ಅಂಕೋಲಾ ತಾಲೂಕಿನಲ್ಲಿ ಗೃಹಜ್ಯೋತಿ ಶೇ. 93 ಸಮೀಕ್ಷೆ ಪೂರ್ಣ

KannadaprabhaNewsNetwork |  
Published : Sep 24, 2026, 02:15 AM IST
AI | Kannada Prabha

ಸಾರಾಂಶ

ಮನೆ- ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಕೆಲವರು ಸ್ಥಳಾಂತರಗೊಂಡಿರುವುದು, ಕೆಲ ಮನೆಗಳು ಬೀಗ ಹಾಕಿರುವುದು ಸೇರಿದಂತೆ ಹಲವು ಕಾರಣಗಳಿಂದ ಫಲಾನುಭವಿಗಳ ಮಾಹಿತಿ ಪಡೆಯಲು ಸಿಬ್ಬಂದಿ ಪರದಾಡುವಂತಾಗಿದೆ.

ಅಂಕೋಲಾ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಫಲಾನುಭವಿಗಳ ಮರುಪರಿಶೀಲನೆಗೆ ಮುಂದಾಗಿರುವ ಹೆಸ್ಕಾಂಗೆ ಇದೀಗ ಫಲಾನುಭವಿಗಳ ಪತ್ತೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಮನೆ- ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಕೆಲವರು ಸ್ಥಳಾಂತರಗೊಂಡಿರುವುದು, ಕೆಲ ಮನೆಗಳು ಬೀಗ ಹಾಕಿರುವುದು ಸೇರಿದಂತೆ ಹಲವು ಕಾರಣಗಳಿಂದ ಫಲಾನುಭವಿಗಳ ಮಾಹಿತಿ ಪಡೆಯಲು ಸಿಬ್ಬಂದಿ ಪರದಾಡುವಂತಾಗಿದೆ.

ತಾಲೂಕಿನಲ್ಲಿ ಒಟ್ಟು 31,870 ಫಲಾನುಭವಿಗಳು ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಈ ಪೈಕಿ 29,767 ಫಲಾನುಭವಿಗಳ ಹೆಸರು ನೋಂದಣಿಯಾಗಿದ್ದು, ಶೇ. 93.40ರಷ್ಟು ಪ್ರಗತಿ ಸಾಧಿಸಲಾಗಿದೆ. ಆದರೆ, 272ಕ್ಕೂ ಹೆಚ್ಚು ಫಲಾನುಭವಿಗಳ ಹೆಸರು ಹೆಸ್ಕಾಂ ಸಾಫ್ಟವೇರನಲ್ಲೇ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ಮರುಸಮೀಕ್ಷೆ ವೇಳೆ ಬೆಳಕಿಗೆ ಬಂದಿದೆ. ಇದರೊಂದಿಗೆ ಉಳಿದ ಅಂದಾಜು 1831 ಫಲಾನುಭವಿಗಳ ಪೈಕಿ ಕೆಲವರ ಮನೆಗಳು ಬೀಗ ಹಾಕಿರುವುದು, ಕೆಲವರು ಬೇರೆಡೆಗೆ ಸ್ಥಳಾಂತರಗೊಂಡಿರುವುದು, ಇನ್ನೂ ಕೆಲವರು ಮನೆಗಳಿಂದ ನಿರ್ಗಮಿಸಿರುವುದು ಕಂಡುಬಂದಿದೆ. ಕೆಲವರು ಅನ್ಯ ರಾಜ್ಯದ ಆಧಾರ್ ಕಾರ್ಡ್ ಹೊಂದಿರುವುದು ಹಾಗೂ ಕೆಲವು ಪ್ರಕರಣಗಳಲ್ಲಿ ಅಗತ್ಯ ದಾಖಲಾತಿಗಳ ಕೊರತೆಯೂ ಕಂಡುಬಂದಿದೆ.

ಅಚ್ಚರಿಯ ಸಂಗತಿಯೆಂದರೆ, ಇಂತಹ ಹಲವು ಪ್ರಕರಣಗಳಲ್ಲಿ ಫಲಾನುಭವಿಗಳು ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು ಪಡೆಯುತ್ತಲೇ ಇದ್ದಾರೆ. ಹೀಗಾಗಿ ನಿಖರ ಫಲಾನುಭವಿಗಳ ಮಾಹಿತಿ ಸಂಗ್ರಹಿಸಿ, ದಾಖಲೆಗಳನ್ನು ಪರಿಶೀಲಿಸಿ, ಸಾಫ್ಟವೇರನಲ್ಲಿ ಮಾಹಿತಿಯನ್ನು ಸರಿಪಡಿಸುವುದು ಹೆಸ್ಕಾಂಗೆ ಮತ್ತೊಂದು ಸವಾಲಾಗಿದೆ.

