ಗದಗ: ಮಾಜಿ ಸಚಿವ, ಗದಗ ಶಾಸಕ ಎಚ್.ಕೆ. ಪಾಟೀಲ ಅವರ ಹೆಸರು ಮೂರು ಬೂತ್‌ಗಳಲ್ಲಿದ್ದು, ಇದು ಮ್ಯಾಪಿಂಗ್ ವೇಳೆ ಪತ್ತೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ, ಗದಗ ಸಂಸದ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು.

ಶನಿವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಲಕೋಟಿಯ ಹನುಮಂತಗೌಡ ಕೃಷ್ಣಗೌಡ ಪಾಟೀಲ (ಎಚ್‌.ಕೆ. ಪಾಟೀಲ್) ಅವರ ಹೆಸರೇ ಬೂತ್ ನಂಬರ್ 143 (ಕ್ರಮ ಸಂಖ್ಯೆ 161 ಮತ್ತು 183) ಹಾಗೂ ಬೂತ್ ನಂಬರ್ 153 (ಕ್ರಮ ಸಂಖ್ಯೆ 393) ರಲ್ಲಿ ಮೂರು ಬಾರಿ ದಾಖಲಾಗಿದೆ. ಒಬ್ಬ ಜವಾಬ್ದಾರಿಯುತ ಸಚಿವರ ಹೆಸರೇ ಮತದಾರರ ಪಟ್ಟಿಯಲ್ಲಿ ಮೂರು ಬಾರಿ ಬಂದರೆ, ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಏನು? ಯಾವ ರೀತಿಯ ಪರಿಷ್ಕರಣೆ ನಡೆಯುತ್ತಿದೆ ಎಂದು ಅವರು ಪ್ರಶ್ನಿಸಿದರು.

​ಚುನಾವಣಾ ಆಯೋಗದಿಂದ ಲಭ್ಯವಾಗಿರುವ ಅಧಿಕೃತ ಪ್ರತಿಯನ್ನು ಮಾಧ್ಯಮಗಳಿಗೆ ಪ್ರದರ್ಶಿಸಿದ ಅವರು, ಇಂತಹ ಲೋಪದೋಷಗಳನ್ನು ಸರಿಪಡಿಸುವಂತೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

​ಗದಗ ಮತ್ತು ರೋಣ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ದೊಡ್ಡ ಮಟ್ಟದ ಎರಡು ಮೂರು ಕಡೆ ಹೆಸರುಗಳು ಸೇರ್ಪಡೆಯಾಗಿವೆ. ಮ್ಯಾಪಿಂಗ್ ಮಾಡಿದ್ದರೂ ಅನರ್ಹರ ಹೆಸರುಗಳು ಮತ್ತೆ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ರೋಣ ಕ್ಷೇತ್ರದ ಅಲ್ಲಾಸಾಬ್ ನದಾಫ್ ಅವರ ಹೆಸರಿನಲ್ಲೂ ಇಂತಹದೇ ಲೋಪ ಕಂಡುಬಂದಿದೆ, ಅಧಿಕಾರಿಗಳು ಬಿಎಲ್ಒಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಅಧಿಕಾರಿಗಳನ್ನು ಅಮಾನತು ಮಾಡಿ: ಬೊಮ್ಮಾಯಿ


ರಾಜ್ಯ ಸರ್ಕಾರದ ಹುನ್ನಾರದಿಂದಾಗಿ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆಯುತ್ತಿವೆ. ರಾಜ್ಯ ಸರ್ಕಾರದ ಒತ್ತಡ ಹಾಗೂ ಆಮಿಷಗಳಿಗೆ ಒಳಗಾಗಿ ತಹಸೀಲ್ದಾರ್, ತಲಾಟಿ, ಶಿಕ್ಷಕರು ಮತ್ತು ಬಿಎಲ್‌ಒಗಳು ಈ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಅಕ್ರಮ ನಡೆದಿರುವ ಎಲ್ಲ ಕ್ಷೇತ್ರಗಳ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಮಾಜಿ ಸಿಎಂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿ ಕ್ಷೇತ್ರದ ಬಂಕಾಪುರದ 191ನೇ ಮತಗಟ್ಟೆ ಸಂಖ್ಯೆಯ ದೊಡ್ಡ ದೇವರ ಮಸೀದಿಯಲ್ಲಿ ಬಿಎಲ್‌ಒಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಕುಳಿತುಕೊಂಡು ಅಕ್ರಮವಾಗಿ ಮತದಾರರ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ವಿಡಿಯೋ ಸಮೇತ ದೂರು ನೀಡಿದ್ದರೂ ಯಾವುದೇ ಭಯವಿಲ್ಲದೆ ಇಂದಿಗೂ ಅದೇ ಕೆಲಸ ಮುಂದುವರಿಸಿದ್ದಾರೆ ಎಂದು ಹೇಳಿದರು.

ಅಕ್ರಮ ನಡೆದಿರುವ ಎಲ್ಲ ಕ್ಷೇತ್ರಗಳ ತಹಸೀಲ್ದಾರ್, ತಲಾಟಿ ಹಾಗೂ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಿ, ಹೊಸ ಅಧಿಕಾರಿಗಳನ್ನು ನೇಮಕ ಮಾಡಬೇಕು. ಎಲ್ಲ ಜಿಲ್ಲೆಗಳಲ್ಲಿ ವಿಶೇಷ ಸ್ಕ್ವಾಡ್ ರಚಿಸಿ, ಹಠಾತ್ ತಪಾಸಣೆ ನಡೆಸಬೇಕು. ಅಕ್ರಮ ಪತ್ತೆಯಾದ ತಕ್ಷಣವೇ ಸ್ಥಳದಲ್ಲೇ ಅಮಾನತು ಆದೇಶ ಹೊರಡಿಸಬೇಕು. ಮತದಾರರ ಪಟ್ಟಿಯಲ್ಲಿ ಒಂದೇ ಹೆಸರನ್ನು 2-3 ಬಾರಿ ಸೇರಿಸಲಾಗುತ್ತಿದ್ದು, ಮ್ಯಾಪಿಂಗ್ ಮಾಡಿದ ನಂತರವೂ ಹೆಸರು ಪಟ್ಟಿಯಲ್ಲಿ ಉಳಿದುಕೊಂಡಿವೆ. ಹುಟ್ಟಿದ ದಿನಾಂಕ ಅಥವಾ ತಂದೆ, ಗಂಡನ ಹೆಸರನ್ನು ಬದಲಾಯಿಸಿ ಈ ರೀತಿಯ ಅಕ್ರಮಗಳನ್ನು ಮಾಡಲಾಗುತ್ತಿದೆ ಎಂದು ದೂರಿದರು.​ರಾಜ್ಯ ಸರ್ಕಾರದ ಹುನ್ನಾರದಿಂದಾಗಿ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ನಾನು ಮೊದಲ ದಿನವೇ ಎಚ್ಚರಿಸಿದ್ದೆ. ಅರ್ಹ ಮತದಾರರ ಹಕ್ಕನ್ನು ಕಸಿದುಕೊಳ್ಳುವ ಇಂತಹ ಪ್ರಯತ್ನಗಳು ಪ್ರಜಾಪ್ರಭುತ್ವಕ್ಕೆ ಮಾರಕ. ಗದಗ ಮತ್ತು ಹಾವೇರಿ ಜಿಲ್ಲಾಧಿಕಾರಿ ಈ ಅಕ್ರಮದ ನೇರ ಹೊಣೆ ಹೊರಬೇಕು ಎಂದರು.