- ಡಿ.14ರ ತಡರಾತ್ರಿ ಬಂದಿದ್ದ ಇ-ಮೇಲ್‌ನಲ್ಲಿ ಅರೆಬರೆ ಇಂಗ್ಲಿಷ್ ಪದಗಳ ಬಳಕೆ । ತುಮಕೂರು, ಕಾರವಾರ ಡಿಸಿಗಳಿಗೂ ಇ-ಮೇಲ್
- ಪಾಕಿಸ್ತಾನದ ಐಎಸ್‌ಐ ಸೆಲ್, ತಮಿಳುನಾಡಿನ ಹಳೆಯ ಎಲ್‌ಟಿಟಿಇ ಜಂಟಿ ಕಾರ್ಯಾಚರಣೆ ಎಂದು ಉಲ್ಲೇಖ
- ಜಿಲ್ಲಾಡಳಿತ ಭವನದ ಎಲ್ಲ 53 ಕೊಠಡಿಗಳ ಜಾಲಾಟ । ಸೂಕ್ತ ಕ್ರಮಕ್ಕೆ ಕೋರಿ ಕೇಂದ್ರೀಯ ತನಿಖಾ ದಳಕ್ಕೆ ಪತ್ರ- - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಜಿಲ್ಲಾಡಳಿತ ಕಚೇರಿಯಲ್ಲಿ 5 ಬಾಂಬ್‌ಗಳನ್ನು ಶೀಘ್ರವೇ ಸ್ಫೋಟಿಸುವುದಾಗಿ ಜಿಲ್ಲಾಧಿಕಾರಿ ಹೆಸರಿನ ಅಧಿಕೃತ ಇ-ಮೇಲ್‌ಗೆ ಡಿ.14ರಂದು ಮಧ್ಯರಾತ್ರಿ ಬೆದರಿಕೆಯ ಇ-ಮೇಲ್ ಬಂದಿದೆ. ಈ ಹಿನ್ನೆಲೆ ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದಿಂದ ಇಂಚಿಂಚೂ ಬಿಡದೇ ಇಡೀ ಕಟ್ಟಡ ತಪಾಸಣೆ ಮಾಡಲಾಗಿದ್ದು, ಇದೊಂದು ಹುಸಿ ಮಾಹಿತಿ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು ಸೇರಿದಂತೆ ಎರಡೂ ಕಚೇರಿ ಅಧಿಕಾರಿ, ಸಿಬ್ಬಂದಿ ಭಾನುವಾರ ಸಂಜೆ ನಿಧನರಾದ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ಸಿದ್ಧತೆ, ಬಂದೋಬಸ್ತ್‌ನಲ್ಲಿ ತೊಡಗಿದ್ದರು. ಇದರಿಂದಾಗಿ ಬೆದರಿಕೆ ಇ-ಮೇಲ್ ಬಂದಿರುವ ವಿಚಾರ ಮಂಗಳವಾರ ಗೊತ್ತಾಗಿದೆ.ಸಜ್ಜದ್ ಹೈದರ್ ಪಿಎಎಫ್ ಜಿಂದಾಬಾದ್ ಎಂಬುದಾಗಿ ಉಲ್ಲೇಖಿಸಿ ಬರೆದ ಬಾಂಬ್ ಬೆದರಿಕೆಯ ಇ-ಮೇಲ್ ಅರ್ನಾ ಅಶ್ವಿನ್ ಶೇಖರ್, 295ನೇ ಟ್ರಸ್ಟ್ ಕ್ರಾಸ್, ಮೈಲಾಪುರ್ ಟು ಪೆರಿಯಾರ್ ಅಂಬೇಡ್ಕರ್ ಸ್ಟ್ರೀಟ್ ಎಂಬ ಹೆಸರಿನಲ್ಲಿ ಔಟ್ ಲುಕ್ ಇ-ಮೇಲ್ ಖಾತೆಯಿಂದ ಡಿ.14ರಂದು ಮಧ್ಯರಾತ್ರಿ ದಾವಣಗೆರೆ ಜಿಲ್ಲಾಡಳಿತಕ್ಕೆ ಬಂದಿದೆ. ಇದೇ ರೀತಿ ತುಮಕೂರು, ಕಾರವಾರ ಜಿಲ್ಲಾಧಿಕಾರಿಗಳ ಕಚೇರಿಗಳು ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ರಾತ್ರೋರಾತ್ರಿ ಬಂದ ಬೆದರಿಕೆಯ ಇ-ಮೇಲ್ ಇದಾಗಿದೆ ಎನ್ನಲಾಗಿದೆ.
