ಮೂರೇ ತಿಂಗಳಲ್ಲಿ 5.63 ಕೋಟಿ ತೆರಿಗೆ ಸಂಗ್ರಹ

KannadaprabhaNewsNetwork |  
Published : Jul 05, 2025, 12:18 AM IST
1.ರಾಮನಗರ ನಗರಸಭೆ ಕಚೇರಿ | Kannada Prabha

ಸಾರಾಂಶ

ರಾಮನಗರ: ಶೋಷಿತ ಸಮಾಜದವರ ವೃತ್ತಿಗೆ ಅನುಗುಣವಾಗಿ ಟೂಲ್ ಕಿಟ್ ಗಳನ್ನು ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವತ್ತ ಹೆಜ್ಜೆ ಇಟ್ಟಿರುವ ರಾಮನಗರ ನಗರಸಭೆ ಆರ್ಥಿಕ ವರ್ಷ ಪ್ರಾರಂಭವಾದ ಮೂರೇ ತಿಂಗಳಲ್ಲಿ 5.63 ಕೋಟಿ ಆಸ್ತಿ ತೆರಿಗೆ ಸಂಗ್ರಹ ಮಾಡಿದೆ.

ರಾಮನಗರ: ಶೋಷಿತ ಸಮಾಜದವರ ವೃತ್ತಿಗೆ ಅನುಗುಣವಾಗಿ ಟೂಲ್ ಕಿಟ್ ಗಳನ್ನು ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವತ್ತ ಹೆಜ್ಜೆ ಇಟ್ಟಿರುವ ರಾಮನಗರ ನಗರಸಭೆ ಆರ್ಥಿಕ ವರ್ಷ ಪ್ರಾರಂಭವಾದ ಮೂರೇ ತಿಂಗಳಲ್ಲಿ 5.63 ಕೋಟಿ ಆಸ್ತಿ ತೆರಿಗೆ ಸಂಗ್ರಹ ಮಾಡಿದೆ.

ತೆರಿಗೆ ಪಾವತಿಸುವವರಿಗೆ ಶೇ.5 ರಿಯಾಯಿತಿ ಘೋಷಿಸಿದ್ದ ಹಿನ್ನೆಲೆಯಲ್ಲಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಮೇ ಹಾಗೂ ಜೂನ್‌ ತಿಂಗಳಲ್ಲಿ ಆಸ್ತಿ ತೆರಿಗೆ ಪಾವತಿಸುವವರಿಗೆ ಯಾವುದೇ ದಂಡ ಶುಲ್ಕ ಇರಲಿಲ್ಲ. ಈ ಎರಡು ತಿಂಗಳ ಅವಧಿಯಲ್ಲಿ ಸಾರ್ವಜನಿಕರು ದಂಡರಹಿತವಾಗಿ ಆಸ್ತಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿತ್ತು.

ಕಳೆದ ಸಾಲಿನಲ್ಲಿ ಜೂನ್ ಅವಧಿಯಲ್ಲಿ ಅಂದಾಜು 3 ಕೋಟಿ ರು.ತೆರಿಗೆ ಸಂಗ್ರಹವಾಗಿತ್ತು. ಈ ವರ್ಷ ಜೂನ್ 30ರವರೆಗೆ 5.63 ಕೋಟಿ ರುಪಾಯಿ ತೆರಿಗೆ ಸಂಗ್ರಹಿಸಲಾಗಿದೆ.

2025–26ನೇ ಸಾಲಿನಲ್ಲಿ ಶೇ.4.50ರಷ್ಟು ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲಾಗಿದ್ದು, ಪ್ರತಿ ವರ್ಷ ಏಪ್ರಿಲ್‌ ತಿಂಗಳಿನಲ್ಲಿ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ.5ರ ರಿಯಾಯಿತಿ ಇರುತ್ತಿತ್ತು. ಆದರೆ, ಪ್ರಚಾರದ ಕೊರತೆಯಿಂದ ಸಾರ್ವಜನಿಕರು ತೆರಿಗೆ ಪಾವತಿಗೆ ಹೆಚ್ಚು ಮುಂದಾಗುತ್ತಿರಲಿಲ್ಲ. ಈ ಬಾರಿ ನಗರಸಭೆ ವ್ಯಾಪಕ ಪ್ರಚಾರ ನೀಡಿದ್ದರಿಂದ ನಿರೀಕ್ಷೆಗೂ ಮೀರಿ ಆಸ್ತಿ ತೆರಿಗೆ ಪಾವತಿಯಾಗಿದೆ.

ಬಿ-ಖಾತೆಗಳಿಂದ 1.63 ಕೋಟಿ ಸಂಗ್ರಹ:

2025–26ನೇ ಆರ್ಥಿಕ ವರ್ಷಕ್ಕೆ 8.50 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ನೀಡಲಾಗಿದೆ. ಆರಂಭಿಕ ಮೂರು ತಿಂಗಳು ಕಳೆಯುವುದರ ಒಳಗಾಗಿಯೇ 5.63 ಕೋಟಿ ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ಆಸ್ತಿ ತೆರಿಗೆ 2.68 ಕೋಟಿ ರು., ಬಿ - ಖಾತೆಗಳಿಂದ 1.36 ಕೋಟಿ ಲಕ್ಷ, ಆಸ್ತಿ ತೆರಿಗೆ ಬಾಕಿ 50 ಲಕ್ಷ ಸಂಗ್ರಹವಾಗಿದೆ. ತೆರಿಗೆ ಮೇಲೆ ಸರ್ಕಾರಕ್ಕೆ ಭರಿಸಬೇಕಾದ ಸೆಸ್ ರೂಪದಲ್ಲಿ 1.7 ಕೋಟಿ ಸಂಗ್ರಹವಾಗಿದೆ.

