ರೈತರಿಗೆ ವಕ್ಕರಿಸಿರುವ ಪರಿಭಾವಿತ ಅರಣ್ಯ ಭೂತ

KannadaprabhaNewsNetwork |  
Published : Nov 26, 2024, 12:45 AM IST

ಸಾರಾಂಶ

ಅನ್ನದಾತರು ಮಾತ್ರವಲ್ಲ, ಸರ್ಕಾರಿ ಜಾಗವೂ ಸಿಗದೇ ಜಿಲ್ಲೆಯ ಅಭಿವೃದ್ಧಿಗೂ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಪರಿಭಾವಿತ ಅರಣ್ಯವೆಂದು ಸರ್ಕಾರದಿಂದ ಘೋಷಣೆಯಾಗಿರುವ ಪ್ರದೇಶದಲ್ಲಿ ಪ್ರಸ್ತುತ ಸ್ವಾಭಾವಿಕ ಗಿಡ, ಮರ, ಕೆರೆ ಕುಂಟೆ, ಕಲ್ಲುಬಂಡೆ, ಲೀಸ್‌ ಲ್ಯಾಂಡ್‌, ಮುಜರಾಯಿ ಜಮೀನುಗಳು ಸಹ ಅರಣ್ಯಇಲಾಖೆ ಹೆಸರು ನಮೂದಿಸಲಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರೈತರ ಜಮೀನುಗಳ ಮೇಲೆ ಒಂದಿಲ್ಲೊಂದು ವಕ್ಕರಿಸಿ ಕೊಳ್ಳುತ್ತಿರುವುದರಿಂದ ಅನ್ನದಾತ ಕಂಗಾಲಾಗಿದ್ದಾನೆ. ಜಿಲ್ಲೆಯಲ್ಲಿ ಜಮೀನುಗಳಿಗೆ ವಕ್ಫ್ ಭೂತದ ನಂತರ ವಕ್ಕರಿಸಿರುವ ಪರಿಭಾವಿತ ಅರಣ್ಯ ಭೂತವಂತೂ ರೈತರನ್ನು ಹೈರಾಣಾಗಿಸಿದೆ.

ಜಿಲ್ಲೆಯ ಸಾಕಷ್ಟು ರೈತರ ಹಾಗೂ ಸರ್ಕಾರಿ ಜಮೀನುಗಳ ಪಹಣಿಗಳಲ್ಲಿ ಡೀಮ್ಡ್ ಫಾರೆಸ್ಟ್‌ ಎಂದು ನಮೂದಿಸಲಾಗಿದೆ. ಇದೇ ಈಗ ಪರಸ್ಪರ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದ್ದು, ರೈತರು ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಆತಂಕಗೊಳ್ಳುತ್ತಿದ್ದಾರೆ.

ಅರಣ್ಯ ಇಲಾಖೆ ಹೆಸರು ನಮೂದು

ಅನ್ನದಾತರು ಮಾತ್ರವಲ್ಲ, ಸರ್ಕಾರಿ ಜಾಗವೂ ಸಿಗದೇ ಜಿಲ್ಲೆಯ ಅಭಿವೃದ್ಧಿಗೂ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಪರಿಭಾವಿತ ಅರಣ್ಯವೆಂದು ಸರ್ಕಾರದಿಂದ ಘೋಷಣೆಯಾಗಿರುವ ಪ್ರದೇಶದಲ್ಲಿ ಪ್ರಸ್ತುತ ಸ್ವಾಭಾವಿಕ ಗಿಡ, ಮರ, ಕೆರೆ ಕುಂಟೆ, ಕಲ್ಲುಬಂಡೆ, ಲೀಸ್‌ ಲ್ಯಾಂಡ್‌, ಮುಜರಾಯಿ ಜಮೀನುಗಳು ಸಹ ಅರಣ್ಯಇಲಾಖೆ ಹೆಸರು ನಮೂದಿಸಲಾಗಿದೆ.

ವಿವಾದಿತ 49 ಸಾವಿರ ಎಕರೆ

ಜಿಲ್ಲೆಯಲ್ಲಿ ಒಟ್ಟು 49 ಸಾವಿರ ಎಕರೆ ಪ್ರದೇಶ ಈಗ ವಿವಾದಕ್ಕೆ ಸಿಲುಕಿದೆ. ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಾಗಿರುವ ಕಟ್ಟಡಗಳ ನಿರ್ಮಾಣ ಸೇರಿದಂತೆ ಇನ್ನಿತರ ಮೂಲಸೌಕರ್ಯ ಕಲ್ಪಿಸಲು ಅಗತ್ಯವಾಗಿರುವ ಜಾಗವೂ ನಗರಗಳ ಆಸುಪಾಸು ಸಿಗುತ್ತಿಲ್ಲ. ಖಾಲಿ ಇರುವ ಜಾಗಕ್ಕೆಲ್ಲಾ ಡೀಮ್ಡ್ ಫಾರೆಸ್ಟ್‌ ಎಂದು ತೋರಿಸುತ್ತಿದ್ದು, ಸರ್ಕಾರಿ ಜಾಗ ಸಿಗುವುದೇ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಪುರಾತನ ಕಾಲದ ಕಾಯಿದೆಯಿಂದ ಇರುವ ಖಾಲಿ ಭೂಮಿಯೆಲ್ಲ ಪರಿಭಾವಿತ ಅರಣ್ಯ ಪ್ರದೇಶ ಎಂದು ಘೋಷಿಸಿದ್ದು ರೈತರನ್ನು ಕಂಗೆಡಿಸಿದೆ.