ನಿಮ್ಮ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 5 ಬಾಂಬ್‌ಗಳನ್ನು ಶೀಘ್ರದಲ್ಲೇ ಸ್ಫೋಟಿಸಲಾಗುವುದು. ''''''''ಪಾಕಿಸ್ತಾನ-ತಮಿಳುನಾಡು DMK-2026 ಚುನಾವಣೆ ಗಮನ ಬೇರೆಡೆ ಸೆಳೆಯಲು ಬಯಸುತ್ತೆ'''''''' ಎಂಬ ವಿಷಯ **(Subject)**ದಡಿ ಸಂದೇಶವನ್ನು ಡಿಸಿ ಇ-ಮೇಲ್ ಖಾತೆಗೆ ಸಂದೇಶ ಕಳಿಸಲಾಗಿದೆ. ''''''''ತಮಿಳುನಾಡಿನಲ್ಲಿ ಪಾಕಿಸ್ತಾನ ಐಎಸ್ಐ ಸೆಲ್ ಮಾಜಿ ಎಲ್‌ಟಿಟಿಇ ಕಾರ್ಯಕರ್ತರೊಂದಿಗೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸುತ್ತಿದ್ದು, ಕೆಲವೇ ದಿನಗಳಲ್ಲಿ ರಿಮೋಟ್ ಕಂಟ್ರೋಲರ್ ಮೂಲಕ ಡಿಸಿ ಕಚೇರಿ ಸ್ಫೋಟಿಸುತ್ತೇವೆ...'''''''' ಎಂಬುದಾಗಿ ಅರೆಬರೆ ಇಂಗ್ಲಿಷ್‌ನಲ್ಲಿ ಇ-ಮೇಲ್ ಬಂದಿದೆ ಎಂದು ತಿಳಿದುಬಂದಿದೆ.ಬಾಂಬ್ ಸ್ಫೋಟದ ಬೆದರಿಕೆಯ ಇ-ಮೇಲ್ ಬಂದ ಹಿನ್ನೆಲೆ ಅಪರ ಜಿಲ್ಲಾಧಿಕಾರಿ ಶೀಲವಂತರ ಶಿವಕುಮಾರ ಅವರು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಎಸ್‌ಪಿ ಅವರಿಗೆ ಪತ್ರ ಬರೆದು ಈ ಬಗ್ಗೆ ಪರಿಶೀಲಿಸುವ ಕುರಿತು ಗಮನಕ್ಕೆ ತಂದಿದ್ದರು. ಅದರಂತೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಅವರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಪಿ.ಬಿ.ಪ್ರಕಾಶ್‌ಗೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದ ಸಮೇತ ಇಡೀ ಡಿಸಿ ಕಚೇರಿಯಲ್ಲಿ ಪರಿಶೀಲನೆ ನಡೆಸುವಂತೆ ಆದೇಶಿದ್ದರು.
ಕಿಡಿಗೇಡಿಗಳ ಪತ್ತೆಗೆ ಬಲೆ:ಡಿವೈಎಸ್ಪಿ ಪಿ.ಬಿ.ಪ್ರಕಾಶ ನೇತೃತ್ವದಲ್ಲಿ ಬಾಂಬ್ ನಿಷ್ಕ್ರಿಯ ದಳದ 8 ಸಿಬ್ಬಂದಿ ಹಾಗೂ ಶ್ವಾನದಳ ಸಿಬ್ಬಂದಿ ಇಡೀ ಕಚೇರಿ ಕೊಠಡಿ, ಮೂಲೆ ಮೂಲೆ, ಶೌಚಾಲಯ ಹೀಗೆ ಎಲ್ಲ ಕಡೆ ಬಾಂಬ್‌ಗಾಗಿ ಹುಡುಕಿದರು. ಜಿಲ್ಲಾಡಳಿತ ಭವನದ ನೆಲಅಂತಸ್ತು, ಮೊದಲ ಅಂತಸ್ತು, 2ನೇ ಅಂತಸ್ತು, ಮೇಲ್ಚಾವಣಿ ಸೇರಿದಂತೆ 53 ಕೊಠಡಿಗಳು ಸೇರಿದಂತೆ ಇಡೀ ಕಟ್ಟಡವನ್ನು ಜಾಲಾಡಿದ್ದಾರೆ. ಯಾವುದೇ ಅನುಮಾನಾಸ್ಪದ ವಸ್ತುವಾಗಲೀ, ಬಾಂಬ್ ಆಗಲಿ ಪತ್ತೆಯಾಗಲಿಲ್ಲ.
