ಕನ್ನಡಪ್ರಭ ವಾರ್ತೆ ಉಡುಪಿ ಕೋಟದ ಯುವಕನೊಬ್ಬನಿಗೆ 5 ಲಕ್ಷ ರು. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾಳನ್ನು ಮಂಗಳವಾರ ಬ್ರಹ್ಮಾವರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈಗಾಗಲೇ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ ಕೋಟಿ ರು. ವಂಚಿಸಿದ ಆರೋಪಿ ವಂಚನೆ ಪ್ರಕರಣವೊಂದರಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಚೈತ್ರಾಳನ್ನು ಕಸ್ಟಡಿಗೆ ಪಡೆದ ಕೋಟ ಪೊಲೀಸರು ಮಂಗಳವಾರ ಬೆಂಗಳೂರಿನಿಂದ ಬ್ರಹ್ಮಾವರಕ್ಕೆ ಕರೆತಂದರು. ಕೋಟ ಪಿಎಸ್ಐ ಶಂಭುಲಿಂಗಯ್ಯ ಚೈತ್ರಾಳನ್ನು ವಂಚನೆ ಘಟನೆಯ ಬಗ್ಗೆ ವಿಚಾರಣೆ ನಡೆಸಿದರು, ನಂತರ ಬ್ರಹ್ಮಾವರ ಸಂಚಾರಿಪೀಠದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಮುಂದೆ ಹಾಜರುಪಡಿಸಿದರು. ನಂತರ ಮಂಗಳೂರಿನ ಜೈಲಿಗೆ ಕಳುಹಿಸಿಕೊಡಲಾಯಿತು. ಅಲ್ಲಿಂದ ಬುಧವಾರ ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗುತ್ತದೆ ಪ್ರಕರಣದ ವಿವರ: ಕೋಟ ಠಾಣಾ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತ ಸುದಿನ ಎಂಬವರಿಗೆ ಚೈತ್ರಾ ತನಗೆ ಬಿಜೆಪಿ ಸಚಿವರ ಸಂಪರ್ಕವಿದೆ ಎಂದು ನಂಬಿಸಿ 2018 ರಿಂದ 2023 ರ ತನಕ ಬಟ್ಟೆ ಅಂಗಡಿ ಆರಂಭಿಸುವುಕ್ಕೆ ಸಹಾಯ ಮಾಡುವುದಾಗಿ 5 ಲಕ್ಷ ರು.ಪಡೆದಿದ್ದಳು. ನಂತರ ಸಹಾಯ ಮಾಡದಿದ್ದಾಗ ಸುದಿನ ಅವರು ಹಣ ಹಿಂದಕ್ಕೆ ಕೇಳಿದರು, ಆಗ ಚೈತ್ರಾ ಆತನ ವಿರುದ್ಧ ಅತ್ಯಾಚಾರ ದೂರು ದಾಖಲಿಸುವುದಾಗಿ, ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಸುದಿನ ಕೋಟ ಠಾಣೆಗೆ ದೂರು ನೀಡಿದ್ದರು. ಪೊಲೀಸ್ ವಾಹನದಲ್ಲಿ ಕೂತು, ಏನೂ ಆಗಿಲ್ಲ ಎಂಬಂತೆ ತಮಾಷೆ ಮಾಡುತ್ತಾ ಕಾಲ ಕಳೆಯುತ್ತಿದ್ದ ಚೈತ್ರಾ ಮಾಧ್ಯಮದ ಕ್ಯಾಮೆರಗಳನ್ನು ಕಂಡು ಸೆಲೆಬ್ರಿಟಿಗಳಂತೆ ನಗುತ್ತಾ ಕೈಬೀಸಿದಳು.