- ಎಲ್.ವಿ.ನಾಗರಾಜ್, ಲಕ್ಷಣ ರಾವ್‌ಗೆ ಅಯ್ಯಪ್ಪ ಸ್ವಾಮಿ ಭಕ್ತರಿಂದ ಶುಭ ಕೋರಿಕೆ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದಿಂದ ಶಬರಿಮಲೆ ಕ್ಷೇತ್ರಕ್ಕೆ ಕಾಲ್ನಡಿಗೆ ಮೂಲಕ ತೆರಳಿದ ಭಕ್ತರಾದ ಎಲ್.ವಿ.ನಾಗರಾಜ್ ಮತ್ತು ಲಕ್ಷ್ಮಣ ರಾವ್ ಅವರಿಗೆ ಚನ್ನಗಿರಿಯ ಅಯ್ಯಪ್ಪ ಸ್ವಾಮಿ ಭಕ್ತರು ಮಂಗಳವಾರ ಬೀಳ್ಕೊಡುಗೆ ನೀಡಿದರು.ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಪಟ್ಲಿ ನಾಗರಾಜ್ ಮಾತನಾಡಿ, ಪಟ್ಟಣದ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದ ಎಲ್.ವಿ. ನಾಗರಾಜ್ 26 ವರ್ಷಗಳಿಂದ ಕಾರ್ತಿಕ ಮಾಸದಲ್ಲಿ ಅಯ್ಯಪ್ಪ ಸ್ವಾಮಿ ವ್ರತದಂತೆ ಮಾಲೆಯನ್ನು ಹಾಕಿಕೊಂಡು ಶಬರಿಮಲೆಗೆ ಯಾತ್ರೆ ಹೋಗುತ್ತಿದ್ದಾರೆ. ಈ ವರ್ಷವೂ ಶಬರಿಮಲೆಗೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದಾರೆ. ಅವರಿಗೆ ಶುಭವಾಗಲಿ ಎಂದರು.
ಪಾದಯಾತ್ರಿ ಎಲ್.ವಿ.ನಾಗರಾಜ್ ಮಾತನಾಡಿ, ಚನ್ನಗಿರಿಯಿಂದ ಶಬರಿಮಲೆ ಕ್ಷೇತ್ರ 800 ಕಿ.ಮೀ. ದೂರದಲ್ಲಿದೆ. ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಕಳೆದ 25 ವರ್ಷಗಳಿಂದ ವಾಹನದಲ್ಲಿ ತೆರಳುತ್ತಿದ್ದೆವು. ಆದರೆ, ಪ್ರಸ್ತುತ ವರ್ಷದಲ್ಲಿ ತಾಲೂಕಿನಲ್ಲಿ ಉತ್ತಮ ಮಳೆ-ಬೆಳೆಯಾಗಿ ತಾಲೂಕಿನ ಜನತೆಗೆ ಶ್ರೇಯಸ್ಸು ಲಭಿಸಲಿ ಎಂದು ಪ್ರಾರ್ಥಿಸಿ, ಪಾದಯಾತ್ರೆ ಮೂಲಕ ಸಾಗುತ್ತಿದ್ದೇವೆ. ನನ್ನ ಜೊತೆ ದಾವಣಗೆರೆಯ ನಿವಾಸಿ ಲಕ್ಷಣ ರಾವ್ ಅವರು ಪಾದಯಾತ್ರೆಯಲ್ಲಿ ಬರುತ್ತಿದ್ದಾರೆ. 28 ದಿನಗಳ ಪಾದಯಾತ್ರೆ ನಡೆಸಿ ಶಬರಿಮಲೆ ತಲುಪಲಾಗುವುದು ಎಂದರು.ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರಾದ ಎಲ್.ಪಿ.ನಾಗರಾಜ್, ಮಧು, ಪ್ರಹ್ಲಾದ್, ಮೂರ್ತಿ, ರಾಮು ಸೇರಿದಂತೆ ಅಜ್ಜಯ್ಯ ಸ್ವಾಮಿ ಭಕ್ತರು ಹಾಜರಿದ್ದು ಶುಭ ಕೋರಿದರು.
- - --6ಕೆಸಿಎನ್‌ಜಿ2.ಜೆಪಿಜಿ:
ಚನ್ನಗಿರಿ ಪಟ್ಟಣದಿಂದ ಮಂಗಳವಾರ ಶಬರಿಮಲೆಗೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದ ಎಲ್.ವಿ. ನಾಗರಾಜ್ ಮತ್ತು ಲಕ್ಷಣ ರಾವ್ ಅವರಿಗೆ ಚನ್ನಗಿರಿಯ ಅಯ್ಯಪ್ಪ ಸ್ವಾಮಿ ಭಕ್ತರು ಬೀಳ್ಕೊಡುಗೆ ನೀಡಿದರು.