ಕರ್ನಾಟಕದಲ್ಲಿ ಏನಾಗುತ್ತಿದೆ?:ವಿಜಯೇಂದ್ರಗೆ ಅಮಿತ್‌ ಶಾ

KannadaprabhaNewsNetwork |  
Published : Nov 24, 2025, 02:15 AM IST
Vijayendra | Kannada Prabha

ಸಾರಾಂಶ

ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆ ಸಂಬಂಧ ಬಿರುಸಿನ ಚಟುವಟಿಕೆ ನಡೆಯುತ್ತಿರುವ ಮಧ್ಯೆ ಪ್ರತಿಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆ ಸಂಬಂಧ ಬಿರುಸಿನ ಚಟುವಟಿಕೆ ನಡೆಯುತ್ತಿರುವ ಮಧ್ಯೆ ಪ್ರತಿಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಭಾನುವಾರ ದೆಹಲಿಯಲ್ಲಿ ವಿಜಯೇಂದ್ರ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದಲ್ಲಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಕೆಲಹೊತ್ತು ಚರ್ಚೆ ನಡೆಸಿದರು.

ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ಅಮಿತ್ ಶಾ ಅವರು ವಿಜಯೇಂದ್ರ ಅವರನ್ನು ಉದ್ದೇಶಿಸಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆ ಸಂಬಂಧ ನಡೆಯುತ್ತಿರುವ ಬೆಳವಣಿಗೆಗಳನ್ನು ವಿವರಿಸಿದರು ಎಂದು ತಿಳಿದು ಬಂದಿದೆ.

ತಮ್ಮ ಭೇಟಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸಿರುವ ವಿಜಯೇಂದ್ರ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿ ಗೌರವಪೂರ್ವಕವಾಗಿ ಅಭಿನಂದಿಸಲಾಯಿತು. ರಾಷ್ಟ್ರ ರಾಜಕಾರಣಕ್ಕೆ ಸ್ಪಷ್ಟ ದಿಕ್ಸೂಚಿ ಎಂದು ವಿಶ್ಲೇಷಿಸಲಾಗಿದ್ದ ಬಿಹಾರ ಚುನಾವಣೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿ ಎನ್‌ಡಿಎ ಮಿತ್ರಕೂಟ ಐತಿಹಾಸಿಕ ದಿಗ್ವಿಜಯ ಸಾಧಿಸುವಲ್ಲಿ ಮಹತ್ವದ ಪಾತ್ರವಹಿಸಿ ಚುನಾವಣಾ ನೈಪುಣ್ಯತೆ ಮೆರೆದ ಅಮಿತ್ ಶಾ ಅವರು ಬಿಜೆಪಿಗೆ ಕಾರ್ಯಕರ್ತರಿಗೆ ಪ್ರೇರಣಾಶೀಲ ನಾಯಕರಾಗಿದ್ದಾರೆ ಎಂದು ಹೇಳಿದ್ದಾರೆ.

ಭಾನುವಾರದ ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ರಾಜಕಾರಣದ ಪ್ರಸ್ತುತ ವಿದ್ಯಮಾನಗಳ ಮಾಹಿತಿ ನೀಡಲಾಯಿತು. ಪಕ್ಷ ಸಂಘಟನೆ ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನ ಪಡೆಯಲಾಯಿತು ಎಂದು ಅವರು ತಿಳಿಸಿದ್ದಾರೆ.

ಕಬ್ಬು ದರ ಆಯ್ತು, ಈಗ ಮೆಕ್ಕೆ ಜೋಳಕ್ಕೆ ಬಿವೈವಿ ಹೋರಾಟ:ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಪರವಾಗಿ ಹೋರಾಟ ನಡೆಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇದೀಗ, ಮಧ್ಯ ಕರ್ನಾಟಕದಲ್ಲಿ ಮೆಕ್ಕೆಜೋಳ ರೈತರ ಪರ ಹೋರಾಟ ನಡೆಸಲಿದ್ದಾರೆ. ಮೆಕ್ಕೆಜೋಳ‍ವನ್ನು ಬೆಂಬಲ ಬೆಲೆಯಡಿ ಖರೀದಿಸುವಂತೆ ಹಾಗೂ ಶೀಘ್ರ ಖರೀದಿ ಕೇಂದ್ರ ಸ್ಥಾಪಿಸುವಂತೆ ಒತ್ತಾಯಿಸಿ ದಾವಣಗೆರೆಯಲ್ಲಿ ಮಂಗಳವಾರ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ದಾವಣಗೆರೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಈ ಬಗ್ಗೆ ಮಾಹಿತಿ ನೀಡಿದರು. ಮಂಗಳವಾರ ಬೆಳಗ್ಗೆ 10.30ಕ್ಕೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಎತ್ತಿನ ಗಾಡಿಗಳಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬಳಿಕ, ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ನಂತರ, ಸಮಾವೇಶ ನಡೆಸಿ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಲಾಗುವುದು. ಜಿಲ್ಲೆಯ ಎಲ್ಲ ತಾಲೂಕುಗಳಿಂದ ರೈತರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಗೆ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.

ನ.27 ಮತ್ತು 28ರಂದು ಬಿಜೆಪಿ ಮಂಡಳ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ ಹೋರಾಟ ನಡೆಯಲಿದೆ. ಅಲ್ಲದೆ, ಡಿ.1 ಮತ್ತು 2ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆಬ್ರವರಿಯಿಂದ ರಾಜ್ಯದಲ್ಲಿ ಎಸ್‌ಐಆರ್‌?
ಇವಿಎಂ ಬೇಡ ಎನ್ನುತ್ತಿದ್ದ ಕಾಂಗ್ರೆಸ್ಸಿಗೆ ಗುಡ್‌ನ್ಯೂಸ್‌