ಪೊಲೀಸ್ ಕಮಿಷನರೇಟ್ ಕಚೇರಿ ಮಂಜೂರು ಮಾಡಿ: ಶಾಸಕ ಎಸ್.ಎನ್. ಚನ್ನಬಸಪ್ಪ

KannadaprabhaNewsNetwork |  
Published : Dec 17, 2025, 01:45 AM IST
ಪೋಟೋ: 16ಎಸ್‌ಎಂಜಿಕೆಪಿ09 | Kannada Prabha

ಸಾರಾಂಶ

ಶಿವಮೊಗ್ಗ ನಗರಕ್ಕೆ ಪೊಲೀಸ್ ಕಮಿಷನರೇಟ್ ಕಚೇರಿಯನ್ನು ಮಂಜೂರು ಮಾಡಬೇಕೆಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ನಗರಕ್ಕೆ ಪೊಲೀಸ್ ಕಮಿಷನರೇಟ್ ಕಚೇರಿಯನ್ನು ಮಂಜೂರು ಮಾಡಬೇಕೆಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶಿವಮೊಗ್ಗ ಜಿಲ್ಲೆಯ ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ಸಿಬ್ಬಂದಿ ಕೊರತೆಯ ಬಗ್ಗೆ ವಿಷಯ ಪ್ರಸ್ತಾಪಿಸಿದ ಅವರು, ಶಿವಮೊಗ್ಗ ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ನಗರದ ಹೊರವಲಯಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆಯಿರುವುದು ನೂರಕ್ಕೆ ನೂರರಷ್ಟು ಸತ್ಯವಾಗಿದ್ದು, ಇದರಿಂದಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯವಾಗಿ ಇನ್ಸ್‌ಪೆಕ್ಟರ್ ದರ್ಜೆಯ ಠಾಣೆಗಳಲ್ಲಿ 70 ಸಿಬ್ಬಂದಿ ಇರಬೇಕಾದ ಜಾಗದಲ್ಲಿ ಕೇವಲ 35 ರಿಂದ 45 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚುತ್ತಿರುವ ಕಳ್ಳತನದ ಪ್ರಕರಣಗಳನ್ನು ನೋಡಿದರೆ ಶಿವಮೊಗ್ಗದಲ್ಲಿ ಜನ ಸಾಮಾನ್ಯರು ಭಯಪಡುವ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಇತ್ತೀಚೆಗೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಸಂದರ್ಭವನ್ನು ನೆನಪಿಸಿದ ಶಾಸಕರು, ಅಲ್ಲಿನ ಇನ್ಸ್‌ಪೆಕ್ಟರ್ ಅವರೇ ಸಿಬ್ಬಂದಿ ಇಲ್ಲದೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಶಿವಮೊಗ್ಗ ಮಾತ್ರವಲ್ಲದೆ, ಪಕ್ಕದ ಭದ್ರಾವತಿ ನಗರದ ಪರಿಸ್ಥಿತಿಯಂತೂ ದೇವರೇ ಕಾಪಾಡಬೇಕು ಎನ್ನುವ ಹಂತಕ್ಕೆ ತಲುಪಿದೆ. ಈ ಹಿಂದೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಶಿವಮೊಗ್ಗಕ್ಕೆ ಕಮಿಷನರೇಟ್ ಅನಿವಾರ್ಯವಾಗಿದ್ದು, ಗೃಹ ಸಚಿವರು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ವಿಷಯದ ಕುರಿತು ಮಾತನಾಡಿದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು, ಮುಖ್ಯಮಂತ್ರಿಗಳು ಅಥವಾ ಗಣ್ಯರು ಜಿಲ್ಲೆಗೆ ಭೇಟಿ ನೀಡಿದಾಗ ಅಥವಾ ಹೊರ ಜಿಲ್ಲೆಗಳಿಗೆ ಸಿಬ್ಬಂದಿಯನ್ನು ನಿಯೋಜಿಸಿದಾಗ ಸ್ಥಳೀಯ ಠಾಣೆಗಳು ಸಂಪೂರ್ಣ ಖಾಲಿಯಾಗುತ್ತಿವೆ. ವಿಶೇಷವಾಗಿ ತೀರ್ಥಹಳ್ಳಿಯಂತಹ ಭಾಗಗಳಲ್ಲಿ ಸಿಬ್ಬಂದಿ ಇಲ್ಲದೆ ಸ್ಥಳೀಯರಿಗೆ ರಕ್ಷಣೆ ಸಿಗದಂತಾಗಿದೆ. ಹೊರ ಜಿಲ್ಲೆಯ ಡ್ಯೂಟಿಗಳಿಗೆ ಇಲ್ಲಿನ ಸಿಬ್ಬಂದಿಯನ್ನು ಹಾಕುವುದರಿಂದ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ದೂರಿದರು.

ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 33 ಪೊಲೀಸ್ ಠಾಣೆಗಳಿದ್ದು, ಮಂಜೂರಾದ 1549 ಹುದ್ದೆಗಳ ಪೈಕಿ 1394 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಮತ್ತು 155 ಹುದ್ದೆಗಳು ಮಾತ್ರ ಖಾಲಿ ಇವೆ ಎಂದು ಮಾಹಿತಿ ನೀಡಿದರು. ವಿವಿಧ ತಾಂತ್ರಿಕ ಕಾರಣಗಳಿಂದ ನೇಮಕಾತಿ ವಿಳಂಬವಾಗಿದ್ದು, ಈಗಾಗಲೇ 32 ಸಬ್ ಇನ್ಸ್‌ಪೆಕ್ಟರ್‌ಗಳನ್ನು ಶಿವಮೊಗ್ಗಕ್ಕೆ ನೀಡಲಾಗಿದೆ. ಸಾರ್ವಜನಿಕರಿಗೆ ಠಾಣೆಗಳಲ್ಲಿ ತೊಂದರೆಯಾಗದಂತೆ 103 ಮಂದಿ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಉಳಿದ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಹಾಗೂ ಶಿವಮೊಗ್ಗಕ್ಕೆ ಕಮಿಷನರೇಟ್ ಮಾಡುವ ಪ್ರಸ್ತಾವನೆಯನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