ಯಲ್ಲಾಪುರ: ಕಾಂಗ್ರೆಸ್ ಸರ್ಕಾರದ ಆಡಳಿತ ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದ್ದು, ಹಗರಣಗಳ ಪಟ್ಟಿ ಬೆಳೆಯುತ್ತಲೇ ಇದೆ. ಬಡವರ ಮನೆ ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಪ್ರತಿ ಮನೆ ಮನೆಗೂ ಕಾಂಗ್ರೆಸ್ ಪಕ್ಷದ ಆಡಳಿತದ ಸೋಲನ್ನು ಮನದಟ್ಟು ಮಾಡಲು ನಮ್ಮ ಮನೆ ನಮ್ಮ ಹಕ್ಕು ಜನಾಂದೋಲನ ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.
ಅಭಿವೃದ್ಧಿ ಶೂನ್ಯವಾದ ಆಡಳಿತದಿಂದ ಜನತೆ ಏನನ್ನು ನಿರೀಕ್ಷಿಸಲು ಸಾಧ್ಯ. ಸರ್ಕಾರದ ಯಾವ ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ. ಇತ್ತೀಚೆಗೆ ಕಾಂಗ್ರೆಸ್‌ನ ಶಿವಲಿಂಗೇಗೌಡ ಸ್ವತಃ ಹೇಳಿಕೆ ನೀಡಿ ಲಂಚ ತೆಗೆದುಕೊಳ್ಳುವುದು ಧರ್ಮ ಕಾರ್ಯ ಆಗಿದೆ. ಲಂಚ ತೆಗೆದುಕೊಳ್ಳಲಿ ಬಿಡಿ ಎನ್ನುವ ಮೂಲಕ ಸಾರ್ವಜನಿಕರಿಗೆ ಒಬ್ಬ ಜನಪ್ರತಿನಿಧಿಯಾಗಿ ಅವಮಾನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ದುರಾಡಳಿತ ಜನಸಾಮಾನ್ಯರಿಗೆ ಕಂಟಕವಾಗಿ ಪರಿಣಮಿಸಿದೆ. ವಜ್ರಳ್ಳಿಯ ಗ್ರಾಮ ಪಂಚಾಯಿತಿ ಲೂಟಿ ಹೊಡೆಯುವ ಕೇಂದ್ರವಾಗುತ್ತಿದೆ ಎಂದರು.
ಗ್ರಾಪಂ ಮಾಜಿ ಸದಸ್ಯ ಜಿ.ಆರ್. ಭಾಗ್ವತ್ ತಾರಿಕುಂಟೆ ಮಾತನಾಡಿ, ಸರ್ವಾಧಿಕಾರಿ ತತ್ವದ ವಜ್ರಳ್ಳಿ ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಅನುದಾನವನ್ನು ಅಭಿವೃದ್ಧಿಗೆ ಬಳಸದೇ ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿ ವಜ್ರಳ್ಳಿ ಪಂಚಾಯಿತಿ ಜನತೆಗೆ ದ್ರೋಹ ಎಸಗಿದೆ ಎಂದರು.ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಇಂದಿನ ನಮ್ಮ ಹೋರಾಟ ನಿರಂತರವಾಗಿ ಇದ್ದು, ಜನಪರವಾಗಿ ತೀರ್ಮಾನ ತೆಗೆದುಕೊಂಡು ಅನ್ಯಾಯದ ವಿರುದ್ಧದ ಕೂಗಿಗೆ ಹೆಚ್ಚು ಶಕ್ತಿ ತುಂಬಿದ್ದೇವೆ. ಕಾಂಗ್ರೆಸ್ ಸರ್ಕಾರವು ಅವನತಿಯ ಹಾದಿಯಲ್ಲಿ ಇದೆ. ಅಭಿವೃದ್ಧಿ ಶೂನ್ಯತೆಯಿಂದ ಕೊಳ್ಳೆ ಹೊಡೆಯುವ ಕಾಂಗ್ರೆಸ್ ಸರ್ಕಾರಕ್ಕೆ ಸದ್ಯದಲ್ಲೇ ತಿಲಾಂಜಲಿ ನೀಡಲಾಗುವುದು ಎಂದರು.