ಅಖಾಡದಲ್ಲಿ ಐವರು: ರಾಜ್ಯಸಭೆಗೆ ಎಲೆಕ್ಷನ್‌ ಗ್ಯಾರಂಟಿ

KannadaprabhaNewsNetwork | Updated : Feb 21 2024, 01:13 PM IST
Follow Us

ಸಾರಾಂಶ

ರಾಜ್ಯಸಭೆ ಉಮೇದುವಾರಿಕೆ ವಾಪಸ್‌ ಅವಧಿ ಮುಕ್ತಾಯವಾಗಿದ್ದು ಫೆ.27ಕ್ಕೆ ಮತದಾನ ನಡೆಯಲಿದೆ. ಈ ನಡುವೆ ಮೂರೂ ಪಕ್ಷಗಳಿಗೆ ಅಡ್ಡಮತದಾನದ ಆತಂಕ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾಗಿದ್ದು, ನಾಲ್ಕು ಸ್ಥಾನಕ್ಕೆ ಐವರು ಕಣದಲ್ಲಿ ಉಳಿದಿದ್ದಾರೆ. ಐದನೇ ಅಭ್ಯರ್ಥಿ ಸ್ಪರ್ಧಿಸಿರುವುದರಿಂದ ಚುನಾವಣಾ ಕಣ ರಂಗೇರಿದೆ.

ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್, ಅಜಯ್ ಮಾಕನ್, ಬಿಜೆಪಿಯಿಂದ ನಾರಾಯಣಸಾ ಕೆ.ಭಾಂಡಗೆ ಮತ್ತು ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ್ದರು. 

ಮಂಗಳವಾರ ಉಮೇದುವಾರಿಕೆ ವಾಪಸ್‌ ಪಡೆಯಲು ಕಡೆಯ ದಿನವಾಗಿದ್ದು, ಇವರಲ್ಲಿ ಯಾರೊಬ್ಬರೂ ನಾಮಪತ್ರ ವಾಪಸ್‌ ಪಡೆದುಕೊಂಡಿಲ್ಲ. ಹೀಗಾಗಿ ಚುನಾವಣೆ ನಡೆಯುವುದು ಖಚಿತವಾಗಿದ್ದು, 27ರಂದು ಮತದಾನ ನಡೆಯಲಿದೆ. 

ಅಂದೇ ಮತ ಎಣಿಕೆ ನಡೆಯಲಿದ್ದು, ಚುನಾವಣೆ ಕೂತುಹಲ ಮೂಡಿಸಿದೆ.ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅವರು ಐದನೇ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವುದರಿಂದ ಇದೀಗ ಆಡಳಿತ ಮತ್ತು ಪ್ರತಿಪಕ್ಷದಲ್ಲಿ ಅಡ್ಡಮತದಾನದ ಭೀತಿ ಎದುರಾಗಿದೆ. 

ಇದರ ಬೆನ್ನಲ್ಲೇ ಶಾಸಕರ ಕುದುರೆ ವ್ಯಾಪಾರವು ತೆರೆಮರೆಯಲ್ಲಿ ನಡೆಯುತ್ತಿದೆ ಎಂದು ಹೇಳಲಾಗಿದೆ. ಪ್ರಸ್ತುತ ಚುನಾವಣೆಯ ಬಲಾಬಲದಲ್ಲಿ ಕಾಂಗ್ರೆಸ್ ಮೂರು ಮತ್ತು ಬಿಜೆಪಿ ಒಂದು ಸ್ಥಾನವನ್ನು ಸುಲಭವಾಗಿ ಜಯ ಗಳಿಸಬಹುದಿತ್ತು. 

ಆದರೆ, ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರಿಂದ ನಾಮಪತ್ರ ಸಲ್ಲಿಕೆಯಾಗಿರುವ ಕಾರಣ ಚುನಾವಣಾ ಕಣ ಕುತೂಹಲ ಕೆರಳಿಸಿದೆ.ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 135, ಬಿಜೆಪಿ 66, ಜೆಡಿಎಸ್ 19 ಹಾಗೂ ನಾಲ್ವರು ಪಕ್ಷೇತರ ಶಾಸಕರಿದ್ದಾರೆ. 

ರಾಜ್ಯಸಭೆಗೆ ಆಯ್ಕೆಯಾಗಬೇಕಾದರೆ ಓರ್ವ ಅಭ್ಯರ್ಥಿ ತಲಾ 45 ಮತಗಳನ್ನು ಪಡೆಯಬೇಕು. ಬಿಜೆಪಿ ತನ್ನ ಅಧಿಕೃತ ಅಭ್ಯರ್ಥಿ ನಾರಾಯಣಸಾ ಭಾಂಡಗೆಗೆ ಮೊದಲ ಪ್ರಾಶಸ್ತ್ಯದಲ್ಲಿ 45 ಮತ್ತು ಹೆಚ್ಚುವರಿಯಾಗಿ ಒಂದು ಸೇರಿ ಒಟ್ಟು 46 ಮತಗಳನ್ನು ಹಾಕಿಸಲಿದೆ. 

ಹೆಚ್ಚುವರಿಯಾಗಿ ಉಳಿಯುವ 20 ಮತಗಳನ್ನು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ವರ್ಗಾಯಿಸಲಿದೆ. ಜೆಡಿಎಸ್ 19 ಸದಸ್ಯರನ್ನು ಹೊಂದಿದ್ದು, ಬಿಜೆಪಿಯ ಹೆಚ್ಚುವರಿ 20 ಮತಗಳು ಸೇರಿದರೆ 39 ಮತಗಳು ಕುಪೇಂದ್ರ ರೆಡ್ಡಿಗೆ ಬರಲಿವೆ. 

ಇನ್ನುಳಿದ ಆರು ಮತಗಳಿಗಾಗಿ ತೆರೆಮರೆಯಲ್ಲಿ ಕಸರತ್ತು ನಡೆದಿದೆ.ಪಕ್ಷೇತರ ಶಾಸಕರಾದ ಜನಾರ್ದನ ರೆಡ್ಡಿ ಅವರು ಕುಪೇಂದ್ರ ರೆಡ್ಡಿಗೆ ಮತ ಹಾಕುವ ಸಾಧ್ಯತೆ ಇದೆ. 

ಆದರೆ, ಲತಾ ಮಲ್ಲಿಕಾರ್ಜುನ, ಪುಟ್ಟಸ್ವಾಮಿ ಗೌಡ ಹಾಗೂ ದರ್ಶನ್ ಪುಟ್ಟಣ್ಣಯ್ಯ ಕಾಂಗ್ರೆಸ್‌ನತ್ತ ಒಲವು ಹೊಂದಿದ್ದಾರೆ. ಆದರೂ ಜೆಡಿಎಸ್ ಅವರನ್ನು ಸೆಳೆಯುವ ಪ್ರಯತ್ನ ನಡೆಸಿದೆ ಎಂದು ಹೇಳಲಾಗಿದೆ.