ಸೆ. 30ರ ವರೆಗೆ ಸಮೀಕ್ಷೆ ವಿಸ್ತರಣೆ: ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ ಜು. 18ರಿಂದ ಮನೆ- ಮನೆ ಸಮೀಕ್ಷೆ ಆರಂಭಿಸಿತ್ತು. ಆ. 31ಕ್ಕೆ ಸಮೀಕ್ಷೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗದ ಹಿನ್ನೆಲೆ ಸಮೀಕ್ಷೆಯ ಅವಧಿಯನ್ನು ಸೆ. 30ರ ವರೆಗೆ ವಿಸ್ತರಿಸಲಾಗಿದೆ.

ಫಲಾನುಭವಿಗಳಿಂದ ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಸಿಬ್ಬಂದಿ ಮನೆ- ಮನೆಗೆ ತೆರಳಿ ಫಲಾನುಭವಿಗಳ ದಾಖಲೆ, ಸಂಪರ್ಕ ಹಾಗೂ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಕುರಿತು ಮಾಹಿತಿ ಪರಿಶೀಲಿಸುತ್ತಿದ್ದಾರೆ.

ತಾಲೂಕಿನ 31,870 ಫಲಾನುಭವಿಗಳು 200 ಯುನಿಟ್‌ವರೆಗಿನ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಇದೀಗ ಮರುಸಮೀಕ್ಷೆಯ ಮೂಲಕ ಅರ್ಹ ಫಲಾನುಭವಿಗಳ ನಿಖರ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಒತ್ತು ನೀಡಲಾಗಿದೆ.

ಸಾಫ್ಟವೇರನಲ್ಲೇ ಹೆಸರು ನಾಪತ್ತೆ!

272ಕ್ಕೂ ಹೆಚ್ಚು ಫಲಾನುಭವಿಗಳ ಹೆಸರು ಹೆಸ್ಕಾಂ ಸಾಫ್ಟವೇರನಲ್ಲಿ ಕಾಣಿಸುತ್ತಿಲ್ಲ. ಇವರು ಗೃಹಜ್ಯೋತಿ ಸೌಲಭ್ಯ ಪಡೆಯುತ್ತಿದ್ದರೂ, ಸಾಫ್ಟವೇರನಲ್ಲಿ ಮಾಹಿತಿ ಇಲ್ಲದಿರುವುದು ಅಧಿಕಾರಿಗಳಿಗೆ ಹೊಸ ಸವಾಲಾಗಿದೆ. ಇವರ ಮಾಹಿತಿಯನ್ನು ಯಾವ ರೀತಿಯಲ್ಲಿ ದಾಖಲಿಸಿ ಮರುನೋಂದಣಿ ಮಾಡಬೇಕು ಎಂಬ ಕುರಿತು ಇಲಾಖೆಯ ಮಟ್ಟದಲ್ಲಿ ಚಿಂತನೆ ನಡೆದಿದೆ. ನಮ್ಮ ಸಿಬ್ಬಂದಿ ಅತ್ಯಂತ ಕ್ರಿಯಾಶೀಲರಾಗಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಕೆಲವು ಫಲಾನುಭವಿಗಳು ಸಮೀಕ್ಷೆಯ ವೇಳೆ ಸಿಗುತ್ತಿಲ್ಲ. 272ಕ್ಕೂ ಹೆಚ್ಚು ಫಲಾನುಭವಿಗಳ ಮಾಹಿತಿ ಸಾಫ್ಟವೇರನಲ್ಲಿ ಇಲ್ಲ. ಅಂತಹ ಫಲಾನುಭವಿಗಳ ಮಾಹಿತಿಯನ್ನು ಶೀಘ್ರವೇ ದಾಖಲಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅಂಕೋಲಾ ಹೆಸ್ಕಾಂ ಎಇಇ ಪ್ರವೀಣ ನಾಯ್ಕ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೌರಕಾರ್ಮಿಕರ ಸೇವೆ ಸಮಾಜಕ್ಕೆ ಅಮೂಲ್ಯ: ರೆಡ್ಡಿ ರಾಯನಗೌಡ
ವಿಶ್ವಕರ್ಮರ ಕಾಯಕಕ್ಕೆ ಆಧುನಿಕತೆಯ ಸ್ಪರ್ಶ ಅಗತ್ಯ: ನಟರಾಜ್ ಸೋನಾರ್