5 ದಿನಗಳಲ್ಲಿ ಗದಗ ಜಿಲ್ಲೆಯಲ್ಲಿ 5.18 ಲಕ್ಷ ಎನ್ಯುಮರೇಷನ್ ಫಾರ್ಮ್‌ ವಿತರಣೆ!

KannadaprabhaNewsNetwork |  
Published : Jul 05, 2026, 02:00 AM IST
ಎನ್ಯುಮರೇಶನ್ ಫಾರ್ಮಿ ವಿತರಿಸಲಾಯಿತು. | Kannada Prabha

ಸಾರಾಂಶ

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯವೇನೋ ಚುರುಕುಗೊಂಡಿದೆ. ಆದರೆ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಭೇಟಿ ನೀಡುವ ಬದಲು ಗುಂಪುಗೂಡಿಸಿ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.

ಗದಗ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯವೇನೋ ಚುರುಕುಗೊಂಡಿದೆ. ಆದರೆ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಭೇಟಿ ನೀಡುವ ಬದಲು ಗುಂಪುಗೂಡಿಸಿ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.

ಜಿಲ್ಲೆಯಲ್ಲಿ ಬಿಎಲ್ಒಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸದೇ, ಸ್ಥಳೀಯವಾಗಿರುವ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ವಿತರಿಸಿದ್ದಾರೆ. ಗುಂಪುಗೂಡಿಸಿ ಮಾಹಿತಿ ಸಂಗ್ರಹಿಸುವ ಹಾಗೂ ಯಾರದ್ದೊ ಮಾಹಿತಿಯನ್ನು ಇನ್ನಾರೋ ಭರ್ತಿ ಮಾಡುವ ಚಟುವಟಿಕೆ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ ಪ್ರಸ್ತುತ ಇರುವ 9,02,947 ಮತದಾರರ ವಿವರಗಳನ್ನು ನವೀಕರಿಸುವ ಉದ್ದೇಶದಿಂದ ಈ ವಿಶೇಷ ಪರಿಷ್ಕರಣೆ ನಡೆಸಲಾಗುತ್ತಿದೆ. ಜಿಲ್ಲೆಯ 967 ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಿಯೋಜಿಸಲಾದ ಬಿಎಲ್‌ಒಗಳು ಮತದಾರರನ್ನು ನೇರವಾಗಿ ಭೇಟಿ ಮಾಡಬೇಕು. ಅದೇ ರೀತಿ ನಡೆಯುತ್ತಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ ವಾಸ್ತವವೇ ಬೇರೆಯೇ ಆಗಿದೆ.

ಅಂಕಿ-ಅಂಶಗಳೇನು ಹೇಳುತ್ತಿವೆ?: ಜಿಲ್ಲಾಡಳಿತ ನೀಡಿರುವ ಮಾಹಿತಿಯಂತೆ, ಜು. 3ರ ವೇಳೆಗೆ 5,18,122 ಎನ್ಯುಮರೇಷನ್ ಫಾರ್ಮ್‌ಗಳನ್ನು ಮತದಾರರಿಗೆ ವಿತರಿಸಲಾಗಿದೆ. ಇದು ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆಯ ಸುಮಾರು ಶೇ. 57.4 ಭಾಗಕ್ಕೆ ಸಮನಾಗಿದೆ. ಅಂದರೆ, ಎರಡು ದಿನಕ್ಕೊಮ್ಮೆ ಲಕ್ಷ ಮತದಾರರನ್ನು ಬಿಎಲ್‌ಒಗಳು ತಲುಪಲು ಹೇಗೆ ಸಾಧ್ಯ ಎನ್ನುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಇದರ ಜತೆಗೆ ಮತದಾರರಿಂದ ಹಿಂದಿರುಗಿ ಬಂದಿರುವ ಅರ್ಜಿಗಳಲ್ಲಿ 15,730 ಎನ್ಯುಮರೇಷನ್ ಫಾರ್ಮ್‌ಗಳನ್ನು ಈಗಾಗಲೇ ಡಿಜಿಟಲೀಕರಣ ಮಾಡಲಾಗಿದೆ ಎನ್ನುತ್ತಾರೆ. ಇದು ಕೂಡಾ ತೀರಾ ಆಶ್ಚರ್ಯಕ್ಕೆ ಕಾರಣವಾಗಿದೆ.