ಆಸ್ತಿ ತೆರಿಗೆ ರಿಯಾಯಿತಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆಟೋ ಪ್ರಚಾರ, ಕರಪತ್ರಗಳ ವಿತರಣೆ, ವಾರ್ಡ್‌ಗಳ ಮುಖ್ಯ ವೃತ್ತ, ರಸ್ತೆಗಳಲ್ಲಿ ಬ್ಯಾನರ್‌ ಅಳವಡಿಸಿ ಹೆಚ್ಚಿನ ಪ್ರಚಾರ ನೀಡಲಾಗಿತ್ತು. ಪಾವತಿದಾರರಿಗೆ ಅನುಕೂಲವಾಗುವಂತೆ ನಗರಸಭೆ ಕಚೇರಿ ಆವರಣದಲ್ಲೇ ಕೌಂಟರ್‌ ತೆರೆಯಲಾಗಿತ್ತು. ಹಾಗಾಗಿ ಆಸ್ತಿ ತೆರಿಗೆ ಹೆಚ್ಚು ಸಂಗ್ರಹವಾಗಿದೆ.

ಈ ವರ್ಷ ಅಧಿಕ ತೆರಿಗೆ ಸಂಗ್ರಹ ಗುರಿ :

ಕಳೆದ ಮೂರು ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುವ ಗುರಿ ಹೊಂದಲಾಗಿದೆ. 2022-23ನೇ ಸಾಲಿನಲ್ಲಿ 5.27 ಕೋಟಿ ತೆರಿಗೆ ಸಂಗ್ರಹವಾಗಿದ್ದರೆ, 2023-24ನೇ ಸಾಲಿನಲ್ಲಿ 7.7 ಕೋಟಿ ರುಪಾಯಿ ತೆರಿಗೆ ಸಂಗ್ರಹ ಮಾಡಲಾಗಿತ್ತು.

2024-25ನೇ ಸಾಲಿನಲ್ಲಿ 8.50 ಕೋಟಿ ರುಪಾಯಿ ನಿಗದಿತ ಗುರಿಯಲ್ಲಿ 7.79 ಕೋಟಿ ರುಪಾಯಿ ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಜೂನ್ 30ರವರೆಗೆ 5.63 ಕೋಟಿ ರುಪಾಯಿ ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ವರ್ಷಾಂತ್ಯಕ್ಕೆ ಗುರಿ ಮೀರುವ ಸಾಧ್ಯತೆಗಳಿವೆ.

ನಗರಸಭೆಯ ಸ್ಥಳೀಯ ಸಂಸ್ಥೆಯ ಆದಾಯ ಪಾವತಿಯಲ್ಲಿ ಬಡ, ಮಧ್ಯಮ ವರ್ಗದವರು ಮುಂಚೂಣಿಯಲ್ಲಿದ್ದರೆ, ಉಳ್ಳವರೇ ಬಾಕಿದಾರರಾಗಿದ್ದಾರೆ. ನಗರಸಭೆಯಲ್ಲಿರುವ ಕಂದಾಯ ನಿರೀಕ್ಷಕರು ಪ್ರತಿ ನಿತ್ಯ ಕರ ವಸೂಲಿಗೆ ಸಂಚರಿಸುತ್ತಿದ್ದು, ಬಾಕಿದಾರರು ತೆರಿಗೆ ಪಾವತಿಸುವಂತೆ ಮಾಡಲು ಕ್ರಮ ವಹಿಸಲಾಗಿದೆ ಎಂದು ನಗರಸಭೆ ಆಯುಕ್ತ ಜಯಣ್ಣ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಕೋಟ್ ................

ನಗರಸಭೆ 2025-26ನೇ ಸಾಲಿನಲ್ಲಿ ಆಯವ್ಯಯದಲ್ಲಿ ಮಂಡಿಸಿದಂತೆ ಶ್ರಮಿಕ ವರ್ಗದ ಜನರಿಗೆ ಅವರ ವೃತ್ತಿಗೆ ಅನುಗುಣವಾಗಿ ಪರಿಕರಗಳನ್ನು ಒದಗಿಸಲಾಗುತ್ತಿದೆ. ನಗರದಲ್ಲಿ ಸ್ವಚ್ಛತೆ ಕಾರ್ಯಕ್ಕೂ ಒತ್ತು ನೀಡಲಾಗುತ್ತಿದೆ. ಈ ಕಾರ್ಯಗಳೆಲ್ಲವೂ ಮುಂದುವರೆಯಬೇಕಾದರೆ ನಾಗರಿಕರು ಆಸ್ತಿ ತೆರಿಗೆ ಪಾವತಿಸಿ ನಗರಸಭೆ ಸಂಪನ್ಮೂಲ ಕ್ರೂಢೀಕರಣಕ್ಕೆ ಸಹಕರಿಸಬೇಕು. ಆ ಮೂಲಕ ವಾರ್ಡ್‌ಗಳ ಅಭಿವೃದ್ಧಿಗೆ ಸಹಕರಿಸಬೇಕು.

-ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ

4ಕೆಆರ್ ಎಂಎನ್ 1,2.ಜೆಪಿಜಿ

1.ರಾಮನಗರ ನಗರಸಭೆ ಕಚೇರಿ

2.ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ

PREV