ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆಎಸ್ಸಾರ್ಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಗೆ 5,800 ನೂತನ ಬಸ್‌ಗಳ ಸೇರ್ಪಡೆಗೆ ನಿರ್ಧರಿಸಲಾಗಿದ್ದು, ಈವರೆಗೆ 3,417 ಬಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಉಳಿದ ಬಸ್‌ಗಳನ್ನು ಶೀಘ್ರದಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.ರಾಜ್ಯ ರಸ್ತೆ ಸಾರಿಗೆ ನಿಗಮದ 63ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಶಾಂತಿನಗರದ ಕೆಎಸ್ಸಾರ್ಟಿಸಿ ಕೇಂದ್ರೀಯ ವಿಭಾಗದ ಘಟಕ 2ರಲ್ಲಿ ಬುದವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಮಲಿಂಗಾರೆಡ್ಡಿ ಅವರು ಇದೇ ಮೊದಲ ಬಾರಿಗೆ ಪುನಶ್ಚೇತನಗೊಳಿಸಿದ ಐರಾವತ ಕ್ಲಬ್ ಕ್ಲಾಸ್ ವಾಹನಗಳಿಗೆ ಚಾಲನೆ ನೀಡಿದರು. ಇದೇ ವೇಳೆ ಮೃತ ನೌಕರರ ಅವಲಂಬಿತರಿಗೆ ವಿವಿಧ ಪರಿಹಾರ ಯೋಜನೆ ಅಡಿಯಲ್ಲಿ ಪರಿಹಾರದ ಮೊತ್ತವನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, ಕಳೆದ ನಾಲ್ಕು ವರ್ಷಗಳಿಂದ ಸ್ಧಗಿತಗೊಂಡಿದ್ದ ಅನುಕಂಪದ ಆಧಾರದ ನೇಮಕಾತಿಗೆ ಮತ್ತೆ ಅದಕ್ಕೆ ಚಾಲನೆ ನೀಡಲಾಗಿದ್ದು, ಕಳೆದ 18 ತಿಂಗಳಲ್ಲಿ 1 ಸಾವಿರ ಮೃತ ನೌಕರರ ಅವಲಂಬಿತರಿಗೆ ಅನುಕಂಪದ ನೌಕರಿ ನೀಡಲಾಗಿದೆ ಎಂದರು.ಸರ್ಕಾರವು 5,800 ಹೊಸ ಬಸ್‌ಗಳ ಸೇರ್ಪಡೆಗೆ ಅನುಮತಿಸಿದ್ದು, ಈವರೆಗೆ 3,417 ಬಸ್‌ಗಳನ್ನು ಸೇರಿಸಲಾಗಿದೆ. ಉಳಿದ ಬಸ್‌ಗಳನ್ನು ಶೀಘ್ರದಲ್ಲಿ ಸೇರ್ಪಡೆ ಮಾಡಲಾಗುವುದು. ಅಲ್ಲಿಯವರೆಗೆ ಬಸ್‌ಗಳ ಕೊರತೆ ಉಂಟಾಗದಂತೆ ಪುನಶ್ಚೇತನಗೊಳಿಸಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಪುನಶ್ಚೇತನಗೊಳಿಸಿದ ಬಸ್‌ಗಳು 4 ಲಕ್ಷ ಕಿ.ಮೀ.ವರೆಗೆ ಕಾರ್ಯಾಚರಣೆ ಮಾಡಬಹುದಾಗಿರುತ್ತದೆ ಎಂದರು.ಕಾರ್ಯಕ್ರಮದಲ್ಲಿ 10ರಿಂದ 11 ವರ್ಷಗಳ ಕಾಲ ಕಾರ್ಯಾಚರಣೆ ನಡೆಸಿ ಸ್ಥಗಿತಗೊಂಡಿದ್ದ, ಈಗ ಪುನಶ್ಚೇತನಗೊಳಿಸಲಾದ 3 ಐರಾವತ ಕ್ಲಬ್‌ಕ್ಲಾಸ್ ವಾಹನಗಳನ್ನು ಲೋಕಾರ್ಪಣೆ ಮಾಡಲಾಯಿತು. ಅದರ ಜತೆಗೆ ಅಪಘಾತದಲ್ಲಿ ಮೃತಪಟ್ಟ 3 ನೌಕರರ ಅವಲಂಬಿತರಿಗೆ ತಲಾ 1 ಕೋಟಿ ರು. ಅಪಘಾತ ಪರಿಹಾರ ಮೊತ್ತದ ಚೆಕ್ ಹಾಗೂ ಸೇವೆಯಲ್ಲಿರುವಾಗ ಮೃತಪಟ್ಟ 37 ನೌಕರರ ಅವಲಂಬಿತರಿಗೆ ಪರಿಹಾರ ಮೊತ್ತದ ರೂಪದಲ್ಲಿ ತಲಾ 10 ಲಕ್ಷ ಚೆಕನ್ನು ರಾಮಲಿಂಗಾರೆಡ್ಡಿ ವಿತರಿಸಿದರು.ಕೆಎಸ್ಸಾರ್ಟಿಸಿ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್, ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ। ಎನ್.ವಿ.ಪ್ರಸಾದ್ ಇದ್ದರು.ಪ್ರಯಾಣ ದರ ಹೆಚ್ಚಳಕ್ಕೆ ಅಧ್ಯಕ್ಷ ಪರೋಕ್ಷ ಮನವಿ
ಕೆಎಸ್ಸಾರ್ಟಿಸಿ ಅಧ್ಯಕ್ಷ, ಶಾಸಕ ಗುಬ್ಬಿ ಶ್ರೀನಿವಾಸ್ ಮಾತನಾಡಿ, ಕೆಎಸ್ಸಾರ್ಟಿಸಿ ದೇಶದಲ್ಲಿಯೇ ದೊಡ್ಡ ಸಾರಿಗೆ ಸಂಸ್ಥೆಯಾಗಿದೆ. ಇದು ಕಾರ್ಮಿಕ ಆಧಾರಿತ ಸಂಸ್ಥೆಯಾಗಿದ್ದು, ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಆದರೂ, ಇಂಧನ ಬೆಲೆ ಹೆಚ್ಚಳ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ನಿಗಮಗಳಿಗಾಗುವ ಹೊರೆ ತಗ್ಗಿಸಲು ಬಸ್ ಪ್ರಯಾಣ ದರ ಹೆಚ್ಚಳ ಮಾಡಬೇಕಿದೆ. ಆಗ ಕಾರ್ಮಿಕರಿಗೆ ಮತ್ತು ಪ್ರಯಾಣಿಕರಿಗೆ ಮತ್ತಷ್ಟು ಸೌಲಭ್ಯಗಳನ್ನು ನೀಡಬಹುದು ಎಂದು ಸಾರಿಗೆ ಸಚಿವರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವಂತೆ ಪರೋಕ್ಷವಾಗಿ ಮನವಿ ಮಾಡಿದರು.