ಅ.26-27ರಂದು ಮೈಸೂರಿನಲ್ಲಿ 4 ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನ

KannadaprabhaNewsNetwork |  
Published : Oct 17, 2024, 12:07 AM IST
ಮೈಸೂರಿನಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕಾರ್ಮಿಕ ಸಮ್ಮೇಳನದ ಭಿತ್ತಿಚಿತ್ರವನ್ನು ಸಂಘಟನೆಯ ಮುಖಂಡರು ಬಳ್ಳಾರಿಯಲ್ಲಿ ಬುಧವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.  | Kannada Prabha

ಸಾರಾಂಶ

ಕಾರ್ಮಿಕ ಹಕ್ಕುಗಳನ್ನು ರಕ್ಷಿಸಬೇಕು.

ಬಳ್ಳಾರಿ: ಕೇಂದ್ರೀಯ ಕಾರ್ಮಿಕ ಸಂಘಟನೆ ಎಐಯುಟಿಯುಸಿ ಸಂಘಟಿತ 4ನೇ ರಾಜ್ಯಮಟ್ಟದ ಕಾರ್ಮಿಕ ಸಮ್ಮೇಳನ ಅಕ್ಟೋಬರ್ 26-27 ರಂದು ರಂದು ಮೈಸೂರಿನಲ್ಲಿ ಸಂಘಟಿಸಲಾಗಿದೆ ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಹಕ್ಕುಗಳನ್ನು ರಕ್ಷಿಸಬೇಕು. ದುಡಿವ ಜನರ ವಿರುದ್ಧದ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ ತನ್ನ ಜನವಿರೋಧಿ ನೀತಿಯಿಂದ ಹಿಂದೆ ಸರಿಯಬೇಕು. ಕಾರ್ಮಿಕರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದರು.

ಆಶಾ, ಅಂಗನವಾಡಿ ಮತ್ತು ಬಿಸಿ ಊಟ ಕಾರ್ಯಕರ್ತೆಯರಿಗೆ ಕನಿಷ್ಟ ವೇತನ ಜಾರಿಗೊಳಿಸಬೇಕು. ಬೆಲೆ ಏರಿಕೆ, ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಪ್ರತಿಯೊಬ್ಬ ಕಾರ್ಮಿಕನಿಗೂ ಕನಿಷ್ಠ ವೇತನ ಖಾತ್ರಿಯಾಗಬೇಕು. ಇಎಸ್‌ಐ-ಪಿಎಫ್ ಸೌಲಭ್ಯವನ್ನು ನೀಡಬೇಕು ಎಂಬುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಾಗೂ ಕಾರ್ಮಿಕ ಹೋರಾಟವನ್ನು ಮತ್ತಷ್ಟೂ ಬಲಪಡಿಸುವ ಉದ್ದೇಶದಿಂದ ರಾಜ್ಯಮಟ್ಟದ ಕಾರ್ಮಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅಕ್ಟೋಬರ್ 26 ರಂದು ಕಾರ್ಮಿಕರ ಬೃಹತ್ ಮೆರವಣಿಗೆ ನಡೆಯಲಿದೆ.

ನಂಜರಾಜ ಬಹದ್ದೂರ್ ಛತ್ರದಿಂದ ಟೌನ್ ಹಾಲ್ ಮೈದಾನದವರೆಗೆ ಮೆರವಣಿಗೆ ಸಾಗಲಿದೆ. ಸಮ್ಮೇಳನದ ಬಹಿರಂಗ ಅಧಿವೇಶನವು ಅಕ್ಟೋಬರ್ 26 ರಂದು ಮಧ್ಯಾಹ್ನ 12ಗಂಟೆಗೆ ಶುರುಗೊಳ್ಳಲಿದೆ. ಎಐಯುಟಿಯುಸಿ ಅಖಿಲ ಭಾರತ ಅಧ್ಯಕ್ಷ ಕೆ.ರಾಧಾಕೃಷ್ಣ ಅವರು ಸಮ್ಮೇಳನಕ್ಕೆ ಚಾಲನೆ ನೀಡುವರು. ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಶಂಕರ್ ದಾಸ್ ಗುಪ್ತ ಹಾಗೂ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಅವರು ಪ್ರಮುಖ ಭಾಷಣ ಮಾಡುವರು. ಚಂದ್ರಶೇಖರ್ ಮೇಟಿ ಅವರು ಪ್ರಾಸ್ತಾವಿಕ ಮಾತನಾಡುವರು. ಉಗ್ರನರಸಿಂಹೇಗೌಡ ಅವರು ಕಾರ್ಯಕ್ರಮ ನಿರ್ವಹಿಸುವರು.

ಸಮ್ಮೇಳನದಲ್ಲಿ ಸೂಕ್ತಿ ಹಾಗೂ ಛಾಯಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಪ್ರತಿನಿಧಿ ಅಧಿವೇಶನವು ಅಕ್ಟೋಬರ್ 26ರ ಸಂಜೆ 5ಕ್ಕೆ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಎಸ್.ಯು.ಸಿ.ಐ (ಸಿ) ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಉಮಾ ಭಾಗವಹಿಸಲಿದ್ದಾರೆ. ಇತರೆ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಮುಖಂಡರು ಪ್ರತಿನಿಧಿ ಅಧಿವೇಶನದಲ್ಲಿ ಭಾಗವಹಿಸಿ ಸಮ್ಮೇಳನಕ್ಕೆ ಶುಭ ಕೋರಲಿದ್ದಾರೆ. ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕೈಗಾರಿಕಾ ಕಾರ್ಮಿಕರು, ವೈದ್ಯಕೀಯ ಕಾಲೇಜು, ಸರ್ಕಾರಿ ಹಾಸ್ಟೆಲ್, ವಿಶ್ವವಿದ್ಯಾಲಯ ಹಾಗೂ ಇನ್ನಿತರ ಕ್ಷೇತ್ರಗಳ ಗುತ್ತಿಗೆ ಕಾರ್ಮಿಕರು, ಗಣಿ ಕಾರ್ಮಿಕರು, ವಿದ್ಯುತ್ ಕ್ಷೇತ್ರದ ನೌಕರರು, ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ನೌಕರರು, ಕಟ್ಟಡ ಕಾರ್ಮಿಕರು, ಇನ್ನಿತರ ಕ್ಷೇತ್ರಗಳ ಕಾರ್ಮಿಕರು ಬಹಿರಂಗ ಹಾಗೂ ಪ್ರತಿನಿಧಿ ಅಧಿವೇಶನಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್, ಉಪಾಧ್ಯಕ್ಷ ಎ.ಶಾಂತಾ, ಜಂಟಿ ಕಾರ್ಯದರ್ಶಿ ಸುರೇಶ್ ಸುದ್ದಿಗೋಷ್ಠಿಯಲ್ಲಿದ್ದರು. ಇದೇ ವೇಳೆ ರಾಜ್ಯ ಸಮ್ಮೇಳನದ ಪೋಸ್ಟರ್‌ ಬಿಡುಗಡೆಗೊಳಿಸಲಾಯಿತು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