ಹಾವೇರಿ: ಜಿಲ್ಲೆಯ ಸವಣೂರು ಹಾಗೂ ಬಂಕಾಪುರ ಪಟ್ಟಣಗಳಲ್ಲಿ ಮತಗಟ್ಟೆ ಅಧಿಕಾರಿಗಳು ನಿಯಮಾವಳಿ ಗಾಳಿಗೆ ತೂರಿ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮನೆಮನೆ ಭೇಟಿ ನೀಡಬೇಕಾದ ಬಿಎಲ್‌ಒಗಳು, ಮಸೀದಿ ಹಾಗೂ ಮುಸ್ಲಿಂ ಮುಖಂಡರ ಮನೆಗಳಲ್ಲಿ ಕುಳಿತು ಪ್ರಕ್ರಿಯೆ ನಡೆಸುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಶಿಗ್ಗಾಂವಿ ತಾಲೂಕು ಬಂಕಾಪುರ ಪಟ್ಟಣದ ಮತಗಟ್ಟೆ ಸಂಖ್ಯೆ 191ರ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು, ದೊಡ್ಡದೇವರ ಮಸೀದಿಯ ಕಚೇರಿಯಲ್ಲೇ ಕುಳಿತು ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲದೆ, ಬಂಕಾಪುರದ 184 ಮತ್ತು 185ನೇ ಮತಗಟ್ಟೆಯ ಬಿಎಲ್‌ಒಗಳು ಕೂಡ ಸಾರ್ವಜನಿಕರ ಮನೆಗಳಿಗೆ ತೆರಳದೇ, ಮೋಮಿನ್ ಮಸೀದಿ ಕಚೇರಿಯನ್ನು ತಮ್ಮ ತಾತ್ಕಾಲಿಕ ಕಚೇರಿಯನ್ನಾಗಿ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಸವಣೂರು ಪಟ್ಟಣದಲ್ಲೂ ಬಿಎಲ್‌ಒಗಳ ಯಡವಟ್ಟು ಮುಂದುವರಿದಿದ್ದು, ಮುಸ್ಲಿಂ ಸಮುದಾಯದ ಪ್ರಮುಖ ನಾಯಕರೊಬ್ಬರ ಮನೆಯಲ್ಲಿಯೇ ಕುಳಿತು ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಮತದಾರರ ಮನೆ ಬಾಗಿಲಿಗೆ ಹೋಗಿ ನೈಜ ಮಾಹಿತಿ ಕಲೆಹಾಕಬೇಕಾದ ಅಧಿಕಾರಿಗಳು, ಈ ರೀತಿ ನಿರ್ದಿಷ್ಟ ಸ್ಥಳಗಳಲ್ಲಿ ಹಾಗೂ ಮುಖಂಡರ ಮನೆಗಳಲ್ಲಿ ಕುಳಿತು ಕೆಲಸ ಮಾಡಿ ಕರ್ತವ್ಯ ಲೋಪ ಎಸಗುತ್ತಿರುವುದು ಕಂಡುಬಂದಿದೆ. ಈ ಕುರಿತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಜಿಲ್ಲಾಧಿಕಾರಿ ಭೇಟಿ: ಬಂಕಾಪುರ ಪಟ್ಟಣದ ಮತಗಟ್ಟೆ ಸಂಖ್ಯೆ 185ರ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಒ) ರೂಪಾ ಮಾನೆ ಅವರು ಮೋಮಿನ್ ಮಸೀದಿ ಕಚೇರಿಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಎನ್ಯೂಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಮತಗಟ್ಟೆ ಮಟ್ಟದ ಅಧಿಕಾರಿ ರೂಪಾ ಮಾನೆ ಅವರನ್ನು ವಿಚಾರಿಸಿದಾಗ, ಮನೆ ಮನೆಗೆ ತೆರಳಿ ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಿದ ನಂತರ ಕಾಲು ನೋವು ಕಾಣಿಸಿಕೊಂಡಿದ್ದರಿಂದ ಸ್ವಲ್ಪ ವಿಶ್ರಾಂತಿ ಪಡೆಯಲು ಮೋಮಿನ್ ಮಸೀದಿ ಕಚೇರಿಯಲ್ಲಿ ಕುಳಿತಿದ್ದೆ ಎಂದು ಅವರು ತಿಳಿಸಿದರು. ಇದೇ ವೇಳೆ ಕೆಲ ಮತದಾರರು ತಾವೇ ಅಲ್ಲಿಗೆ ಬಂದು ಫಾರ್ಮ್‌ಗಳನ್ನು ಭರ್ತಿ ಮಾಡಲು ನೆರವು ಕೋರಿದ್ದರಿಂದ ಅವರಿಗೆ ಸಹಾಯ ಮಾಡುತ್ತಿದ್ದೆ ಹೊರತು, ಅಲ್ಲಿಯೇ ಕುಳಿತು ಎಲ್ಲರಿಗೂ ಫಾರ್ಮ್‌ಗಳನ್ನು ವಿತರಿಸುವ ಕಾರ್ಯ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.