ಕೋರ್ಟ್‌ಗೆ ಹಾಜರುಪಡಿಸದ ಆರೋಪಿಗೆ ಜಾಮೀನು ಮಂಜೂರು

KannadaprabhaNewsNetwork |  
Published : Nov 24, 2025, 02:15 AM ISTUpdated : Nov 24, 2025, 12:45 PM IST
Karnataka Highcourt

ಸಾರಾಂಶ

ನ್ಯಾಯಾಂಗ ಬಂಧನದ ಅವಧಿ ಮುಗಿದ ನಂತರ ರಿಮಾಂಡ್‌ ವಿಸ್ತರಣೆಗೆ ಕೋರದ ಮತ್ತು ಬಂಧಿತನನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮುಂದೆ ಪೊಲೀಸರು ಹಾಜರುಪಡಿಸದ ಕಾರಣಕ್ಕಾಗಿ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಯುವಕನಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

ವೆಂಕಟೇಶ್‌ ಕಲಿಪಿ

 ಬೆಂಗಳೂರು :  ನ್ಯಾಯಾಂಗ ಬಂಧನದ ಅವಧಿ ಮುಗಿದ ನಂತರ ರಿಮಾಂಡ್‌ ವಿಸ್ತರಣೆಗೆ ಕೋರದ ಮತ್ತು ಬಂಧಿತನನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮುಂದೆ ಪೊಲೀಸರು ಹಾಜರುಪಡಿಸದ ಕಾರಣಕ್ಕಾಗಿ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಯುವಕನಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

ಕ್ರಿಮಿನಲ್‌ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಜಿ.ಬಸವರಾಜ ಅವರ ಪೀಠ

ನ್ಯಾಯಾಂಗ ಬಂಧನದಲ್ಲಿದ್ದ ಮಂಡ್ಯ ಜಿಲ್ಲೆಯ ಹುಬ್ಬನಹಳ್ಳಿ ಗ್ರಾಮದ ಎಚ್‌.ವಿ.ಚರಣ್‌ (23) ಜಾಮೀನು ಕೋರಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಜಿ.ಬಸವರಾಜ ಅವರ ಪೀಠ ಈ ಆದೇಶ ಮಾಡಿದೆ.

ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಸಂಬಂಧ ಬೆಳಸಿ, ನಂತರ ಬೇರೆ ಜಾತಿಗೆ ಸೇರಿದ್ದಾರೆಂಬ ಕಾರಣಕ್ಕೆ ಮದುವೆಗೆ ನಿರಾಕರಿಸಿದ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಮೇಲ್ಮನವಿದಾರ ಆರೋಪಿಯನ್ನು 2025ರ ಸೆ.15ರಂದು ಪೊಲೀಸರು ಬಂಧಿಸಿದ್ದರು. ಅದೇ ದಿನ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆರೋಪಿಯನ್ನು ಸೆ.30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. 

ಸೆ.30ರಂದು ತನಿಖಾಧಿಕಾರಿಯು ಆರೋಪಿಯನ್ನು ನ್ಯಾಯಾಂಗ ಬಂಧನ ಅವಧಿಯ ವಿಸ್ತರಣೆಗೆ ರಿಮಾಂಡ್‌ ಅರ್ಜಿ ಸಲ್ಲಿಸಲಿಲ್ಲ ಅಥವಾ ಆರೋಪಿಯನ್ನು ಕೋರ್ಟ್‌ ಮುಂದೆ ಹಾಜರುಪಡಿಸಲೂ ಇಲ್ಲ. ಆದರೆ, ಆರೋಪಿಯ ನ್ಯಾಯಾಂಗ ಬಂಧನ ಅವಧಿಯನ್ನು ಅ.10ರವರೆಗೆ ವಿಸ್ತರಿಸಲಾಗಿದೆ. ಅದಕ್ಕೆ ಸಕಾರಣಗಳನ್ನು ಆದೇಶದಲ್ಲಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನಮೂದಿಸಿಲ್ಲ. ಈ ಕುರಿತು ತರಿಸಿಕೊಂಡ ವರದಿಯಲ್ಲಿ ತನಿಖಾಧಿಕಾರಿಗಳು, ಆರೋಪಿಯನ್ನು ಖುದ್ದಾಗಲಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕವಾಗಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿಲ್ಲ. ಆ ಮೂಲಕ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಸೆಕ್ಷನ್‌ 187(4) ಪಾಲಿಸಿಲ್ಲ ಎಂದು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನ್ಯಾಯಾಧೀಶರು ತಿಳಿಸಿದ್ದಾರೆ ಎಂದು ಹೈಕೋರ್ಟ್‌ ತೀರ್ಪಿನಲ್ಲಿ ವಿವರಿಸಿದೆ.

ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳನ್ವಯ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 167(2)(ಬಿ) ಅನ್ವಯ ವಿಡಿಯೋ ಕಾನ್ಫರೆನ್ಸ್‌ ಅಥವಾ ಖುದ್ದಾಗಿ ಬಂಧಿತನನ್ನು ಕೋರ್ಟ್‌ಗೆ ಹಾಜರುಪಡಿಸದಿದ್ದರೆ, ಆತನ ಬಂಧನ ಅವಧಿ ಮುಂದುವರಿಸಲಾಗದು. ಒಮ್ಮೆ ರಿಮಾಂಡ್ ಅವಧಿ ಮುಗಿದರೆ, ಹೊಸ ರಿಮಾಂಡ್ ಆದೇಶ ಹೊರಡಿಸಬೇಕು. ಅಂತಹ ಆದೇಶವಿಲ್ಲದೆ ಬಂಧಿತನ ರಿಮಾಂಡ್‌ ಅವಧಿ ವಿಸ್ತರಿಸಿರುವುದು ಅಥವಾ ಜೈಲು ವಾರಂಟ್‌ನಲ್ಲಿ ಕೇವಲ ಬಂಧಿತನ ಮುಂದಿನ ಹಾಜರಾತಿ ದಿನಾಂಕ ನಮೂದಿಸುವುದು ಕಾನೂನುಬಾಹಿರವಾಗುತ್ತದೆ. ಅದರಂತೆ ಜಾಮೀನು ಪಡೆಯಲು ಬಂಧಿತ ಅರ್ಹನಾಗಿದ್ದಾನೆ ಎಂದು ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣದ ವಿವರ:

ವಾಲ್ಮೀಕಿ ಸಮುದಾಯಕ್ಕೆ ಸೇರಿದ ಬಳ್ಳಾರಿ ಮೂಲದ ಸಂತ್ರಸ್ತೆ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಗೆ ದೂರು ನೀಡಿ, ‘ನಾನು ಚಿಕ್ಕಲಕ್ಕಸಂದ್ರದ ಹೋಟೆಲ್‌ವೊಂದರಲ್ಲಿ ಕ್ಯಾಷಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಆರೋಪಿ ಎಚ್‌.ವಿ. ಚರಣ್‌, ಅದೇ ಹೋಟೆಲ್‌ನಲ್ಲಿ ಜ್ಯೂಸ್‌ ಸೆಂಟರ್‌ ನಿರ್ವಹಿಸುತ್ತಿದ್ದ. 2024ರ ನವೆಂಬರ್‌ನಲ್ಲಿ ಆತ ನನಗೆ ಪ್ರೀತಿಸುವುದಾಗಿ ಹೇಳಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ನಂತರ 2024ರ ನ.20ರಿಂದ 2025ರ ಆ.14ರವರೆಗೆ ಇಬ್ಬರು ಒಂದೇ ಮನೆಯಲ್ಲಿ ವಾಸವಿದ್ದೆವು. ಮದುವೆ ಭರವಸೆ ನೀಡಿ ಚರಣ್‌ ನನ್ನೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಇದರಿಂದ ನಾನು ಗರ್ಭಿಣಿಯಾಗಿದ್ದೆ. ಆ ವೇಳೆ ಚರಣ್‌ ನನಗೆ ಗುಳಿಗೆ ನುಂಗಿಸಿ ಗರ್ಭಪಾತ ಮಾಡಿಸಿದ್ದ. ನಾನು ಮದುವೆ ವಿಚಾರ ಎತ್ತಿದಾಗ ವಿವಿಧ ಕಾರಣ ಹೇಳುತ್ತಾ ಮದುವೆಯಾಗುವುದನ್ನು ಮುಂದೂಡುತ್ತಿದ್ದ. ಕೊನೆಗೆ ನಾನು ಪರಿಶಿಷ್ಟ ಪಂಗಡದ ಜಾತಿಗೆ ಸೇರಿರುವ ಕಾರಣ ಮದುವೆಗೆ ನಿರಾಕರಿಸಿದ್ದ. ಮುಂದೆ ಮದುವೆ ಪ್ರಸ್ತಾವನೆ ತಂದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಾಗಿ ಬೆದರಿಕೆ ಹಾಕಿದ್ದ’ ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದರು.

ಈ ದೂರು ಆಧರಿಸಿ ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು, ಚರಣ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 69 (ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಭೋಗ ನಡೆಸಿದ), ಸೆಕ್ಷನ್‌ 89 (ಮಹಿಳೆಯ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಕಾರಣವಾದ), ಸೆಕ್ಷನ್‌ 351(2) (ಶಾಂತಿ ಭಂಗ ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ಮಾಡಿದ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಸೆಕ್ಷನ್‌ 3(2)(5) ಅಡಿ ಜಾತಿ ನಿಂದನೆ ಅಪರಾಧದಡಿ ಎಫ್‌ಐಆರ್‌ ದಾಖಲಿಸಿದ್ದರು. ನಂತರ 2025ರ ಸೆ.19ರಂದು ಚರಣ್‌ನನ್ನು ಬಂಧಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪವಿತ್ರಾಗೌಡಗೆ ಮನೆ ಊಟ ಪ್ರಶ್ನಿಸಿಹೈಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ
ಚಾರ್ಜ್‌ಶೀಟ್‌ ಸಲ್ಲಿಸದೆ ಸಾಕ್ಷ್ಯ ಇದೆಅನ್ನೋದು ತಪ್ಪು: ಬೈರತಿ ಪರ ವಕೀಲ