ಆಯುರ್ವೇದ ದಿನಾಚರಣೆ, ಉಪನ್ಯಾಸ ಮಾಲಿಕೆ, ವಸ್ತು ಪ್ರದರ್ಶನ ಕಾರ್ಯಕ್ರಮ
ಆಯುರ್ವೇದದ ಮೂಲ ತತ್ತ್ವ ಅಳವಡಿಸಿಕೊಳ್ಳುವುದರ ಜೊತೆಗೆ ನಿರಂತರ ಸಂಶೋಧನೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ನಮ್ಮ ಸಾಂಪ್ರದಾಯಿಕ ವೈದ್ಯಕೀಯ ಜ್ಞಾನ ಮತ್ತು ಆಯುರ್ವೇದ ಕ್ಷೇತ್ರವು ಮತ್ತಷ್ಟು ಬೆಳೆಯಲು ಸಾಧ್ಯ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಕುಲ್ ಜೈನ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಬುಧವಾರ ಜಿಪಂ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಧನ್ವಂತರಿ ಜಯಂತಿ ಅಂಗವಾಗಿ 11ನೇ ಆಯುರ್ವೇದ ದಿನಾಚರಣೆ, ಉಪನ್ಯಾಸ ಮಾಲಿಕೆ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ದೇಶವು ಆಯುರ್ವೇದ ಮತ್ತು ವೈದ್ಯಕೀಯ ವಿಜ್ಞಾನದಲ್ಲಿ ಅತ್ಯಂತ ಸುದೀರ್ಘ ಹಾಗೂ ಶ್ರೀಮಂತ ಪರಂಪರೆಯನ್ನು ಹೊಂದಿದೆ. ನಮ್ಮ ವೈದಿಕ ತತ್ತ್ವಚಿಂತನೆಗಳು ಹಾಗೂ ಪ್ರಾಚೀನ ಗ್ರಂಥಗಳು ಧನ್ವಂತರಿ, ಸುಶ್ರುತ ಹಾಗೂ ಚರಕರಂತಹ ಮಹಾನ್ ಋಷಿ-ಮುನಿಗಳ ಮಹತ್ವದ ಕೊಡುಗೆಯನ್ನು ತಿಳಿಸುತ್ತವೆ ಎಂದರು.
ಇಂದಿನ ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ಸಾಂಪ್ರದಾಯಿಕ ಆಯುರ್ವೇದದ ನಡುವೆ ದಿನದಿಂದ ದಿನಕ್ಕೆ ಅಂತರ ಹೆಚ್ಚಾಗುತ್ತಿದ್ದು, ಇದಕ್ಕೆ ಸೂಕ್ತ ಸಂಶೋಧನೆಯ ಕೊರತೆಯೂ ಒಂದು ಪ್ರಮುಖ ಕಾರಣವಾಗಿದೆ. ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿದಿನವೂ ಹೊಸ ತಂತ್ರಜ್ಞಾನಗಳು ಹಾಗೂ ಸಂಶೋಧನೆಗಳು ಹೊರಬರುತ್ತಿವೆ. ಅದೇ ರೀತಿಯಲ್ಲಿ ನಮ್ಮ ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರದಲ್ಲೂ ಹೊಸ ಹೊಸ ಸಂಶೋಧನೆಗಳು ನಡೆಯಬೇಕು ಎಂದರು.
ಈ ವೇಳೆ ಡಾ. ಸಂಜೀವ ನರಪ್ಪನವರ, ಡಾ. ಎಂ.ಎ. ಹಾದಿಮನಿ, ಡಾ. ಸಾಯಿಪ್ರಕಾಶ ಮಡಿವಾಳರ, ಸಹಾಯಕ ಆಡಳಿತ ಅಧಿಕಾರಿ ಸುಧಾ ಜಾಳಿಹಾಲ್, ಡಾ. ಪವನ್, ಡಾ. ಆನಂದ್ ಕರಿಯವರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು. ಡಾ. ಬಿ.ಎಂ. ಲೋಕಾಪುರಿ ನಿರೂಪಿಸಿದರು, ಡಾ. ಕುಶಾಲ ಕೋರೆ ವಂದಿಸಿದರು.