ಪಪ್ಪಾಯ, ಬಾಳೆಗೆ ಇನ್ನು ಸಿಗದು ನರೇಗಾ ಪ್ರೋತ್ಸಾಹಧನ

KannadaprabhaNewsNetwork |  
Published : Dec 04, 2025, 01:45 AM IST
Fruits

ಸಾರಾಂಶ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯಡಿ ಇನ್ನು ಮುಂದೆ ಪಪ್ಪಾಯ, ಬಾಳೆಗೆ ಪ್ರೋತ್ಸಾಹಧನ ಸಿಗುವುದಿಲ್ಲ. ಇದರಿಂದಾಗಿ ಲಕ್ಷಾಂತರ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು :  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯಡಿ ಇನ್ನು ಮುಂದೆ ಪಪ್ಪಾಯ, ಬಾಳೆಗೆ ಪ್ರೋತ್ಸಾಹಧನ ಸಿಗುವುದಿಲ್ಲ. ಇದರಿಂದಾಗಿ ಲಕ್ಷಾಂತರ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ.

ಹಲವು ವರ್ಷಗಳಿಂದ ನರೇಗಾ ಯೋಜನೆಯಡಿ ರಾಜ್ಯದಲ್ಲಿ ಸಾವಿರಾರು ರೈತರು ಹೆಕ್ಟೇರ್‌ಗೆ ಅನುಗುಣವಾಗಿ ಸಾಕಷ್ಟು ಪ್ರೋತ್ಸಾಹಧನ ಪಡೆದು ಪಪ್ಪಾಯ ಮತ್ತು ಬಾಳೆ ಬೆಳೆಯುತ್ತಿದ್ದರು. ಆದರೆ ಇತ್ತೀಚೆಗೆ ನರೇಗಾದಡಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ಪರಿಶೀಲಿಸಲು ಆಗಮಿಸಿದ್ದ ಕೇಂದ್ರ ತಂಡವು ಕಲಬುರಗಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಈ ನಿರ್ಧಾರ ಕೈಗೊಂಡಿರುವುದು ರೈತರಿಗೆ ಸಂಕಷ್ಟ ಉಂಟು ಮಾಡಿದೆ.

‘ಬಾಳೆ ಮತ್ತು ಪಪ್ಪಾಯಗಳು ದ್ವಿವಾರ್ಷಿಕ ಬೆಳೆಗಳಾಗಿದ್ದು ನರೇಗಾದಡಿ ಅನುಷ್ಠಾನಗೊಳಿಸಲು ಅವಕಾಶವಿಲ್ಲ. ತಕ್ಷಣವೇ ಇದನ್ನು ಸ್ಥಗಿತೊಳಿಸಬೇಕು’ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸೂಚಿಸಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಆಯುಕ್ತರು ತೋಟಗಾರಿಕಾ ಇಲಾಖೆ ನಿರ್ದೇಶಕರಿಗೆ ನ.21ರಂದು ಪತ್ರ ಬರೆದಿದ್ದಾರೆ.

ತಕ್ಷಣ ಕಾಮಗಾರಿ ಸ್ಥಗಿತಗೊಳಿಸಿ:

‘2026-27ನೇ ಸಾಲಿನ ಗ್ರಾಮ ಪಂಚಾಯ್ತಿಗಳ ಕ್ರಿಯಾ ಯೋಜನೆಯಲ್ಲಿ ಬಾಳೆ ಮತ್ತು ಪಪ್ಪಾಯ ಬೆಳೆಗಳನ್ನು ಮುಂದಿನ ಆದೇಶದವರೆಗೂ ಸೇರ್ಪಡಿಸಬಾರದು. ಈಗಾಗಲೇ 2025-26ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅನುಮೋದನೆಗೊಂಡು ಅನುಷ್ಠಾನವಾಗದಿರುವ ಕಾಮಗಾರಿಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಪಪ್ಪಾಯ ಮತ್ತು ಬಾಳೆ ಬೆಳೆಗಳು ಪ್ರದೇಶಾಭಿವೃದ್ಧಿ ಚಟುವಟಿಕೆಯಲ್ಲಿ ಅವಶ್ಯಕತೆ ಇದ್ದರೆ ಸೂಕ್ತ ಕಾರಣಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದರೆ ಅನುಮತಿ ನೀಡುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವನ್ನು ಕೋರಬಹುದು’ ಎಂದು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

‘ಪಪ್ಪಾಯ ಮತ್ತು ಬಾಳೆ ಬೆಳೆಯಲು ತೋಟಗಾರಿಕಾ ಇಲಾಖೆ ಮೂಲಕ ನರೇಗಾದಿಂದ ಸಾಕಷ್ಟು ಪ್ರೋತ್ಸಾಹಧನ ಸಿಗಲಿದೆ. ಇದರಿಂದಾಗಿ ಉತ್ತಮ ಆದಾಯ ಗಳಿಸಬಹುದು. ಆದ್ದರಿಂದ ತೋಟಗಾರಿಕಾ ಇಲಾಖೆಯು ಅಗತ್ಯ ಕ್ರಮ ಕೈಗೊಳ್ಳಬೇಕು. ಪಪ್ಪಾಯ ಮತ್ತು ಬಾಳೆ ಬೆಳೆಗಳಿಗೆ ಪ್ರೋತ್ಸಾಹಧನ ಮುಂದುವರೆಯುವಂತೆ ಮಾಡಬೇಕು’ ಎಂಬ ಒತ್ತಾಯ ರೈತರಿಂದ ಕೇಳಿಬಂದಿದೆ.

ಶೀಘ್ರ ಪ್ರಸ್ತಾವನೆ ಸಲ್ಲಿಕೆ

ನರೇಗಾ ಯೋಜನೆಯಡಿ ಪಪ್ಪಾಯ ಮತ್ತು ಬಾಳೆ ಬೆಳೆಗಳನ್ನು ಬೆಳೆಯುವುದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ಆದ್ದರಿಂದ ಅವಕಾಶ ನೀಡುವಂತೆ ಶೀಘ್ರದಲ್ಲೇ ರಾಜ್ಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅವರು ಇದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಿದ್ದಾರೆ.

- ಆರ್‌.ಗಿರೀಶ್‌, ತೋಟಗಾರಿಕೆ ಇಲಾಖೆ ನಿರ್ದೇಶಕ

ಪಪ್ಪಾಯ ಮತ್ತು ಬಾಳೆಯನ್ನು ನರೇಗಾ ಯೋಜನೆಯಡಿ ಬೆಳೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು. ವಿದೇಶಗಳಿಂದ ಹಣ್ಣುಗಳನ್ನು ಆಮದು ಮಾಡಿಕೊಳ್ಳದೇ ನಮ್ಮ ರೈತರು ಬೆಳೆದ ಹಣ್ಣುಗಳನ್ನು ಸೇವಿಸುವ ಪರಿಸ್ಥಿತಿ ನಿರ್ಮಾಣವಾಗಬೇಕು.

- ವೀರೇಶ ಸೊಬರದಮಠ, ರೈತ ಮುಖಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

9ರಂದು ರೈತ ಸಂಘದಿಂದ ಬೆಳಗಾವಿ ಚಲೋ
ಕನ್ನಡ ಭಾಷೆ ಉಳಿಸಿ ಬೆಳೆಸಬೇಕಾದುದು ಎಲ್ಲರ ಕರ್ತವ್ಯ