ಕನ್ನಡಪ್ರಭ ವಾರ್ತೆ ಗುಡಿಬಂಡೆ
ಪಟ್ಟಣದ ಪ್ರವಾಸಿ ಮಂದಿರದ ಬಳಿ ಯಾದವ ಸಮುದಾಯ ಭವನ ನಿರ್ಮಾಣಕ್ಕೆ 20 ಗುಂಟೆ ಜಮೀನು ನೀಡಿದ್ದು, ಇದೀಗ ಭವನ ನಿರ್ಮಾಣಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾಲೂಕಿನ ಯಾದವ ಸಮುದಾಯದ ಜನತೆ ಸುಮಾರು ದಿನಗಳಿಂದ ಯಾದವ ಸಮುದಾಯ ಭವನ ನಿರ್ಮಾಣಕ್ಕಾಗಿ ಮನವಿ ಮಾಡಿದ್ದರು. ಅವರ ಬೇಡಿಕೆಯಂತೆ ಪಟ್ಟಣದ ಪ್ರವಾಸಿ ಮಂದಿರದ ಬಳಿ 20 ಗುಂಟೆ ಜಮೀನು ಮಂಜೂರು ಮಾಡಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 20 ಲಕ್ಷ ರು. ಅನುದಾನ ಸಹ ನೀಡಲಾಗಿದೆ. ಈ ಭವನ ಉತ್ತಮವಾಗಿ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ತಾಲೂಕಿನಲ್ಲಿ ಈಗಾಗಲೇ ಅನೇಕ ಸಮುದಾಯಗಳ ಅಭಿವೃದ್ಧಿಗಾಗಿ ಜಾಗ ಮಂಜೂರು ಮಾಡಿ ಅನುದಾನ ಸಹ ನೀಡಲಾಗಿದೆ. ಎಲ್ಲಾ ಸಮುದಾಯಗಳ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ. ಇನ್ನೂ ಈ ಸಮುದಾಯ ಭವನಗಳು ಕೇವಲ ಭವನಗಳಾಗಿ ಉಳಿಯದೇ, ಆಯಾ ಸಮುದಾಯಗಳ ಮಕ್ಕಳ ಶೈಕ್ಷಣಿಕ ಅಭಿವೃದ್ದಿಯಲ್ಲೂ ಮಹತ್ವದ ಪಾತ್ರವಹಿಸಲಿ ಎಂದು ಸಲಹೆ ನೀಡಿದರು.
ಶಾಸಕರ ಗಮನ ಸೆಳೆದ ಕನ್ನಡಪ್ರಭ ಪತ್ರಿಕೆ ವರದಿ:ಇನ್ನೂ ಕಳೆದೆರಡು ದಿನಗಳ ಹಿಂದೆಯಷ್ಟೆ ಕುಸಿದ ಕೆರೆಯ ತಡೆಗೋಡೆ, ಅಪಾಯಕ್ಕೆ ಎಡೆ ಎಂಬ ಶೀರ್ಷಿಕೆಯಡಿ ಗುಡಿಬಂಡೆ ಕೆರೆಯ ಕೋಡಿ ಬಳಿಯ ತಡೆಗೋಡೆ ಕುಸಿದ ಬಗ್ಗೆ ವರದಿ ಪ್ರಕಟವಾಗಿದ್ದು, ಈ ಕುರಿತು ಮಾತನಾಡಿದ ಶಾಸಕರು, ನಾನೂ ಸಹ ಪತ್ರಿಕೆಯಲ್ಲಿ ಬಂದ ವರದಿಯನ್ನು ಓದಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗೆ ಕಳುಹಿಸಿದ್ದೇನೆ. ಆದಷ್ಟು ಶೀಘ್ರವಾಗಿ ತಡೆಗೋಡೆಯ ರಿಪೇರಿ ಕೆಲಸ ಮಾಡುವುದಾಗಿ ಅವರು ತಿಳಿಸಿದ್ದು, ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ ಎಂದರು.
