ಖರ್ಗೆ, ಸಿದ್ದು ಮನೆಗೆ ಸಚಿವರು, ಶಾಸಕರ ಪರೇಡ್‌

KannadaprabhaNewsNetwork |  
Published : Nov 24, 2025, 02:15 AM IST
ಮಲ್ಲಿಕಾರ್ಜುನ ಖರ್ಗೆ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಣಗಳ ನಡುವೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಪಟ್ಟು ಮುಂದುವರೆದಿದ್ದು, ಭಾನುವಾರವೂ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಸಚಿವರು, ಶಾಸಕರು ಪರೇಡ್‌ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಣಗಳ ನಡುವೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಪಟ್ಟು ಮುಂದುವರೆದಿದ್ದು, ಭಾನುವಾರವೂ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಸಚಿವರು, ಶಾಸಕರು ಪರೇಡ್‌ ಮಾಡಿದ್ದಾರೆ.

ಮತ್ತೊಂದೆಡೆ ಅನಾರೋಗ್ಯದಿಂದ ಚಿಕಿತ್ಸೆ ಪಡೆದು ದಿನವಿಡೀ ತಟಸ್ಥರಾಗಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಹಠಾತ್ತನೆ ಭಾನುವಾರ ಸಂಜೆ ಸಚಿವ ಕೆ.ಜೆ.ಜಾರ್ಜ್‌ ಅವರ ಅಧಿಕೃತ ನಿವಾಸಕ್ಕೆ ತೆರಳಿ ಭೇಟಿಯಾಗಿದ್ದು, ಈ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಜಾರ್ಜ್‌ ಅವರು ಮೊದಲು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರ ನಿಲುವು ತಿಳಿದುಕೊಂಡು ಬಳಿಕ ಖರ್ಗೆ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದರು. ಈ ಇಬ್ಬರ ಭೇಟಿ ವೇಳೆ ಏನು ಚರ್ಚೆ ಆಯಿತು ಎಂಬುದನ್ನು ತಿಳಿಯಲು ಡಿ.ಕೆ. ಶಿವಕುಮಾರ್‌ ಅವರು ಜಾರ್ಜ್‌ ಅವರನ್ನು ಭೇಟಿಯಾಗಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಆದರೆ, ಡಿ.ಕೆ. ಶಿವಕುಮಾರ್‌ ಅವರೇ ಖುದ್ದು ಜಾರ್ಜ್‌ ಅಧಿಕೃತ ನಿವಾಸಕ್ಕೆ ತೆರಳಿರುವುದು ಹಲವು ರೀತಿಯ ಅನುಮಾನಗಳಿಗೆ ಕಾರಣವಾಗಿದ್ದು, ಕೆ.ಜೆ. ಜಾರ್ಜ್‌ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಇಬ್ಬರ ನಡುವೆ ಸಂಧಾನಕ್ಕೆ ಯತ್ನಿಸುತ್ತಿದ್ದಾರೆಯೇ ಎಂಬ ಚರ್ಚೆಗಳು ಶುರುವಾಗಿವೆ.

ಆದರೆ, ಯಾವುದೇ ರಾಜಕೀಯ ಬೆಳವಣಿಗೆ ನಡೆದರೂ ಅಧಿಕಾರ ಹಸ್ತಾಂತರ ಅಥವಾ ಸಂಪುಟ ಪುನರ್‌ರಚನೆ ಕುರಿತು ರಾಹುಲ್‌ಗಾಂಧಿ ಅವರು ದೇಶಕ್ಕೆ ವಾಪಸಾದ ಬಳಿಕವೇ ಸ್ಪಷ್ಟತೆ ದೊರೆಯಲಿದೆ. ನ.27 ರಿಂದ 30 ರ ನಡುವೆ ಈ ಬಗ್ಗೆ ಸ್ಪಷ್ಟ ಸಂದೇಶ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ಮುಂದುವರೆದ ರಾಜಕೀಯ ಮೇಲಾಟ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನರ್‌ರಚನೆಗಾಗಿ ದೆಹಲಿಗೆ ಹೋದ ಬಳಿಕ ಶುರುವಾದ ರಾಜಕೀಯ ಮೇಲಾಟ ಅದೇ ವೇಗದಲ್ಲಿ ಮುಂದುವರೆದಿದೆ. ಬೆನ್ನಲ್ಲೇ ಡಿ.ಕೆ. ಶಿವಕುಮಾರ್‌ ಅವರ ಬಣದ ಶಾಸಕರು ದೆಹಲಿಯಲ್ಲಿ ಪರೇಡ್‌ ನಡೆಸಿದ್ದರು.

ಬಳಿಕ ಶುಕ್ರವಾರ ರಾತ್ರಿ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿದ್ದು, ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ್ದರು.

ಭಾನುವಾರವೂ ರಾಜಕೀಯ ಚಟುವಟಿಕೆ ಮುಂದುವರೆದಿದ್ದು, ಸಿದ್ದರಾಮಯ್ಯ ಬಣದ ಹಿರಿಯ ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಸೇರಿದಂತೆ ಇತರರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಬಳಿಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ.

ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಆಹ್ವಾನದ ನೆಪದಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ.

ಇದರ ನಡುವೆ ಸಚಿವರಾದ ಬೈರತಿ ಸುರೇಶ್, ಕೆ.ಜೆ. ಜಾರ್ಜ್, ಶಾಸಕರಾದ ರೂಪಕಲಾ ಶಶಿಧರ್, ಎ.ಎಸ್‌. ಪೊನ್ನಣ್ಣ, ನಂಜೇಗೌಡ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

PREV

Recommended Stories

ಬಿ.ವಿ. ಶ್ರೀನಿವಾಸ್‌ಗೆ ಅದ್ಧೂರಿ ಸ್ವಾಗತ
ಸೆಕ್ಸ್‌ ಸಮಸ್ಯೆ ಪರಿಹಾರ ನೆಪದಲ್ಲಿ ₹48 ಲಕ್ಷ ವಂಚನೆ