ಕನ್ನಡಪ್ರಭ ವಾರ್ತೆ ಹಳೇಬೀಡು
ವಿಶ್ವ ಪರಂಪರೆಯ ಪಟ್ಟಿಯಲ್ಲಿ ಹಳೇಬೀಡು- ಬೇಲೂರು ಸೇರಿರುವುದು ತುಂಬಾ ಸಂತೋಷದ ವಿಚಾರ. ಈ ದೇವಾಲಯಗಳಿಗೆ ದೇಶ, ವಿದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಇವುಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಉಪಸಭಾಪತಿ ರುದ್ರಪ್ಪ ಲಮಾಣಿ ತಿಳಿಸಿದರು.ಹಳೇಬೀಡಿನ ಸಮೀಪ ಪುಷ್ಪಗಿರಿ ಮಹಾಸಂಸ್ಥಾನಕ್ಕೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ಪ್ರಕೃತಿ ಮಡಿಲಲ್ಲಿ ಅದ್ಭುತ ಸೌಂದರ್ಯದೊಂದಿಗೆ ಪುಷ್ಪಗಿರಿ ಕ್ಷೇತ್ರ ಇರುವುದು ತುಂಬಾ ಸಂತೋಷದ ವಿಚಾರ. ಈ ಸಂಸ್ಥಾನ ಸ್ವರ್ಗದ ಪ್ರವಾಸಿಗರ ತಾಣವಾಗಿದೆ. ನಮ್ಮ ಶ್ರೀಗಳು (ಅಜ್ಜಯ್ಯ) ಇವರು ಪೂರ್ವಾಶ್ರಮದಲ್ಲಿ ನನ್ನ ಕ್ಷೇತ್ರದ ಹಾವೇರಿ ಜಿಲ್ಲೆಯರವರು. ಶ್ರೀಗಳು ಇವತ್ತು ಈ ಚಿಕ್ಕ ವಯಸ್ಸಿನಲ್ಲಿ ಹಾಗೂ ೧೦ ವರ್ಷದ ಅಂತರದಲ್ಲಿ ದೊಡ್ಡ ಮಟ್ಟದಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕೆರೆಯುವ ಮಹಾ ಸಂಸ್ಥಾನ ನೋಡಲು ಎರಡು ಕಣ್ಣುಗಳು ಸಾಲದು ಎಂದರು.
ನೀರಿನ ಹೋರಾಟದ ಹರಿಕಾರ ಪುಷ್ಪಗಿರಿ ಶ್ರೀ:ಕರ್ನಾಟಕ ರಾಜ್ಯದಲ್ಲಿ ಸಿರಿಗೆರೆ ಸಂಸ್ಥಾನದ ಶ್ರೀಗಳು ಹಾಗೂ ಹಲವಾರು ಮಠಾಧೀಶರು ಕೆರೆಗಳನ್ನು ತುಂಬಿಸುವ ಕಾರ್ಯದಲ್ಲಿ ಯಶಸ್ವಿ ಹೊಂದಿದಾರೆ. ಈ ಭಾಗದ ರೈತರ ಜೀವನಾಡಿಯ(ಕೆರೆ) ದ್ವಾರಸಮುದ್ರಕ್ಕೆ ೧ ಕೋಟಿ ೨೦ ಲಕ್ಷದ ಅನುದಾನದಲ್ಲಿ ಶಾಶ್ವತ ನೀರನ್ನು ಕಲ್ಪಿಸಿದ ಮಹಾ ಮೇಧಾವಿ, ನೀರಿನ ಹರಿಕಾರ ನಮ್ಮ ಅಜ್ಜಯ್ಯ, ನಿಮ್ಮ ಶ್ರೀಗಳು. ರಾಜ್ಯದಲ್ಲಿ ಹಲವಾರು ಮಠಗಳು ಪ್ರಖ್ಯಾತಿ ಪಡೆದ ಮಹಾಸಂಸ್ಥಾನವಾಗಿದೆ.
