ಕನ್ನಡಪ್ರಭ ವಾರ್ತೆ ಬಾಗೂರು/ ನುಗ್ಗೇಹಳ್ಳಿ
ಮಕ್ಕಳಿಗೆ ಶಿಕ್ಷಣದ ಜೊತೆಗೆ ಕಲೆ ಸಾಹಿತ್ಯ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸುವಂತೆ ಪೋಷಕರು ಹಾಗೂ ಶಿಕ್ಷಕರು ಪ್ರೇರೇಪಿಸಬೇಕೆಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ ಎ ಸತೀಶ್ ಸಲಹೆ ನೀಡಿದರು.ಹೋಬಳಿಯ ಚೆನ್ನೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ತಾಲೂಕು ಶಿಕ್ಷಣ ಇಲಾಖೆ ಹಾಗೂ ಕಾರೇಹಳ್ಳಿ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಸುವ ಸಲುವಾಗಿ ಪ್ರತಿಭಾ ಕಾರಂಜಿ ಅಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಕಾರೇಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಚನ್ನೇನಹ ಳ್ಳಿ ಗ್ರಾಮದಲ್ಲಿ ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣ ಅವರ ಸಹಕಾರದಿಂದ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಮುಂಬರುವ ದಿನಗಳಲ್ಲೂ ಶಾಲೆಯ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು. ಕಾರೇಹಳ್ಳಿ ಕ್ಲಸ್ಟರ್ ಸಮೂಹ ಸಂಪನ್ಮೂಲ ಕೇಂದ್ರದ ಅಧಿಕಾರಿ ಹೇಮಲತಾ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಕಲೆ, ಸಾಹಿತ್ಯ ಜ್ಞಾನಾರ್ಜನೆ ಹೆಚ್ಚಿಸುವ ಸಲುವಾಗಿ ಶಿಕ್ಷಣ ಇಲಾಖೆ ವತಿಯಿಂದ ಹಲವು ಮಕ್ಕಳ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸುವ ಸಲುವಾಗಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ಮನವಿ ಮಾಡಿದರು.ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಕಾರೇಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ಮಕ್ಕಳು ವೇಷಭೂಷಣ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಸುಜಾತ ನಾಗೇಂದ್ರ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೆ ಟಿ ನಟೇಶ್, ಗ್ರಾಪಂ ಸದಸ್ಯ ಸಿಜೆ ಕುಮಾರ್, ಕೃಷಿ ಪತ್ತಿನ ನಿರ್ದೇಶಕ ಸಿಡಿ ರೇವಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರುಗಳಾದ ವತ್ಸಲ, ದಿನೇಶ್, ಎಸ್ ಡಿ ಎಮ್ ಸಿ ಅಧ್ಯಕ್ಷ ಧನಂಜಯ್, ಹೋಬಳಿ ಇಸಿಒ ಜಯಪ್ರಕಾಶ್, ಕಸಬಾ ಇಸಿಓ ಲೋಕೇಶ್, ಚೆನ್ನೆನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಕುಮಾರಸ್ವಾಮಿ, ಸಹ ಶಿಕ್ಷಕ ಟಿ ಎಂ ಸಿದ್ದೇಗೌಡ, ಮುಖಂಡರಾದ ಬೊಮ್ಮೇಗೌಡ, ಚಂದ್ರು, ವಸಂತ, ನಾಗೇಶ್, ಸೇರಿದಂತೆ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ಶಿಕ್ಷಕರು ಹಾಗೂ ಮಕ್ಕಳು ಮತ್ತು ಚೆನ್ನೇನಹಳ್ಳಿ ಗ್ರಾಮಸ್ಥರು ಹಾಜರಿದ್ದರು.