ಯಲ್ಲಾಪುರ: ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ನೇಮಕಗೊಂಡ ಗುತ್ತಿಗೆ ಸಿಬ್ಬಂದಿಗೆ ನೀಡುವ ಸಂಬಳದಲ್ಲಿ ಪ್ರತಿ ತಿಂಗಳು ₹೪-೫ ಸಾವಿರ ಕಡಿತ ಮಾಡಲಾಗುತ್ತಿದೆ.
ಸರ್ಕಾರ ನೀಡುವ ಶೇ. ೩ರಷ್ಟು ಸೇವಾ ಶುಲ್ಕ ಬಿಟ್ಟು ಲಕ್ಷಾಂತರ ಹಣವನ್ನು ಗುತ್ತಿಗೆದಾರ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಮಹೇಶ ಲಕ್ಷ್ಮಣ ಗುಮಚಿ ದೋಚುತ್ತಿರುವ ವಿಷಯ ತಾಲೂಕು ವೈದ್ಯಾಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಸೆ. 17ರಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಕುರಿತು ಶಾಸಕ ಶಿವರಾಮ ಹೆಬ್ಬಾರ, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಜಿಲ್ಲಾ ವೈದ್ಯಾಧಿಕಾರಿಗಳಿಗೂ ಮಾಹಿತಿ ನೀಡಿದ್ದರು.
ಸರ್ಕಾರದ ನಿಯಮದಂತೆ ನಾನ್ ಕ್ಲಿನಿಕಲ್ ಸಿಬ್ಬಂದಿಗೆ ತಿಂಗಳಿಗೆ ಒಟ್ಟು ₹೨೭,೨೧೭ರಲ್ಲಿ ಪಿಎಫ್, ಇಎಸ್‌ಐ, ಸೇವಾ ಶುಲ್ಕ ಕಡಿತ ಮಾಡಿ, ₹೧೬,೮೦೭ ಬ್ಯಾಂಕ್ ಖಾತೆಗೆ ಹಾಕಬೇಕು. ಆದರೆ ₹೧೩,೯೪೫ ಮಾತ್ರ ಹಾಕಲಾಗುತ್ತಿದೆ. ಅದರಲ್ಲೂ ಪ್ರತಿ ತಿಂಗಳು ₹೫೦೦ ಮರಳಿ ಪಡೆಯಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಪ್ರತಿ ತಿಂಗಳು ೧೦ರ ಒಳಗೆ ಇವರಿಗೆ ಸಂಬಳ ಹಾಕಲಾಗುತ್ತಿದೆ ಎನ್ನುವುದು ತಿಳಿದುಬಂತು.ಡಿ ಗ್ರುಪ್ ನ ಸಿಬ್ಬಂದಿಗೆ ₹೨೨,೫೮೯ ವೇತನ ನಿಗದಿ ಮಾಡಿದ್ದು, ಪಿಎಫ್, ಇಎಸ್‌ಐ, ಸೇವಾ ಶುಲ್ಕಗಳನ್ನು ಕಡಿತ ಮಾಡಿ, ₹16,807 ಬ್ಯಾಂಕ್ ಖಾತೆಗೆ ಹಾಕಬೇಕು. ಆದರೆ ₹೧೩,೯೪೫ ಮಾತ್ರ ಹಾಕಲಾಗುತ್ತಿದೆ. ಅದರಲ್ಲೂ ಪ್ರತಿ ತಿಂಗಳು ₹೫೦೦ ಮರಳಿ ಪಡೆಯಲಾಗುತ್ತಿದೆ. ಯಲ್ಲಾಪುರ ಆಸ್ಪತ್ರೆಯಲ್ಲಿ ನಾನ್ ಕ್ಲಿನಿಕಲ್ ಹಾಗೂ ಡಿ ವರ್ಗ ಸೇರಿ ತಲಾ ೧೦ ಸಿಬ್ಬಂದಿ ಸೇರಿ ೨೦ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.
ಸರ್ಕಾರದ ನೀತಿಯಂತೆ ವಾರಕ್ಕೊಂದು ರಜೆ ನೀಡಬೇಕು. ವರ್ಷಕ್ಕೆ ೧೦ ದಿನ ವೈದ್ಯಕೀಯ ರಜೆ, ೫೦ ವರ್ಷದೊಳಗಿನ ಮಹಿಳೆಯರಿಗೆ ಮಾಸಿಕ ಋತುಚಕ್ರ ರಜೆ ಹೀಗೆ ಆಕಸ್ಮಿಕ ಅನಾನುಕೂಲತೆಯಿಂದ ರಜೆ ಪಡೆದಾಗ, ವೇತನ ಸಹಿತ ರಜೆ ನೀಡಬೇಕು. ಆದರೆ ಅಂದಿನ ಸಂಬಳವನ್ನು ಕಡಿತ ಮಾಡಿ ಕೊಡುತ್ತಿರುವುದು ಕೂಡಾ ತಿಳಿದು ಬಂದಿದೆ.