಮಾಲಯ ಪರ್ವತ ಏರಿದಾಗ ಜಗತ್ತಿನ ಎಲ್ಲಾ ಪತ್ರಿಕೆಗಳು ತೇನ್‌ಸಿಂಗ್ ಹಿಮಾಲಯ ಏರಿದರು ಎಂದು ಬರೆದರು. ಅವರ ಜೊತೆಗೆ ಇನ್ನೂ 14 ಜನರಿದ್ದರು. ಆದರೆ, ಅವರ ಹೆಸರು ಬರಲಿಲ್ಲ. ಇದು ಹಾಗೆಯೇ ಆಗಿದೆ ಎಂದು ಹೇಳಿದರು.ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ‘ನವೆಂಬರ್ ಕ್ರಾಂತಿ’ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವುದೇ ಕ್ರಾಂತಿ ಉದ್ಭವ ಆಗುವುದಿಲ್ಲ. ಯಥಾಸ್ಥಿತಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.
ಡಿ.ಕೆ.ಶಿವಕುಮಾರ್ ಅವರು ಜೈಲಿಗೆ ಹೋಗಿ ಶಾಸಕರನ್ನು ಭೇಟಿಯಾದ ಕುರಿತು ಮಾತನಾಡಿ, ಅವರು ನಮ್ಮ ಪಕ್ಷದ ಶಾಸಕರು. ಹಾಗಾಗಿ, ಭೇಟಿಯಾಗಿ ಬಂದಿದ್ದಾರೆ. ಹಿಂದೆಯೂ ಒಂದು ಬಾರಿ ಭೇಟಿಯಾಗಿದ್ದರು. ಇದರಲ್ಲಿ ಅಂಡರ್ ಕರೆಂಟ್ ಶಾಕ್ ಏನಿಲ್ಲ. ಎಲ್ಲವೂ ಸರಿ ಇದೆ. ಎಲ್ಲವನ್ನು ರಾಷ್ಟ್ರೀಯ ಅಧ್ಯಕ್ಷರೇ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.ಕೋಟ್:ಎರಡೂವರೆ ವರ್ಷ ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಏನೇ ಮಾತುಕತೆ ಆಗಿದ್ದರೂ ಅದು ದೆಹಲಿಯಲ್ಲಿ ಆಗಿರುತ್ತದೆ. ದೆಹಲಿಗೆ ಹೋಗುವ ಅವಶ್ಯಕತೆ ನನಗೆ ಇಲ್ಲ. ಹೈಕಮಾಂಡ್ ನಾಯಕರು ಯಾರಾದರೂ ಕರೆದರೆ ಹೋಗುತ್ತೇನೆ. ಇಲ್ಲದಿದ್ದರೆ ಇಲ್ಲ.- ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ.