- ಘಟಿಕೋತ್ಸವದಲ್ಲಿ 12706 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ರಾಜ್ಯಪಾಲ ಗೆಹ್ಲೋಟ್
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ವಿವಿಯ 13ನೇ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಒಟ್ಟು 12706 ವಿದ್ಯಾರ್ಥಿಗಳಿಗೆ ಶುಕ್ರವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡಿದರು.ಘಟಿಕೋತ್ಸವದಲ್ಲಿ 45 ವಿದ್ಯಾರ್ಥಿಗಳು 87 ಚಿನ್ನದ ಪದಕ ಮುಡಿಗೇರಿಸಿಕೊಂಡರೆ, 70 ಸಂಶೋಧನಾರ್ಥಿಗಳು ಪಿಎಚ್.ಡಿ ಪದವಿ ಸ್ವೀಕರಿಸಿದರು. ವಿವಿಧ ಸ್ನಾತಕ ಪದವಿಗಳಲ್ಲಿ 6401 ಮಹಿಳಾ ಹಾಗೂ 4283 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 10684 ವಿದ್ಯಾರ್ಥಿಗಳು ಸ್ನಾತಕ ಪದವಿಗೆ ಭಾಜನರಾದರು. ಇನ್ನು 1191 ಮಹಿಳಾ ಹಾಗೂ 831 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 2022 ವಿದ್ಯಾರ್ಥಿಗಳು ವಿವಿಧ ಸ್ನಾತಕೋತ್ತರ ಪದವಿ ಸ್ವೀಕರಿಸಿದರು.
ಸ್ನಾತಕ ಕಲಾ ಪದವಿ(ಬಿಎ)ಯಲ್ಲಿ ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಡಿ.ಆರ್. ಪ್ರಿಯಾಂಕ, ವಾಣಿಜ್ಯ (ಬಿ.ಕಾಂ) ಪದವಿಯಲ್ಲಿ ದಾವಣಗೆರೆ ಎಜಿಬಿ ಪ್ರಥಮ ದರ್ಜೆ ಕಾಲೇಜಿನ ಎಸ್.ಕೀರ್ತನಾ, ಶಿಕ್ಷಣ (ಬಿ.ಇಡಿ) ಪದವಿಯಲ್ಲಿ ದಾವಣಗೆರೆ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಕಾಲೇಜಿನ ಜೆ.ಹಜ್ಮಾ ತಲಾ 3 ಚಿನ್ನದ ಪದಕ ಪಡೆದಿದ್ದಾರೆ. ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದಲ್ಲಿ ಎಸ್‌ಬಿಸಿ ಪ್ರಥಮ ದರ್ಜೆ ಕಾಲೇಜಿನ ಕೋನೇನ್ ತಬಸುಂ, ಪತ್ರಿಕೋದ್ಯಮ ವಿಭಾಗದ ವಿ.ಎಂ. ಚಂದನ, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಬಿ.ಪ್ರದೀಪ ಕುಮಾರ, ಸಸ್ಯಶಾಸ್ತ್ರ ವಿಭಾಗದ ಎಂ.ಪ್ರಿಯಾ, ಎಂಪಿಇಡಿಯಲ್ಲಿ ಎ.ಎಂ. ಗಗನ, ರಸಾಯನಶಾಸ್ತ್ರ ವಿಭಾಗದಲ್ಲಿ ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಟಿ.ಚೌಡೇಶ್ವರಿ, ಗಣಕ ವಿಜ್ಞಾನ ವಿಭಾಗದ ಎಚ್.ಪಿ.ಸುಮತಿ, ಆಹಾರ ತಂತ್ರಜ್ಞಾನ ವಿಭಾಗದ ನಿತೀಶ್ ಕೆ.ಗೌಡ, ಜೈವಿಕ ತಂತ್ರಜ್ಞಾನ ವಿಭಾಗದ ಎಸ್.ಸತ್ಯಮೂರ್ತಿ., ಸೂಕ್ಷ್ಮ ಜೀವಿಶಾಸ್ತ್ರ ವಿಭಾಗದ ಗಾಯತ್ರಿ ದೀಪಿಕಾ ಬಿ ತಲಾ 2 ಬಂಗಾರದ ಪದಕ ತಮ್ಮದಾಗಿಸಿಕೊಂಡರು.
ದೃಶ್ಯಕಲಾ ಮಹಾವಿದ್ಯಾಲಯದ ಐಶ್ವರ್ಯ ಎಲಿಗಾರ, ಬಿಸಿಎ ಪದವಿಯಲ್ಲಿ ಇಂಟರ್‌ಫೇಸ್ ಕಂಪ್ಯೂಟರ್ ಅಪ್ಲಿಕೇಶನ್ ಕಾಲೇಜಿನ ಪಿ.ವೆಂಕಟದುರ್ಗಾ ಪ್ರಸಾದ, ಬಿಎಸ್‌ಸಿಯಲ್ಲಿ ಎ.ವಿ. ಕಮಲಮ್ಮ ಕಾಲೇಜಿನ ಹಬೀಬಾ ಮಿಸ್ಬಾ ತಲಾ 2 ಚಿನ್ನದ ಪದಕ ಗಳಿಸಿದ್ದಾರೆ. ಬಿ.ಪಿ.ಇಡಿಯಲ್ಲಿ ಮಲ್ಲಾಡಿಹಳ್ಳಿ ಶತಮಾನೋತ್ಸವ ದೈಹಿಕ ಶಿಕ್ಷಣ ಕಾಲೇಜಿನ ಬಿ.ನಾಗವೇಣಿ, ಬಿಬಿಎನಲ್ಲಿ ಆರ್‌ಜಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ದಿಶಾ ಜೈನ್, ಗಣಿತ ಶಾಸ್ತ್ರದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಡಿಆರ್‌ಎಂ ಕಾಲೇಜಿನ ಸುಶ್ಮಿತಾ ರಾವ್ ಹಾಗೂ ದೃಶ್ಯ ಕಲಾ ಕಾಲೇಜಿನ ಎ.ಆರ್. ನವ್ಯಾ ತಲಾ ಒಂದು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
- - -