ಮಳೆಗೆ ಸೇನೆಯ ಗೋಡೆ ಕುಸಿದು 5 ಹಸು ಸಾವು

KannadaprabhaNewsNetwork |  
Published : Sep 17, 2026, 03:45 AM IST
ಪಿವಿಆರ್‌ | Kannada Prabha

ಸಾರಾಂಶ

ನಗರದಲ್ಲಿ ಮಂಗಳವಾರ ರಾತ್ರಿ ಬಿದ್ದ ಮಳೆಗೆ ದೊಮ್ಮಲೂರಿನಲ್ಲಿ ಗೋಡೆ ಕುಸಿದು ಐದು ಜಾನುವಾರು ಮೃತಪಟ್ಟಿದ್ದರೆ, ಪದ್ಮನಾಭನಗರ, ಬಸವೇಶ್ವರನಗರ ಸೇರಿದಂತೆ ಹಲವೆಡೆ ಮರಗಳು ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಮಂಗಳವಾರ ರಾತ್ರಿ ಬಿದ್ದ ಮಳೆಗೆ ದೊಮ್ಮಲೂರಿನಲ್ಲಿ ಗೋಡೆ ಕುಸಿದು ಐದು ಜಾನುವಾರು ಮೃತಪಟ್ಟಿದ್ದರೆ, ಪದ್ಮನಾಭನಗರ, ಬಸವೇಶ್ವರನಗರ ಸೇರಿದಂತೆ ಹಲವೆಡೆ ಮರಗಳು ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ದೊಮ್ಮಲೂರಿನಲ್ಲಿ ಸೇನೆಗೆ ಸೇರಿದ ಕಾಂಪೌಂಡ್ ಕುಸಿದು 4 ಹಸುಗಳು ಹಾಗೂ ಒಂದು ಕರು ಮೃತಪಟ್ಟಿವೆ. ಹಸುಗಳು ಮುನಿರಾಜು ಎಂಬುವರಿಗೆ ಸೇರಿದ್ದು ಈ ಸ್ಥಳದಲ್ಲಿ ಎಂಟು ಹಸು ಮತ್ತು ಕರುಗಳನ್ನು ಕಟ್ಟಲಾಗಿತ್ತು, ಸಂಜೆ ಮಳೆ ಬೀಳುತ್ತಿದ್ದಂತೆ ಶಿಥಿಲಗೊಂಡಿದ್ದ ಗೋಡೆ ಕುಸಿದು ಈ ದುರಂತ ಸಂಭವಿಸಿದೆ. ವಿಷಯ ತಿಳಿದ ಕೂಡಲೇ ಪಾಲಿಕೆ ಸಿಬ್ಬಂದಿ, ಶಾಸಕ ಹ್ಯಾರಿಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಲಿಕರಿಗೆ ಸಾಂತ್ವನ ಹೇಳಿದರು.

ಪಾಲಿಕೆಯಿಂದ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ. ಆದರೆ, ರಾಜ್ಯ ಪಶುಸಂಗೋಪನಾ ಇಲಾಖೆಯಿಂದ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ಮುನಿರಾಜು ಕುಟುಂಬಕ್ಕೆ ತಿಳಿಸಿದ್ದಾರೆ.

ಸಂಚಾರ ಅಸ್ತವ್ಯಸ್ತ:

ರಾತ್ರಿ ಸುರಿದ ಮಳೆಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಫ್ಲೈ ಓವರ್‌ನಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿತ್ತು. ವಾಹನಗಳ ಸವಾರರು ಹೈರಾಣಾಗಿ ಪರದಾಡಬೇಕಾಯಿತು. ವಾಹನಗಳು ಕಿಲೋಮೀಟರ್ ಗಟ್ಟಲೆ ನಿಂತಿದ್ದವು. ಕೆಲವು ವಾಹನಗಳು ಫ್ಲೈಓವರ್ ಮೇಲೆಯೇ ಕೆಟ್ಟು ನಿಂತಿದ್ದು ಕಂಡು ಬಂದಿತು.

ಮಲ್ಲೇಶ್ವರಂ ಎಂಬೆಸ್ಸಿ ಹೆರಿಟೇಜ್ ಸಮೀಪ ಮರ ಮುರಿದು ಬಿದ್ದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿತ್ತು. ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರವನ್ನು ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಸವೇಶ್ವರನಗರ 2ನೇ ಹಂತ, ಪದ್ಮನಾಭನಗರದಲ್ಲಿ ಎರಡು ಕಡೆಗಳಲ್ಲಿ ಮರದ ಕೊಂಬೆಗಳು ಮುರಿದು ಬಿದ್ದು ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ನೀರಿನ ಹರಿವು ಸರಿಪಡಿಸಿದ ಸಿಬ್ಬಂದಿ:

ಕೇಂದ್ರ ಪಾಲಿಕೆ ವ್ಯಾಪ್ತಿ ಸೇರಿದಂತೆ ಮಳೆ ಬಿದ್ದ ಪ್ರದೇಶಗಳಲ್ಲಿ ಹಲವು ಕಡೆ ಅಂಡರ್ ಪಾಸ್, ತಗ್ಗುಪ್ರದೇಶಗಳು, ಫ್ಲೈಓವರ್ ಗಳಲ್ಲಿ ಮಳೆ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ವಿಷಯ ತಿಳಿದ ಕೂಡಲೇ ಸಿಬ್ಬಂದಿ ಕಸ ಕಡ್ಡಿಯನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಿದರು.

ಶೇಷಾದ್ರಿಪುರಂ ಅಂಡರ್ ಪಾಸ್, ಓಕಳಿಪುರ ಅಂಡರ್ ಪಾಸ್, ಮಾರ್ಕೆಟ್ ಫ್ಲೈಓವರ್, ಕೆ.ಆರ್.ವೃತ್ತ ಅಂಡರ್ ಪಾಸ್ ಸೇರಿದಂತೆ ಹಲವೆಡೆ ನೀರು ನಿಂತು ವಾಹನಗಳು ಮುಂದೆ ಹೋಗದಂತೆ ಅಡ್ಡಿಯಾಗಿತ್ತು. ಪಾಲಿಕೆ ಸಿಬ್ಬಂದಿ ಸುಮಾರು 4 ಗಂಟೆಗಳ ಕಾಲ ಕಸ ತೆರವುಗೊಳಿಸಿದ್ದರಿಂದ ರಾತ್ರಿ 11 ಗಂಟೆಗೆ ಮಳೆ ಬಂದರೂ ರಸ್ತೆಯಲ್ಲಿ ನೀರು ನಿಲ್ಲದೆ ವಾಹನಗಳ ಸಂಚಾರ ಮಾಮೂಲಿನಂತಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೂಜೆ ಹೆಸ್ರಲ್ಲಿ ವೃದ್ಧೆಗೆ40 ಲಕ್ಷದ ರು.ಚಿನ್ನ ವಂಚಿಸಿದ ನಕಲಿ ಜ್ಯೋತಿಷಿ!
ವಿವಾಹಿತೆಯ ಅಪಹರಣ: ದುಷ್ಕರ್ಮಿಗಳಿಗೆ ಥಳಿಸಿದ ಸ್ಥಳೀಯರು