ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ವಿವಿ ನಗರದ 7ನೇ ಕ್ರಾಸ್ ನ ಕಿರಂಗೂರು ಗ್ರಾಮದ ಸರ್ವೇ ನಂ.194/1ರಲ್ಲಿ ವೈ.ಎಲ್.ರವಿ ಅವರು ಕಟ್ಟಡ ನಿರ್ಮಿಸುತ್ತಿರುವ ಜಾಗದ ಪಕ್ಕದಲ್ಲೇ ಕಾವೇರಿ ನೀರಾವರಿ ನಿಗಮದ ನಾಲೆ ಮತ್ತು ನಾಲೆ ರಸ್ತೆ ಹಾಗೂ ಕೆಪಿಟಿಸಿಎಲ್ ನ ಹೈಟೆನ್ಷನ್ ವಿದ್ಯುತ್ ಮಾರ್ಗ ಹಾದು ಹೋಗಿದೆ. ಆದರೂ ನಿಯಮಬಾಹಿರವಾಗಿ ಕಟ್ಟಡ ನಿರ್ಮಾಣ ಮುಂದುವರೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಚಾರವಾಗಿ ನಗರಸಭೆ ಆಯುಕ್ತರು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ದೂರು ನೀಡಲಾಗಿದೆ.ಈ ದೂರನ್ನು ಆಧರಿಸಿ ನಗರಸಭೆ ಅಧಿಕಾರಿಗಳು, ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ರನ್ನು ವಿಚಾರಿಸಿದಾಗ ಕಟ್ಟಡಕ್ಕೆ ವಿನ್ಯಾಸ ನಕ್ಷೆ ಅನುಮೋದನೆ ಪಡೆಯದಿರುವುದು ಕಂಡು ಬಂದಿದೆ. ಕಟ್ಟಡ ನಿರ್ಮಾಣದ ಲೈಸೆನ್ಸ್ ಪಡೆಯದೆ ನೀರಾವರಿ ಇಲಾಖೆಯ ನಿರಾಪೇಕ್ಷಣಾ ಪತ್ರವನ್ನು ಪಡೆಯದೆ ಕಟ್ಟಡವನ್ನು ನಿರ್ಮಿಸುತ್ತಿರುವುದು ಕಂಡು ಬಂದಿರುವುದಾಗಿ ಆರೋಪಿಸಿದ್ದಾರೆ.
ಆದಾಗ್ಯೂ ಕಟ್ಟಡ ನಿರ್ಮಾಣ ಮುಂದುವರೆಸಿದ್ದಾಗ ಕಟ್ಟಡ ನಿರ್ಮಾಣ ಸಂಬಂಧ ಪರಿಕರಗಳನ್ನು ಹೊತ್ತೊಯ್ದಿದ್ದಾರೆ. ಆದರೂ ಕಟ್ಟಡ ಮಾಲೀಕ ವೈ.ಎಲ್.ರವಿ ರಜಾ ದಿನಗಳಲ್ಲಿ 15ಕ್ಕೂ ಹೆಚ್ಚು ಮಂದಿ ಕಾರ್ಮಿಕರನ್ನು ಸೇರಿಸಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಿಸುವುದನ್ನು ಮುಂದುವರೆಸಿದ್ದಾರೆ. ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರೂ ಲೆಕ್ಕಿಸುತ್ತಿಲ್ಲಂದು ದೂರಿದ್ದಾರೆ.
ಅನಧಿಕೃತ ಕಟ್ಟಡ ನಿರ್ಮಾಣ ಕುರಿತಂತೆ ಸ್ಥಳೀಯರಾದ ಮಂಜುನಾಥ್ , ಶಿವಕುಮಾರ, ಪ್ರತಾಪ್ , ಪುಟ್ಟಸ್ವಾಮಿ, ಲಿಂಗರಾಜು, ರಾಜೇಶ್ , ಪುಷ್ಪ, ಹೆಚ್.ಜಿ.ಸುಲೋಚನಾ, ಜಯಮ್ಮ ಇತರರು ದೂರು ನೀಡಿದ್ದಾರೆ.