ದಾವಣಗೆರೆ: ನಗರದ ಜಿಎಂ ವಿಶ್ವವಿದ್ಯಾಲಯ ವತಿಯಿಂದ ನ.27ರಿಂದ 29ರವರೆಗೆ ಹಮ್ಮಿಕೊಳ್ಳಲಾಗಿದ್ದ ಪುರುಷರಿಗಾಗಿ ಶ್ರೀ ಜಿ.ಮಲ್ಲಿಕಾರ್ಜುನಪ್ಪ ಮೆಮೋರಿಯಲ್ ಹಾಗೂ ಮಹಿಳೆಯರಿಗಾಗಿ ಶ್ರೀಮತಿ ಜಿ.ಎಂ. ಹಾಲಮ್ಮ ಮೆಮೋರಿಯಲ್ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗಳು ನ.29ರಂದು ಸಮಾರೋಪಗೊಂಡಿವೆ.
ಪುರುಷರ ವಿಭಾಗದಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ ಕ್ರೀಡಾಪಟುಗಳ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಎಂಜಿನಿಯರಿಂಗ್ ಕಾಲೇಜಿನ ಕ್ರೀಡಾಪಟುಗಳ ತಂಡ ದ್ವಿತೀಯ ಸ್ಥಾನ ಪಡೆದು ರನ್ನರ್ ಅಪ್ ಸಾಧನೆಗೆ ತೃಪ್ತಿಪಡಬೇಕಾಯಿತು.ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಎಂಜಿನಿಯರಿಂಗ್ ಕಾಲೇಜಿನ ತಂಡ ದ್ವಿತೀಯ ಸ್ಥಾನ ಪಡೆದು ರನ್ನರ್ ಅಪ್ ಆಗಿದೆ.
ಮಹಿಳಾ ಮತ್ತು ಪುರುಷರ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಥಮ ಬಹುಮಾನವಾಗಿ ₹30 ಸಾವಿರ ನಗದು ಬಹುಮಾನ ಜೊತೆಗೆ ಆಕರ್ಷಕ ಟ್ರೋಫಿ ಮತ್ತು ದ್ವಿತೀಯ ಬಹುಮಾನವಾಗಿ ₹15 ಸಾವಿರ ನಗದು ಬಹುಮಾನ ಆಕರ್ಷಕ ಟ್ರೋಫಿ ನೀಡಿ ಪ್ರೋತ್ಸಾಹಿಸಲಾಯಿತು.ಜಿಎಂ ವಿವಿ ಕುಲಾಧಿಪತಿ ಜಿ.ಎಂ. ಲಿಂಗರಾಜ್, ಕುಲಪತಿ ಎಸ್.ಆರ್. ಶಂಕಪಾಲ್ ಅವರು ವಿಜೇತ ಕ್ರೀಡಾಪಟುಗಳ ತಂಡಕ್ಕೆ ಬಹುಮಾನ ವಿತರಿಸಿ ಅಭಿನಂದಿಸಿದರು.
ಸಮಾರಂಭದಲ್ಲಿ ಕುಲಸಚಿವ ಬಿ.ಎ. ಸುನೀಲ್ ಕುಮಾರ, ಉಪಕುಲಪತಿ ಎಚ್.ಡಿ. ಮಹೇಶಪ್ಪ, ಮುಖ್ಯ ಲೆಕ್ಕಾಧಿಕಾರಿ ಸಿ.ಎ. ಅಶೋಕ್ ಕುಮಾರ, ಜಿಎಂ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಗಿರೀಶ್ ಬೋಳಕಟ್ಟಿ, ಡಾ. ಎಚ್.ಎಸ್. ಕಿರಣ್ ಕುಮಾರ, ಡಾ. ಕೆ.ಎನ್. ಭರತ್, ಜಿ.ಬಿ.ಅಜ್ಜಯ್ಯ ಉಪಸ್ಥಿತರಿದ್ದರು.ಲೀಗ್ ಕಂ ನಾಕ್ ಔಟ್ ಮಾದರಿಯ ಈ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ 16 ಹಾಗೂ ಮಹಿಳೆಯರ ವಿಭಾಗದಲ್ಲಿ 10 ತಂಡಗಳು ಭಾಗವಹಿಸಿದ್ದವು.
- - --1ಕೆಡಿವಿಜಿ41:
ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ ಸಮಾರೋಪದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.