ಕನ್ನಡಪ್ರಭ ವಾರ್ತೆ ಬೆಂಗಳೂರು
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಏಳು ಕೋಟಿ ರು.ದರೋಡೆ ಪ್ರಕರಣದ ತನಿಖೆಯ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆಲವು ಸೂಚನೆಗಳನ್ನು ನೀಡಿದರು.ಸದಾಶಿವನಗರದ ತಮ್ಮ ನಿವಾಸದಲ್ಲಿ ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ಅಜಯ್ ಹಿಲೋರಿ, ವಂಶಿಕೃಷ್ಣ ಅವರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಸಚಿವರು, ಪೊಲೀಸ್ ಇಲಾಖೆಯಲ್ಲಿ ಎಚ್ಚರಿಕೆ ವಹಿಸುವಂತೆ ಹಿರಿಯ ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ಕೊಟ್ಟಿದ್ದೇನೆ. ₹7.11 ಕೋಟಿ ದರೋಡೆ ಪ್ರಕರಣದಲ್ಲಿ ಏಳು ಆರೋಪಿಗಳನ್ನು ಬೆಂಗಳೂರು ನಗರ ಪೊಲೀಸರು ಹಿಡಿದಿದ್ದಾರೆ. ಪ್ರಕರಣದ ಜವಾಬ್ದಾರಿ ವಹಿಸಿಕೊಂಡ ಇಬ್ಬರು ಜಂಟಿ ಪೊಲೀಸ್ ಆಯುಕ್ತರಿಗೆ, ಇಬ್ಬರು ಡಿಸಿಪಿಗಳು ಮತ್ತು 200ಕ್ಕೂ ಹೆಚ್ಚು ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಬೆಂಗಳೂರಿಗೆ ಕೆಟ್ಟ ಹೆಸರು ಬರುವ ರೀತಿ ಈ ಕೃತ್ಯ ಆಗಿತ್ತು. ಈ ಘಟನೆ ಪೊಲೀಸ್ ಇಲಾಖೆಗೂ ಸವಾಲಾಗಿತ್ತು. 6.29 ಕೋಟಿ ರು. ಹಣ ಸಿಕ್ಕಿದೆ. ಬಾಕಿ ಹಣ ಪತ್ತೆಹಚ್ಚುತ್ತಾರೆ. ಈ ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಾಗಿತ್ತು. ತಾಂತ್ರಿಕವಾಗಿ, ಬಹಳ ಎಚ್ಚರಿಕೆಯಿಂದ ಬುದ್ಧಿ ಉಪಯೋಗಿಸಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕೆಲಸ ಮಾಡಿ ಪ್ರಕರಣವನ್ನು ಭೇದಿಸಿದ್ದಾರೆ ಎಂದು ಹೇಳಿದರು.ಎಚ್ಚರಿಕೆಯಿಂದ ಇರಲು ಅಧಿಕಾರಿಗಳಿಗೆ ಸೂಚನೆ:
ಘಟನೆ ಹಿನ್ನೆಲೆಯಲ್ಲಿ ಇನ್ನು ಮುಂದೆ ಇಲಾಖೆಯಲ್ಲಿ ಎಚ್ಚರಿಕೆಯಿಂದ ಇರಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ರೀತಿಯ ಕೃತ್ಯದಲ್ಲಿ ಇಲಾಖೆಯ ಯಾರಾದರೂ ಭಾಗಿಯಾಗುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಕೋರಮಂಗಲದಲ್ಲಿ ನಡೆದಿದ್ದ ಕಿಡ್ನಾಪ್ ಪ್ರಕರಣದ ಸಂಬಂಧ ಕಾನ್‌ಸ್ಟೇಬಲ್‌ನನ್ನು ಬಂಧಿಸಲಾಗಿದೆ. ಏಜೆನ್ಸಿಯವರು ಆರ್‌ಬಿಐ ಮಾರ್ಗಸೂಚಿಗಳನ್ನು ಪಾಲಿಸಿದ್ದಾರೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇದಕ್ಕೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.