ನಾನು ಮುಜರಾಯಿ ಸಚಿವ ಹಾಗೂ ಶಾಸಕನಾಗಿದ್ದಾಗ ಹಾವೇರಿ, ರಾಣಿಬೆನ್ನೂರು ಕ್ಷೇತ್ರಗಳಲ್ಲಿ ೪೮ ಕೆರೆಗಳನ್ನು ತುಂಬಿಸಿದ ಕಾರ್ಯ ನನ್ನಲ್ಲಿ ನೆಮ್ಮದಿ ಇವತ್ತು ಸದಾ ಇದೆ. ೧೨ ಕೆರೆಗಳು ಬಾಕಿ ಇದೆ ಸದ್ಯದಲ್ಲಿ ನೀರು ತುಂಬಿಸುವ ಕೆಲಸ ಮುಗಿಯುತ್ತದೆ. ನಾನು ಸಾಮಾನ್ಯ ಮನುಷ್ಯ ನನ್ನಲ್ಲಿ ಶ್ರೀಮಂತಿಕೆ, ಹಣ ಯಾವುದೂ ಇಲ್ಲ, ಸಣ್ಣ ಹಳೇಯ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ ನನ್ನ ಪತ್ನಿ ವೃತ್ತಿಯಲ್ಲಿ ಶಿಕ್ಷಕಿ ನಮ್ಮದಿ ಬದುಕು. ಆಸ್ತಿ- ಬಂಗಲೆ ಎಲ್ಲಾ ನನ್ನ ಕ್ಷೇತ್ರದ ಜನತೆ ಅವರೇ ದೊಡ್ಡ ಆಸ್ತಿ ಎಂದರು.ಈ ಭಾಗದ ಕ್ಷೇತ್ರದ ಶಾಸಕ ಎಚ್ ಕೆ ಸುರೇಶ್ ನನ್ನನ್ನು ಭೇಟಿ ಮಾಡಿ ಹಳೇಬೀಡು ಬೇಲೂರು ಪ್ರವಾಸಿಗರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮನವಿಯನ್ನು ಸಲ್ಲಿಸಿದ್ದರು. ಅದರಂತೆ ನಾನು ಈ ಕಾರ್ಯಕ್ಕೆ ತಕ್ಷಣದಲ್ಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ತಕ್ಷಣವೇ ಹಳೇಬೀಡು ಬೇಲೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸುತ್ತೇನೆ. ಬೇಲೂರಿಗೆ ಮುಜರಾಯಿ ಸಚಿವನಾಗಿ ಆಗಿ ಭೇಟಿ ನೀಡಿದ್ದೆ ಆದರೆ ಹಳೇಬೀಡಿಗೆ ಶಾಲೆಯ ವಿದ್ಯಾರ್ಥಿಜೀವನದಲ್ಲಿ ಪ್ರವಾಸ ಮಾಡಿದ್ದೆ. ಹಳೇಬೀಡು ಬೇಲೂರು ದೇವಾಲಯಗಳು ತುಂಬಾ ಚೆನ್ನಾಗಿದೆ ಆದರೆ ಕೇಂದ್ರ ಪುರತತ್ವ ಇಲಾಖೆ ನಿಬಂಧನೆಯಲ್ಲಿ ಅಭಿವೃದ್ಧಿ ಕೆಲಸ ಕಾಣದೆ ಹಾಳಾಗುತ್ತಿದೆ, ಸ್ಮಾರಕ ಉಳಿಸಿ ಬೆಳೆಸಿ. ಹಳೇಬೀಡು ಬೇಲೂರಿನ ದೇವಾಲಯದ ಕೆತ್ತನೆಯ ಸೂತ್ರಧಾರಿ ಜಕಣಾ-ಢಕಣಾಚಾರ್ಯರ ವಿಶ್ವವಿದ್ಯಾಲಯ ಮಾಡಬೇಕೆಂದು ನಾನು, ನಂಜುಂಡಚಾರ್ ಪ್ರಯತ್ನ ಮಾಡಿದ್ದೆವು. ಅದರ ಕೆಲಸ ಕೇಂದ್ರ ಸರ್ಕಾರದಲ್ಲಿ ಕೆಲಸವಾಗಿತ್ತದೆ ಎಂದು ಮಾಹಿತಿ ಬಂದಿದೆ ಎಂದು ತಿಳಿಸಿದರು.
ಪುಷ್ಪಗಿರಿ ಶ್ರೀ ಮಾತನಾಡಿ, ಹಾವೇರಿ ಕ್ಷೇತ್ರದ ಶಾಸಕ-ಸಚಿವರಾಗಿದ್ದಾಗಲೂ ಸರಳತೆಯ, ಜನತೆಯ ಪ್ರೀತಿಯ ರಾಜಕಾರಣಿ, ಆಸೆ ಆಕಾಂಕ್ಷೆ ಇಲ್ಲದೆ ಸಾರ್ವಜನಿಕರ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶ ಇವರದ್ದಾಗಿದೆ. ಮುಂದಿನ ದಿನಗಳಲ್ಲಿ ಮೇಲ್ದರ್ಜೆ ಸಚಿವ ಸ್ಥಾನಕ್ಕೆ ಸಿಗಲಿ, ಇವರಿಗೆ ಮತ್ತು ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ, ಸಚಿವರಾಗಿ ಕ್ಷೇತ್ರ ಭೇಟಿ ಮಾಡಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಉಪಸಭಾಪತಿಯ ಕುಟುಂಬ, ಪುಷ್ಪಗಿರಿ ಶ್ರೀಗಳು, ಪೊಲೀಸ್ ಇಲಾಖೆಯ ಪಿಎಸ್‌ಐ ಯೋಗಬ್ರಹ್ಮ, ಮಂಜುನಾಥ್, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ರಮೇಶ್, ವಿ.ಎ.ಮಹೇಶ್ ಹದ್ದಣ್ಣನವರ್, ಜಮಾಲ್, ಮಠದ ಜಯಣ್ಣ ಮೊದಲಾದವರು ಇದ್ದರು.