ರಾಜ್ಯದಲ್ಲಿ ನಿಗದಿತ ಪ್ರಮಾಣದ ಅರಣ್ಯವಿರಬೇಕು ಎಂದು 1982ರಲ್ಲಿ ಕಂದಾಯ ಇಲಾಖೆಯ ಅಧೀನದಲ್ಲಿದ್ದ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಲಾಯಿತು. ಇದರ ಆಧಾರದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಆರಂಭಿಸಿದರು. ಇದು ರಾಜ್ಯವ್ಯಾಪಿ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿತು.

ಜಾರಿಯಾಗದ ವರದಿ:

ಸುಪ್ರಿಂಕೋರ್ಟ್‌ನ 1996ರ ಗೋಧಾ ವರ್ಮನ್‌ ಪ್ರಕರಣದ ತೀರ್ಪಿನ ಮಾನದಂಡದಂತೆ ಇಂತಿಷ್ಟು ಪ್ರದೇಶದಲ್ಲಿ ಇಂತಿಷ್ಟು ಮರಗಳಿದ್ದರೆ ಮಾತ್ರ ಅದನ್ನು ಅರಣ್ಯ ಎಂಬಂತೆ ವರದಿ ಸಿದ್ಧಪಡಿಸಲಾಗಿದೆ. 2015ರಲ್ಲಿ ಅಂದಿನ ಸರ್ಕಾರ ಈ ವರದಿಯನ್ನು ಸಂಪುಟದ ಅನುಮೋದನೆಗಾಗಿ ಮಂಡನೆ ಮಾಡಿತ್ತು. ಆದರೆ, ಅನುಮೋದನೆ ನಂತರ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಬಳಿಕ, ಪ್ರಕರಣಗಳು ಉಳಿದುಕೊಂಡರೆ ಮತ್ತೊಮ್ಮೆ ಪರಿಗಣಿಸಲು ಕಷ್ಟವಾಗುತ್ತದೆ ಎಂದು ಅಂತಿಮ ದೃಢೀಕರಣಕ್ಕೆಂದು ಸೂಚಿಸಲಾಗಿತ್ತು. ಆ ಪ್ರಕ್ರಿಯೆಯಲ್ಲಿ ಪ್ರಗತಿ ಕಾಣದೇ ಸಾಗುವಳಿದಾರರು ಸಮಸ್ಯೆ ಎದುರಿಸುವಂತಾಗಿದೆ.ಅರಣ್ಯ ಇಲಾಖೆ ದಾಳಿಗೆ ತಡೆ

ದಶಕಗಳಿಂದ ಸಾಗುವಳಿ ಮಾಡುತ್ತಿರುವ ಜಮೀನಿಗೂ ಅರಣ್ಯ ಇಲಾಖೆಯಿಂದ ಬೇಲಿ ಹಾಕಲು ಆರಂಭಿಸಿದ್ದರು. ಕೃಷಿ ಮಾಡುತ್ತಿದ್ದ ರೈತರೆಲ್ಲ ದಿಕ್ಕೆಟ್ಟು ಕೂತಿದ್ದರು. ಕೆಲವೆಡೆ ಸರ್ಕಾರವೇ ರೈತರಿಗೆ ಪಹಣಿ ಹಾಗೂ ಇನ್ನಿತರ ದಾಖಲೆಗಳನ್ನು ನೀಡಿ ಜಮೀನನ್ನು ಮಂಜೂರು ಮಾಡಿದೆ. ಸರ್ಕಾರದ ದಾಖಲೆಗಳನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತೋರಿಸಿದರೂ ಪ್ರಯೋಜನವಾಗುತ್ತಿರಲಿಲ್ಲ. ಕೊನೆಗೂ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಮಧ್ಯಪ್ರವೇಶದಿಂದ ಸದ್ಯಕ್ಕೆ ಅರಣ್ಯ ಇಲಾಖೆಯವರ ದಾಳಿ ನಿಂತಿದೆ. ಆದರೆ ದಾಖಲೆಗಳಲ್ಲಿ ಡೀಮ್ಡ್ ಫಾರೆಸ್ಟ್‌ ಮಾತ್ರ ಇನ್ನೂ ಹಾಗೇ ಉಳಿದುಕೊಂಡಿದೆ.

ನೂರಾರು ಪ್ರಕರಣ ದಾಖಲು

ಜಿಲ್ಲೆಯಲ್ಲಿ ಪರಿಭಾವಿತ ಅರಣ್ಯ ಪ್ರದೇಶದ ಸಂಬಂಧ ಜಿಲ್ಲೆಯಲ್ಲಿನೂರಾರು ಪ್ರಕರಣಗಳು ದಾಖಲಾಗಿವೆ. ಹೀಗಾಗಿ ರಾಜ್ಯ ಸರಕಾರದ ವತಿಯಿಂದ ಜಂಟಿ ಸರ್ವೆ ಮಾಡಲು ನಿರ್ಧರಿಸಲಾಗಿದ್ದು, ಈಗಾಗಲೇ ಸಾಕಷ್ಟು ಸರ್ವೆ ಕೂಡಾ ನಡೆದಿದೆ. ಸರಣಿ ಸಭೆಗಳನ್ನು ನಡೆಸಲು ಕಸರತ್ತು ನಡೆಸಲಾಗುತ್ತಿದೆ. ಇದರಲ್ಲಿರೈತರಿಗೆ ಹಾಗೂ ಸರ್ಕಾರಕ್ಕೆ ಸೇರಿದ ಜಮೀನನ್ನು ಉಳಿಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಆದರೆ ಯಾವಾಗ ಎನ್ನುವುದೇ ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ಸಿಗದೆ ಅನ್ನದಾತರು ಕಂಗಾಲಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