ಜು. 29ರ ವರೆಗೆ ಅವಕಾಶ: ಜಿಲ್ಲೆಯ ಎಲ್ಲ ಮತದಾರರನ್ನು ತಲುಪುವ ಗುರಿಯೊಂದಿಗೆ ಬಿಎಲ್‌ಒಗಳು ಜು. 29ರ ವರೆಗೆ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಈ ಅವಧಿಯಲ್ಲಿ ಮತದಾರರು ಎನ್ಯುಮರೇಷನ್ ಫಾರ್ಮ್ ಸರಿಯಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿದರೆ, ಅವರ ವಿವರಗಳನ್ನು ನಿಖರವಾಗಿ ಮತದಾರರ ಪಟ್ಟಿಯಲ್ಲಿ ದಾಖಲಿಸಲು ಅನುಕೂಲವಾಗುತ್ತದೆ. ಅವುಗಳನ್ನು ಭರ್ತಿ ಮಾಡಲು ಯಾರದ್ದೂ ಕೈಯಲ್ಲಿ ಕೊಟ್ಟರೆ ಅವರೇನಾದರೂ ತಪ್ಪು ಮಾಡಿದರೆ ಅದಕ್ಕೆ ಬಿಎಲ್ಒಗಳು ಹೊಣೆಯಾಗುವುದಿಲ್ಲ, ಈ ಸೂಕ್ಷ್ಮತೆಯನ್ನು ಪ್ರತಿಯೊಬ್ಬ ಮತದಾರರು ಗಮನಸಬೇಕಿದೆ.

ಮತದಾರರು ಏನು ಮಾಡಬೇಕು?: ಬಿಎಲ್‌ಒ ಮನೆಗೆ ಭೇಟಿ ನೀಡದೇ ಯಾವುದೋ ಒಂದು ಕೇಂದ್ರದಲ್ಲಿದ್ದೇವೆ, ಅಲ್ಲಿಗೆ ಬನ್ನಿ, ನಿಮ್ಮ ಎನ್ಯುಮರೇಷನ್ ಫಾರ್ಮ್‌ಗಳನ್ನು ಬೇರೊಬ್ಬರ ಕೈಯಲ್ಲಿ ಕೊಟ್ಟಿದ್ದೇನೆ, ಪಡೆದುಕೊಳ್ಳಿ ಎಂದು ಹೇಳಿದರೆ ತಕ್ಷಣವೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ. ನೀವು ಖುದ್ದು ಮನೆಗೆ ಬನ್ನಿ, ನಾವು ಹೇಳುತ್ತೇವೆ, ನೀವು ಭರ್ತಿ ಮಾಡಿಕೊಳ್ಳಿ, ಹೆಸರು, ವಿಳಾಸ, ಸೇರಿದಂತೆ ಎಲ್ಲ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಿ ಎಂದು ಹೇಳಬೇಕು. ಕೆಲಸ ಹಗುರು ಮಾಡಿಕೊಳ್ಳಲು ಯಾರಿಗೆ ಹೇಳಿದರೆ, ಮತದಾರರ ಪಟ್ಟಿಯಲ್ಲಿ ತಪ್ಪು ಆಗಬಹುದು ಅಥವಾ ಅಪೂರ್ಣ ಮಾಹಿತಿ ನೀಡಬೇಕಾಗಬಹುದು. ಅದರಿಂದ ಮತದಾರರ ಪಟ್ಟಿಯಲ್ಲಿ ದೋಷ ಉಂಟಾಗಬಹುದು ಎನ್ನುವುದನ್ನು ಜನರು ಗಮನಿಸಬೇಕಿದೆ.

ಅಧಿಕಾರಿಗಳು ಗಮನ ಹರಿಸಲಿ: ಜಿಲ್ಲೆಯ ಪ್ರತಿಯೊಂದು ಅಂಗನವಾಡಿ ಕೇಂದ್ರಗಳು, ಇನ್ನುಳಿದ ಸಾರ್ವಜನಿಕ ಸ್ಥಳಗಳು ಎನ್ಯುಮರೇಷನ್ ಫಾರ್ಮ್‌ ವಿತರಣಾ ಕೇಂದ್ರಗಳಾಗಿವೆ. ಅಲ್ಲಿಯೇ ಕುಳಿತಿರುವವರು ಫಾರ್ಮ್‌ಗಳನ್ನು ಕೂಡಾ ತುಂಬುತ್ತಿದ್ದಾರೆ. ಯಾರಾದರೂ ಆಕ್ಷೇಪಿಸಿದಲ್ಲಿ ಈ ರೀತಿ ಮಾಡುವಂತೆ ನಮಗೆ ತಹಸೀಲ್ದಾರ್‌ ಹೇಳಿದ್ದಾರೆ ಎನ್ನುವ ಸಿಗುತ್ತದೆ. ಈ ಕುರಿತು ಜಿಲ್ಲಾಧಿಕಾರಿ ಗಮನ ನೀಡಬೇಕು ಮತ್ತು ಪ್ರತಿ ಬಿಎಲ್‌ಒ ಮನೆ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸುವಂತೆ ಸೂಚಿಸಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ವ್ಯಾಪಕ ಅಕ್ರಮ: ಬಸವರಾಜ ಬೊಮ್ಮಾಯಿ
ಮೂರು ಬೂತ್‌ಗಳಲ್ಲಿ ಎಚ್.ಕೆ. ಪಾಟೀಲ ಹೆಸರು: ಬಸವರಾಜ ಬೊಮ್ಮಾಯಿ ಆರೋಪ