ಕನ್ನಡಪ್ರಭ ವಾರ್ತೆ ಮಂಡ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಶಾಸಕ ದಿನೇಶ್ ಗೂಳಿಗೌಡ ಅವರು ಮುಂಬರುವ ರಾಜ್ಯ ಆಯವ್ಯಯದಲ್ಲಿ ಅಂಕೇಗೌಡರ ಪುಸ್ತಕ ಭಂಡಾರಕ್ಕೆ ಶಾಶ್ವತ ಪರಿಹಾರ ಘೋಷಿಸುವಂತೆ ಕೋರಿದ್ದಾರೆ. ಪಾಂಡವಪುರ ತಾಲೂಕಿನ ಹರಳಹಳ್ಳಿಯಲ್ಲಿ ೫ ಎಕರೆ ಜಮೀನು ಮಂಜೂರು ಮಾಡುವುದು ಹಾಗೂ ಸುಸಜ್ಜಿತ ಗ್ರಂಥಾಲಯ ಸಂಕೀರ್ಣ ನಿರ್ಮಿಸಲು ೫ ಕೋಟಿ ರು. ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡುವಂತೆ ಅವರು ಪ್ರಮುಖವಾಗಿ ವಿನಂತಿಸಿದ್ದಾರೆ.
ನಿವೇಶನ ಮಂಜೂರಾತಿ ಘೋಷಣೆ:ಈ ಪುಸ್ತಕ ಭಂಡಾರವನ್ನು ಉಳಿಸಿ ಬೆಳೆಸಲು, ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿಯೇ (ಅವರ ಊರಿನಲ್ಲಿ) ಕಂದಾಯ ಇಲಾಖೆಯಿಂದ ೫ ಎಕರೆ ಸರ್ಕಾರಿ ಜಮೀನು ಅಥವಾ ಸೂಕ್ತವಾದ ಸಿ.ಎ.ನಿವೇಶನವನ್ನು ಮಂಜೂರು ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಬೇಕು.
ಮಂಜೂರಾದ ಜಾಗದಲ್ಲಿ ಸುಸಜ್ಜಿತ ಗ್ರಂಥಾಲಯ, ಓದುಗರ ಕೊಠಡಿ ಮತ್ತು ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ೫ ಕೋಟಿ ರೂ.ಗಳ ವಿಶೇಷ ಅನುದಾನವನ್ನು ಈ ಆಯವ್ಯಯದಲ್ಲಿ ಮೀಸಲಿಡಬೇಕು.
ಇಲ್ಲಿರುವ ಲಕ್ಷಾಂತರ ಪುಸ್ತಕಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ’ಡಿಜಿಟಲೀಕರಣ’ ವ್ಯವಸ್ಥೆಗೆ ನೆರವು ನೀಡುವುದರ ಜೊತೆಗೆ, ಈ ತಾಣವನ್ನು ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ತಂದು ’ಗ್ರಾಮೀಣ ಸಾಂಸ್ಕೃತಿಕ ಪ್ರವಾಸಿ ತಾಣ’ ಎಂದು ಘೋಷಿಸಬೇಕು.
ಅಂಕೇಗೌಡರು ಕಳೆದ ೪೦ ವರ್ಷಗಳಿಂದ ೨೫ ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಆದರೆ, ಪ್ರಸ್ತುತ ಈ ಪುಸ್ತಕಗಳನ್ನು ಜೋಡಿಸಿಡಲು ಸ್ಥಳಾವಕಾಶದ ಕೊರತೆ ಇರುವುದರಿಂದ ಪುಸ್ತಕಗಳನ್ನು ಒಂದರ ಮೇಲೊಂದು ರಾಶಿ ಹಾಕಲಾಗಿದೆ. ಇದರಿಂದ ಮೌಲ್ಯಯುತ ಪುಸ್ತಕಗಳು ಹಾಳಾಗುವ ಆತಂಕವಿದ್ದು, ಅವುಗಳನ್ನು ಸಂರಕ್ಷಿಸಲು ಸುಸಜ್ಜಿತ ಸ್ಟೀಲ್ ರಾಕ್‌ಗಳನ್ನು ಅಳವಡಿಸಲು ಇಲಾಖೆಯಿಂದ ವಿಶೇಷ ಅನುದಾನ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರನ್ನು ಕೋರಿದ್ದರು.
‘ಸಾಂಸ್ಕೃತಿಕ ಪ್ರವಾಸಿ ತಾಣ’ವಾಗಿ ಅಭಿವೃದ್ಧಿ ಮಾಡಲು ಎಚ್.ಕೆ.ಪಾಟೀಲ್‌ಗೆ ಮನವಿ