1, 2 ರಂದು 4ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ

KannadaprabhaNewsNetwork | Published : Feb 27, 2025 2:02 AM

ಸಾರಾಂಶ

ಬರುವ ಮಾ.1 ಮತ್ತು 2 ರಂದು ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ 25 ವರ್ಷಗಳ ಪಯಣವನ್ನು ದಾಖಲಿಸುವ ರಜತ ಮಹೋತ್ಸವ ಮತ್ತು ನಾಲ್ಕನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸಲಾಗುತ್ತಿದೆ. ಬೆಳಗಾವಿಯ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಸಮಾರಂಭ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬರುವ ಮಾ.1 ಮತ್ತು 2 ರಂದು ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ 25 ವರ್ಷಗಳ ಪಯಣವನ್ನು ದಾಖಲಿಸುವ ರಜತ ಮಹೋತ್ಸವ ಮತ್ತು ನಾಲ್ಕನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸಲಾಗುತ್ತಿದೆ. ಬೆಳಗಾವಿಯ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಸಮಾರಂಭ ನಡೆಯಲಿದೆ.

1 ರಂದು ಬೆಳಗ್ಗೆ 10 ಗಂಟೆಗೆ ರಜತ ಮಹೋತ್ಸವದ ಉದ್ಘಾಟನೆ ಮಾಜಿ ಸಚಿವ, ಭಾರತ ಸ್ಕೌಟ್ಸ್ ಆ್ಯಂಡ್‌ ಗೈಡ್ಸ್ ರಾಜ್ಯ ಕಮಿಷನರ್ ಪಿ.ಜಿ.ಆರ್.ಸಿಂಧ್ಯಾ ಅವರಿಂದ ನೆರವೇರಲಿದ್ದು, ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜ್ಯ ಚುಸಾಪ ಸಂಚಾಲಕ ಡಾ.ಎಂ.ಜಿ.ಆರ್.ಅರಸ್ ಅಧ್ಯಕ್ಷತೆ ವಹಿಸುವರು. ಸಮಾರಂಭದ ಅಂಗವಾಗಿ ಚುಟುಕು ಸಂಭ್ರಮ ಎಂಬ ಸ್ಮರಣ ಸಂಚಿಕೆಯನ್ನು ಎಸ್.ಎಂ.ಕುಲಕರ್ಣಿ ಮತ್ತು ಚುಟುಕು ಪಾರಿಜಾತ ಎಂಬ ಪ್ರಾತಿನಿಧಿಕ ಚುಟುಕು ಸಂಕಲನವನ್ನು ಪ್ರಿ.ವಿ.ಎನ್.ಜೋಶಿ ಬಿಡುಗಡೆ ಮಾಡಲಿದ್ದು, ಬಾಸೂರು ತಿಪ್ಪೇಸ್ವಾಮಿ ಅವರು ಪುಸ್ತಕ ಪ್ರದರ್ಶನ ಮಾರಾಟ ಸ್ಟಾಲ್ ಉದ್ಘಾಟಿಸಲಿದ್ದಾರೆ.

ಬೆಳಗ್ಗೆ 11.30ಕ್ಕೆ ಬೆಳಗಾವಿ ಜಿಲ್ಲೆಯವರೇ ಆದ ಪ್ರಸಿದ್ಧ ಕವಿ ಡಾ.ಎಂ.ಅಕಬರ ಅಲಿ ಅವರ ಜನ್ಮಶತಮಾನೋತ್ಸವದ ನಿಮಿತ್ತ ಡಾ.ಎಚ್.ಐ.ತಿಮ್ಮಾಪುರ ಅವರಿಂದ ವಿಶೇಷ ಉಪನ್ಯಾಸವಿರುತ್ತದೆ. ಮಧ್ಯಾಹ್ನ 12 ಗಂಟೆಗೆ ಬಹುಭಾಷಾ ಚುಟುಕು ವಾಚನ ಗೋಷ್ಠಿ ನಡೆಯಲಿದ್ದು ,ಡಾ. ಬಸವರಾಜ ಜಗಜಂಪಿ ಅವರ ಅಧ್ಯಕ್ಷತೆಯಲ್ಲಿ 9 ಭಾಷೆಗಳ 14 ಕವಿಗಳು ಚುಟುಕು ವಾಚನ ಮಾಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ವಿವಿಧ ಕವಿಗಳ ನೂತನ ಚುಟುಕು ಕೃತಿಗಳ ಬಿಡುಗಡೆಯನ್ನು ಡಾ.ಎಚ್.ಬಿ.ಕೋಲಕಾರ ಅವರು ಮಾಡಲಿದ್ದು, 3 ಗಂಟೆಗೆ ನಡೆಯುವ ಹಾಸ್ಯ ರಸಾಯನ ಕಾರ್ಯಕ್ರಮದಲ್ಲಿ ಮಹೇಶ ಚಟ್ನಳ್ಳಿ ಚಿಕ್ಕಮಗಳೂರು, ಡಾ.ಗುರುದೇವಿ ಹುಲೆಪ್ಪನವರಮಠ, ಅಶೋಕ ಮಳಗಲಿ ಭಾಗವಹಿಸುವರು. ನಂತರ ಪ್ರೊ.ಬಿ.ಆರ್.ಪೊಲೀಸಪಾಟೀಲ ಬನಹಟ್ಟಿ ಮತ್ತು ತಂಡದವರಿಂದ ಲಾವಣಿ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ರಿಂದ ರಾಜ್ಯಮಟ್ಟದ ಚುಟುಕು ವಾಚನ ಸ್ಪರ್ಧೆ ಡಾ.ಪಿ.ಜಿ.ಕೆಂಪಣ್ಣನವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಾ.2 ರಂದು ಬೆಳಗ್ಗೆ 9 ಗಂಟೆಗೆ 4ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯನ್ನು ಬೆಳಗಾವಿ ನಗರ ಶಾಸಕ ಅಸೀಫ್ ಸೇಟ್ ಉದ್ಘಾಟಿಸುವರು. ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಉದ್ಘಾಟಿಸಲಿದ್ದಾರೆ ಮತ್ತು ಹುಕ್ಕೇರಿ ಹಿರೇಮಠದ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲೆಯ ಹಿರಿಯ ಚುಟುಕು ಕವಿ ಅಪ್ಪಾಸಾಹೇಬ ಅಲಿಬಾದಿ ಸರ್ವಾಧ್ಯಕ್ಷತೆ ವಹಿಸುವರು. ಬೆಳಗ್ಗೆ 11ಕ್ಕೆ ಚುಟುಕು ಸಾಹಿತ್ಯದ ಕುರಿತು ನಾಗೇಶ ಜೆ.ನಾಯಕ ಅವರಿಂದ ವಿಶೇಷ ಉಪನ್ಯಾಸವಿದೆ. ಮಹಿಳಾ ಚುಟುಕು ವಾಚನ ಗೋಷ್ಠಿ ನಡೆಯಲಿದ್ದು, ಖ್ಯಾತ ಲೇಖಕಿ ಮಧುರಾ ಕರ್ಣಂ ಬೆಂಗಳೂರು ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಲಿದ್ದು, ವಿಶ್ವಲಿಂಗಾಯತ ಧರ್ಮಪೀಠದ ಜಗದ್ಗುರು ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರೊ.ಸಿದ್ದು ಯಾಪಲಪರವಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಸರ್ವಾಧ್ಯಕ್ಷರ ಸನ್ಮಾನವಿದ್ದು ಡಾ.ಎಂ.ಜಿ.ಆರ್.ಅರಸ್ ಮತ್ತಿತರ ಗಣ್ಯರು ಉಪಸ್ಥಿತರಿರುವರು.ಕನ್ನಡಪ್ರಭ- ಏಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿಯ ಸುವರ್ಣ ಕನ್ನಡಿಗ-2025ರ ಪ್ರಶಸ್ತಿ ಪುರಸ್ಕೃತ ಅಪ್ಪಾಸಾಹೇಬ ಸರ್ವಾಧ್ಯಕ್ಷ

ಬೆಳಗಾವಿ ಜಿಲ್ಲಾ 4ನೇಯ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ 64 ವರ್ಷ ವಯಸ್ಸಿನ ಅಪ್ಪಾಸಾಹೇಬ ಅಲಿಬಾದಿ ಅಥಣಿಯವರಾಗಿದ್ದು ಜಿಲ್ಲೆಯ ಹಿರಿಯ ಕವಿಗಳು. ಈವರೆಗೆ ಅವರು ಸುಮಾರು 50 ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ 20ಕ್ಕೂ ಹೆಚ್ಚು ಚುಟುಕು, ಹನಿಗವನ , ಮತ್ತು ಆಧುನಿಕ ವಚನ ಸಂಗ್ರಹಗಳಿವೆ. ಅಲಿಬಾದಿಯವರ ಕುರಿತಾಗಿಯೇ 4 ಕೃತಿಗಳು ರಚನೆಯಾಗಿದ್ದು, ಸುವರ್ಣಮಿಂಚು ಅವರ 50ನೇ ವರ್ಷದ ಅಭಿನಂದನ ಗ್ರಂಥ. ಭಾರತೀಯ ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿಯಾಗಿ ನಿವೃತ್ತರಾಗಿರುವ ಅವರು ಸಾಮಾಜಿಕ, ಸಾಂಸ್ಕೃತಿಕ ಸೇವಾ ಕಾರ್ಯಗಳಲ್ಲೂ ನಿರತರಾಗಿದ್ದು, ಕೃಷಿಕರೂ ಹೌದು. ತಮ್ಮ ಮನೆಯಲ್ಲೇ 10 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನೊಳಗೊಂಡ ಸಿದ್ದೇಶ್ವರ ಗ್ರಂಥಭಂಡಾರ ಸ್ಥಾಪಿಸಿದ್ದಾರೆ. ತಮ್ಮ ಸಾಹಿತ್ಯ ಸೇವೆಗಾಗಿ ನಾಲ್ವತ್ತಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದು, ಅಲಿಬಾದಿ ಪ್ರತಿಷ್ಠಾನ ಸಹಿತ ಹಲವು ಸಂಘ-ಸಂಸ್ಥೆಗಳ ಸಂಸ್ಥಾಕರಾಗಿ, ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಈಚೆಗೆ ಲಕ್ಷದ್ವೀಪದಲ್ಲಿ ನಡೆದ ಸಮಾವೇಶದ ಅಧ್ಯಕ್ಷ ಸ್ಥಾನದ ಗೌರವ ಮತ್ತು ಕನ್ನಡಪ್ರಭ- ಏಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿಯ ಸುವರ್ಣ ಕನ್ನಡಿಗ-2025ರ ಪ್ರಶಸ್ತಿಗೂ ಭಾಜನರಾಗಿದ್ದಾರೆ.

Share this article