ಸಿಎಂ ಅಧಿಕಾರ ಹಸ್ತಾಂತರ ಹೈಕಮಾಂಡ್ ಗೆ ಬಿಟ್ಟಿದ್ದು:ಸದ್ಯ ರಾಜ್ಯದಲ್ಲಿ ಸಿಎಂ ಅಧಿಕಾರ ಹಸ್ತಾಂತರ ಕುರಿತು ಜೋರು ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಶಾಸಕರು ಮಾತನಾಡಿ, ಅಧಿಕಾರ ಹಂಚಿಕೆ, ಹಸ್ತಾಂತರ ಅವೆಲ್ಲವೂ ಹೈಕಮಾಂಡ್ ಹಂತದಲ್ಲಿ ನಡೆಯುವಂತಹವು. ನಾವು ಕೇವಲ ನಮ್ಮ ಅಭಿಪ್ರಾಯವನ್ನು ಮಾತ್ರ ಕೊಡಬಹುದು ಅಷ್ಟೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ದರಾಗಿರುತ್ತೇವೆ ಎಂದರು.
ಇದೇ ಸಮಯದಲ್ಲಿ ಸಚಿವ ಸ್ಥಾನದ ಕುರಿತು ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಸಚಿವ ಸ್ಥಾನ ಸಿಕ್ಕಿದೆ. ಆದರೆ ಬಾಗೇಪಲ್ಲಿ ಕ್ಷೇತ್ರಕ್ಕೆ ಮಾತ್ರ ಇಲ್ಲಿಯವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ. ನಾನೂ ಸಹ ನಮ್ಮ ವರಿಷ್ಠರ ಬಳಿ ಸಚಿವ ಸ್ಥಾನದ ಬೇಡಿಕೆಯಿಟ್ಟಿದ್ದೇನೆ. ಸಚಿವ ಸ್ಥಾನ ಸಿಗುತ್ತೆ ಎಂಬ ನಂಬಿಕೆಯೂ ನನಗಿದೆ. ಎಲ್ಲ ದೇವರ ದಯೆ ಎಂದರು.ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಹೇಳಿಕೆಗೆ ಕೌಂಟರ್:
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಅಭ್ಯರ್ಥಿ ಸಿ.ಮುನಿರಾಜು, ಕೆಲವೇ ದಿನಗಳಲ್ಲಿ ನಾನು ಶಾಸಕನಾಗುತ್ತೇನೆ. ಹಾಲಿ ಶಾಸಕರು ಅನರ್ಹರಾಗುತ್ತಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಕೌಂಟರ್ ಕೊಟ್ಟ ಶಾಸಕ ಸುಬ್ಬಾರೆಡ್ಡಿ, ಪ್ರಕರಣ ನ್ಯಾಯಾಲಯದಲ್ಲಿದ್ದಾಗ ಅದರ ಬಗ್ಗೆ ಮಾತನಾಡುವ, ಕನಿಷ್ಠ ಜ್ಞಾನ ಇಲ್ಲದಿರುವಂತಹ ವ್ಯಕ್ತಿಯ ಕುರಿತು ಮಾತನಾಡಿದರೆ ನಾನು ಚಿಕ್ಕವನಾಗುತ್ತೇನೆ. ಆ ಭಗವಂತ ಏನು ಬರೆದಿರುವನೋ ಅದೇ ಆಗುತ್ತೆ ಎಂದರು.ತಹಸೀಲ್ದಾರ್ ಸಿಗ್ಬತ್ತುಲ್ಲಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಆದಿರೆಡ್ಡಿ, ಗೊಲ್ಲ ಮುಖಂಡರಾದ ಗುರುಮೂರ್ತಿ, ದಪ್ಪರ್ತಿ ನಂಜುಂಡ, ಅಂಬರೀಶ್ ಸೇರಿದಂತೆ ಹಲವರು ಇದ್ದರು.