ಮಂಗಳೂರು : ಬಿಲ್ಲವ ಸಮುದಾಯಕ್ಕೆ ಸೇರಿದ ಕೇರಳದ ಶಿವಗಿರಿ ಮಠದ ಶಾಖಾ ಮಠಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಎಕರೆ ಜಾಗ ನೀಡಲು ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ವರ್ಕಲ ಶಿವಗಿರಿ ಮಠ, ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಆಶ್ರಯದಲ್ಲಿ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಬುಧವಾರ ನಾರಾಯಣ ಗುರು-ಮಹಾತ್ಮ ಗಾಂಧೀಜಿ ಸಂವಾದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿವಗಿರಿ ಮಠದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ ಹಾಗೂ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಅವರು ಮಠಕ್ಕೆ 5 ಎಕರೆ ಜಾಗ ಮಂಜೂರು ಮಾಡುವಂತೆ ಸಿಎಂಗೆ ಮನವಿ ಮಾಡಿದ್ದರು. ಸ್ಥಳದಲ್ಲೇ ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ, ಉಡುಪಿ ಅಥವಾ ದಕ್ಷಿಣ ಕನ್ನಡದಲ್ಲಿ 5 ಎಕರೆ ಜಾಗ ಗುರುತಿಸಿಕೊಡಿ, ಆ ಜಮೀನನ್ನು ನಮ್ಮ ಸರ್ಕಾರ ಮಂಜೂರು ಮಾಡಿಕೊಡಲಿದೆ ಎಂದು ಘೋಷಿಸಿದರು.
ಸಂವಿಧಾನ ಜಾರಿಯಾಗಿ ಇಷ್ಟು ವರ್ಷಗಳಾದರೂ ಸಮಾಜದಲ್ಲಿ ಗುಲಾಮಗಿರಿ ಮನಸ್ಥಿತಿ ಇನ್ನೂ ಹೋಗಿಲ್ಲ. ಮೇಲ್ಜಾತಿಯವನು ಬಡವನಾದರೂ ‘ಸ್ವಾಮೀ, ಬುದ್ಧೀ’ ಎಂದು ಕರೆಯುತ್ತಾರೆ, ದಲಿತ ಶ್ರೀಮಂತನಾದರೂ ಏಕವಚನದಲ್ಲಿ ಸಂಬೋಧಿಸುತ್ತಾರೆ. ಇದೇ ಗುಲಾಮಗಿರಿ ಸಂಕೇತ. ಈ ಗುಲಾಮಗಿರಿ ಮನಸ್ಥಿತಿ ಹೋಗುವವರೆಗೆ ಸಮಾನತೆ ಬರಲು ಸಾಧ್ಯವಿಲ್ಲ ಎಂದರು.
ಸಹಿಷ್ಣುತೆ, ಸಹಬಾಳ್ವೆ ಎಲ್ಲರಲ್ಲೂ ಬೆಳೆಯಲಿ. ಜಗತ್ತಿನ ಯಾವ ಧರ್ಮವೂ ಇನ್ನೊಂದು ಧರ್ಮವನ್ನು ದ್ವೇಷಿಸುವಂತೆ ಹೇಳಿಲ್ಲ. ಧರ್ಮ, ಜಾತಿಯ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸವನ್ನು ಯಾರೂ ಮಾಡಬಾರದು. ಆಪರೇಷನ್ ಮಾಡುವಾಗ ತಮ್ಮದೇ ಜಾತಿಯವರ ರಕ್ತ ಬೇಕು ಅಂತ ಕೇಳ್ತೀರಾ? ರೋಗ ವಾಸಿಯಾದ ಮೇಲೆ ಸಮಾಜಕ್ಕೆ ಬಂದು ನೀನ್ಯಾವ ಜಾತಿ ಅಂತ ಕೇಳ್ತಾರಲ್ಲ, ಅದೇ ಸ್ವಾರ್ಥ. ಈ ಮನಸ್ಥಿತಿಯನ್ನು ಬಿಟ್ಟು ಎಲ್ಲರೂ ಸಮಾನತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ನಾರಾಯಣ ಗುರುಗಳು ಜಾತ್ಯತೀತತೆ ನಿರ್ಮಾಣ ಮಾಡಲು ಹೋರಾಟ ಮಾಡಿದವರು. ಇಡೀ ದೇಶದ ಜನತೆಗೆ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ಸಿದ್ಧಾಂತವನ್ನು ಸಾರಿದ ಸಂತ. ಆದರೂ ದೇಶದಲ್ಲಿ ಜಾತಿ ವ್ಯವಸ್ಥೆ ಉಳಿದಿದೆ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಯಾರೂ ಜಾತಿಯಿಂದ ದೊಡ್ಡವರಾಗಲು ಅಥವಾ ಕೀಳಾಗಲು ಸಾಧ್ಯವಿಲ್ಲ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆ ಬದಲಾವಣೆ ಆಗಬೇಕಾದರೆ ಮನುಷ್ಯತ್ವದ ಕೆಲಸಗಳಿಗೆ ಆದ್ಯತೆ ನೀಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ನಾರಾಯಣ ಗುರುಗಳು ತಮ್ಮ ಜೀವನದುದ್ದಕ್ಕೂ ಅಸ್ಪೃಶ್ಯತೆ ತೊಡೆದುಹಾಕಲು ಪ್ರಯತ್ನ ಮಾಡಿದ್ದರು. ಅವರು ಶಿವ ದೇವಾಲಯ ಸ್ಥಾಪನೆ ಮಾಡಿದಾಗ ಎದುರಾದ ಆಕ್ಷೇಪಗಳಿಗೆ ‘ನಿಮ್ಮ ಶಿವನನ್ನು ಸ್ಥಾಪಿಸಿಲ್ಲ, ನಮ್ಮ ಶಿವನನ್ನು ಸ್ಥಾಪನೆ ಮಾಡಿದ್ದೇವೆ’ ಎಂದವರು. ಅಸ್ಪೃಶ್ಯರು ಎಂಬ ಕಾರಣಕ್ಕೆ ದೇವಾಲಯಗಳಿಗೆ ಪ್ರವೇಶ ನೀಡದಿದ್ದರೆ ಆ ದೇವಾಲಯಗಳಿಗೇ ಹೋಗಬೇಡಿ, ನಿಮ್ಮದೇ ದೇವಾಲಯ ಮಾಡಿ ಎಂಬ ಸಂದೇಶ ನೀಡಿದವರು. ನಾರಾಯಣ ಗುರುಗಳ ಜೀವನವೇ ಒಂದು ಇತಿಹಾಸ ಎಂದರು.
ಸರ್ಕಾರದ ವತಿಯಿಂದಲೇ ‘ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ’ ಆಚರಣೆ ಆರಂಭಿಸಿದ್ದು 2016ರಲ್ಲಿ ಕಾಂಗ್ರೆಸ್ ಸರ್ಕಾರ. ನೂರು ವರ್ಷಗಳ ಹಿಂದೆ ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿ ನಡುವೆ ನಡೆದ ಮಹತ್ವದ ಸಂವಾದ, ಭಾರತದ ಆಧುನಿಕ ಇತಿಹಾಸದ ಹಾದಿಗೆ ದಿಕ್ಸೂಚಿ ನೀಡಿತು. ಗುರುಗಳ ತತ್ವಗಳಾದ ಸಹಬಾಳ್ವೆ ಮತ್ತು ಧರ್ಮ ಸಹಿಷ್ಣುತೆಯನ್ನು ಅಂಬೇಡ್ಕರ್ ದೇಶದ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಈ ಮೌಲ್ಯಗಳು ಎಲ್ಲರಲ್ಲೂ ಬೆಳೆಯಬೇಕು ಎಂದು ಆಶಿಸಿದರು.