ಅಂತಿಮವಾಗಿ ಇದೊಂದು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬಂದ ಹುಸಿ ಇ-ಮೇಲ್ ಬೆದರಿಕೆ ಎಂಬುದು ಅಧಿಕಾರಿಗಳಿಗೆ ಸ್ಪಷ್ಟವಾಗಿದೆ. ಆದರೂ, ಇಂತಹ ವಿಚಾರದಲ್ಲಿ ನಿರ್ಲಕ್ಷ್ಯ ತೋರದ ಜಿಲ್ಲಾಡಳಿತ ಕೇಂದ್ರೀಯ ತನಿಖಾ ದಳಕ್ಕೆ ತನಿಖೆಗೆ ಪತ್ರ ಬರೆದಿದೆ. ಅದೇ ರೀತಿ ರಾಜ್ಯ ಸರ್ಕಾರಕ್ಕೂ ಸೂಕ್ತ ಕ್ರಮಕ್ಕೆ ಪತ್ರ ಬರೆದಿದೆ. ಪೊಲೀಸ್ ಇಲಾಖೆಯೂ ಇ-ಮೇಲ್ ಬಂದ ಐಪಿ ಅಡ್ರೆಸ್ ಪತ್ತೆ ಮಾಡಿ, ಬೆದರಿಕೆಯ ಇ-ಮೇಲ್ ಕಳಿಸಿದ್ದ ಕಿಡಿಗೇಡಿಗಳ ಪತ್ತೆಗೆ ಮುಂದಾಗುತ್ತಿದೆ.- - -
(ಕೋಟ್) ದಾವಣಗೆರೆ ಜಿಲ್ಲಾಧಿಕಾರಿ ಅಧಿಕೃತ ಇ-ಮೇಲ್‌ಗೆ ಡಿ.14ರಂದು ತಡರಾತ್ರಿ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದೆ. ಈ ವಿಚಾರವನ್ನು ಮಂಗಳವಾರ ಜಿಲ್ಲಾ ಎಸ್‌ಪಿ ಗಮನಕ್ಕೆ ತಂದು, ಪರಿಶೀಲಿಸುವಂತೆ ತಿಳಿಸಿದ್ದೇವೆ. ಜಿಲ್ಲಾಡಳಿತದ ಭವನವನ್ನು ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸಂಪೂರ್ಣ ಪರಿಶೀಲಿಸಿವೆ. ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ. ಇ-ಮೇಲ್ ಹಾಗೂ ಐಡಿಯನ್ನು ಕೇಂದ್ರ ತನಿಖಾ ದಳ, ರಾಜ್ಯ ಸರ್ಕಾರಕ್ಕೂ ಕಳಿಸಿದ್ದೇವೆ. ಐಪಿ ಅಡ್ರೆಸ್‌ನಿಂದ ಅದನ್ನು ಯಾರು ಕಳಿಸಿದ್ದು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ.- ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.
- - --16ಕೆಡಿವಿಜಿ6: ದಾವಣಗೆರೆ ಡಿಸಿ ಕಚೇರಿಯಲ್ಲಿ ಸ್ಫೋಟಕ ಪತ್ತೆ ಹಚ್ಚಲು ಪೊಲೀಸ್ ಇಲಾಖೆಯ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು.
-16ಕೆಡಿವಿಜಿ7: ಜಿ.ಎಂ.ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.