ದ.ಕ.ದಲ್ಲಿ ಮತದಾರರ ಸಂಖ್ಯೆ 48 ಸಾವಿರ ಏರಿಕೆ!

KannadaprabhaNewsNetwork | Published : Oct 31, 2023 1:15 AM

ಸಾರಾಂಶ

ಕಳೆದ ಚುನಾವಣೆ ಸಂದರ್ಭ ಜಿಲ್ಲೆಯಲ್ಲಿ 17,37,688 ಮತದಾರರಿದ್ದರು. ಇದೀಗ ಈ ಸಂಖ್ಯೆ 17.85 ಲಕ್ಷಕ್ಕೇರಿದೆ
ಕನ್ನಡಪ್ರಭ ವಾರ್ತೆ ಮಂಗಳೂರು ಚುನಾವಣಾ ಆಯೋಗವು ದಕ್ಷಿಣ ಕನ್ನಡ ಜಿಲ್ಲೆಯ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿದ್ದು, ಒಟ್ಟು 17,85,835 ಮತದಾರರನ್ನು ಗುರುತಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ಬಳಿಕ ಜಿಲ್ಲೆಯಲ್ಲಿ 48,147 ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸುದ್ದಿಗೋಷ್ಠಿಯಲ್ಲಿ ಸೋಮವಾರ ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಕಳೆದ ಚುನಾವಣೆ ಸಂದರ್ಭ ಜಿಲ್ಲೆಯಲ್ಲಿ 17,37,688 ಮತದಾರರಿದ್ದರು. ಇದೀಗ ಈ ಸಂಖ್ಯೆ 17.85 ಲಕ್ಷಕ್ಕೇರಿದೆ ಎಂದು ಹೇಳಿದರು. ಮಹಿಳೆಯರೇ ಅಧಿಕ: ಕರಡು ಪಟ್ಟಿಯ ಒಟ್ಟು ಮತದಾರರಲ್ಲಿ ಮಹಿಳಾ ಮತದಾರರು (9,12,369) ಪುರುಷ ಮತದಾರರಿಗಿಂತ (8,73,389) ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜತೆಗೆ 77 ತೃತೀಯ ಲಿಂಗಿ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯಲ್ಲಿ ಮತದಾರರ- ಜನಸಂಖ್ಯೆ ಅನುಪಾತ ಶೇ. 74.99ರಷ್ಟಿದೆ. ಕಳೆದ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ನಂತರ ಮರಣ ಹೊಂದಿದವರು ಮತ್ತು ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಸ್ಥಳಾಂತರಗೊಂಡವರ ಹೆಸರು ಅಳಿಸದೆ ಇರುವುದು ಇದಕ್ಕೆ ಕಾರಣವಾಗಿರಬಹುದು. ಹಾಗಾಗಿ ಇಂತಹ ಮತದಾರರನ್ನು ಪಟ್ಟಿಯಿಂದ ತೆಗೆಯಲು ಅವರ ಕುಟುಂಬಸ್ಥರು ಅರ್ಜಿ ಸಲ್ಲಿಸಬೇಕು ಎಂದರು. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅಥವಾ ಮೃತರ ಹೆಸರನ್ನು ಅಳಿಸಲು ನಾಗರಿಕರು ಅರ್ಜಿಗಳನ್ನು ಸಲ್ಲಿಸಬಹುದು. ಹೆಸರು ಸೇರಿಸಲು ಬಯಸುವವರು ತಮ್ಮ ಶಾಲಾ ಪ್ರಮಾಣಪತ್ರ, ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಎಸ್‌ಎಸ್‌ಎಲ್‌ಸಿ/ಪಿಯು ಅಂಕಗಳ ಕಾರ್ಡ್, ಪ್ಯಾನ್ ಅಥವಾ ತಮ್ಮ ವಯಸ್ಸನ್ನು ಸಾಬೀತುಪಡಿಸಲು ವೈದ್ಯಕೀಯ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಸಬೇಕು. ವಸತಿ ಪುರಾವೆಯನ್ನು ಸಾಬೀತುಪಡಿಸಲು ಪಡಿತರ ಚೀಟಿ, ಎಲ್‌ಪಿಜಿ ಸಿಲಿಂಡರ್ ರಸೀದಿ, ವಿದ್ಯುತ್ ಬಿಲ್, ಬ್ಯಾಂಕ್ ಪಾಸ್ ಪುಸ್ತಕ, ಪಾಸ್‌ಪೋರ್ಟ್, ಚಾಲನಾ ಪರವಾನಗಿ ನಕಲು, ಬಾಡಿಗೆ ಒಪ್ಪಂದ ಅಥವಾ ಇತರ ದಾಖಲೆಗಳನ್ನು ಸಲ್ಲಿಸಬಹುದು. 18 ವರ್ಷ ಪೂರೈಸಿದವರು ನಮೂನೆ ಸಂಖ್ಯೆ 6ರ ಮೂಲಕ ಅರ್ಜಿ ಸಲ್ಲಿಸಬಹುದು. ತಿದ್ದುಪಡಿ ಮಾಡಲು ನಮೂನೆ 8ರಲ್ಲಿ ಅರ್ಜಿ ಸಲ್ಲಿಸಬೇಕು. ಹೆಸರುಗಳನ್ನು ಅಳಿಸಲು ನಮೂನೆ ಸಂಖ್ಯೆ 7ನ್ನು ಸಲ್ಲಿಸಬೇಕು ಎಂದು ಡಿಸಿ ತಿಳಿಸಿದರು. ಹೆಚ್ಚಿನ ವಿವರಗಳಿಗಾಗಿ ಜನರು ceokarnataka.kar.nic.in ಅಥವಾ https://voters.eci.gov.in ಅಥವಾ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅಥವಾ www.dk.nic.in ಗೆ ಭೇಟಿ ನೀಡಬಹುದು. ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಇದ್ದರು. ಮಂಗಳೂರು ದಕ್ಷಿಣದಲ್ಲಿ ಮಹಿಳಾ ಅನುಪಾತ ಅಧಿಕ ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 1,17,936 ಪುರುಷರು ಹಾಗೂ 1,28,681 ಮಹಿಳಾ ಮತದಾರರಿದ್ದು, ಇಲ್ಲಿ ಮಹಿಳಾ ಮತದಾರರ ಅನುಪಾತ 1000: 1091 ಇದೆ. ಬೆಳ್ತಂಗಡಿಯಲ್ಲಿ ಮಹಿಳಾ ಅನುಪಾತ 1011, ಮೂಡಬಿದಿರೆಯಲ್ಲಿ 1069, ಮಂಗಳೂರು ನಗರ ಉತ್ತರದಲ್ಲಿ 1061, ಮಂಗಳೂರು 1036, ಬಂಟ್ವಾಳ 1033, ಪುತ್ತೂರು 1028 ಹಾಗೂ ಸುಳ್ಯದಲ್ಲಿ ಮಹಿಳಾ ಮತದಾರರ ಅನುಪಾತ 1022 ಇದೆ.

Share this article