ಬೀದಿ ನಾಯಿ ಕಚ್ಚಿ ಸತ್ತರೆ 5 ಲಕ್ಷ ರು. ಪರಿಹಾರ ಸ್ಥಳೀಯ ಸಂಸ್ಥೆಗಳೇ ನೀಡಬೇಕು: ಡಾ.ವಿದ್ಯಾಕುಮಾರಿ

KannadaprabhaNewsNetwork | Published : Jan 22, 2025 12:30 AM

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರಾಣಿ ದಯಾ ಸಂಘದ ವಿಶೇಷ ಸಭೆ ನಡೆಯಿತು. ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಣಿಪಾಲಬೀದಿ ನಾಯಿಗಳು ಆಕ್ರಮಣ ಮಾಡಿ ಕಚ್ಚಿದರೆ 5000 ರು., ಒಂದೊಮ್ಮೆ ವ್ಯಕ್ತಿಯು ಮರಣ ಹೊಂದಿದಲ್ಲಿ 5 ಲಕ್ಷ ರು. ಪರಿಹಾರವನ್ನು ಆಯಾ ಸ್ಥಳೀಯ ಸಂಸ್ಥೆಗಳೇ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದ್ದಾರೆ.ಅವರು ಮಂಗಳವಾರ ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.2023-24ನೇ ಸಾಲಿನಲ್ಲಿ ಎಬಿಸಿ ಕಾರ್ಯಕ್ರಮದ ಅನ್ವಯ ಜಿಲ್ಲೆಯಲ್ಲಿ 1,576 ಗಂಡು ಹಾಗೂ 1,878 ಹೆಣ್ಣು ಸೇರಿ ಒಟ್ಟು 3,454 ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಡಿಸೆಂಬರ್ ವರೆಗೆ 481 ಗಂಡು, 981 ಹೆಣ್ಣು ಸೇರಿದಂತೆ 1,462 ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದ ಅವರು, ಪ್ರಸಕ್ತ ಸಾಲಿನ ಮಾರ್ಚ್ ಒಳಗಾಗಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ಕಳೆದ ವರ್ಷಕ್ಕಿಂತ ಹೆಚ್ಚು ಮಾಡಬೇಕು ಎಂದರು.ಸ್ಥಳೀಯ ಸಂಸ್ಥೆಗಳು ಪ್ರತೀ ಮೂರು ತಿಂಗಳಿಗೊಮ್ಮೆ ಬೀದಿ ನಾಯಿಗಳ ಗಣತಿ ಕಾರ್ಯ ಕೈಗೊಳ್ಳಬೇಕು ಮತ್ತು ಪ್ರತಿವರ್ಷ ಅರ್ಧದಷ್ಟು ನಾಯಿಗಳನ್ನು ಸಂತಾನ ಹರಣ ಶಸ್ತ್ರ ಚಿಕಿತ್ಸೆಗೊಳಪಡಿಸಬೇಕು ಎಂದವರು ಸೂಚನೆ ನೀಡಿದರು.ಕಳೆದ ಸಾಲಿನಲ್ಲಿ ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲು ಅನುದಾನ ಕಾಯ್ದಿರಿಸಿ, ಟೆಂಡರ್ ಕರೆದರೂ ಯಾವುದೇ ಏಜೆನ್ಸಿಗಳು ಬಾರದೇ ಇರುವುದರಿಂದಾಗಿ ಅನುಷ್ಠಾನ ಸಾಧ್ಯವಾಗಿಲ್ಲ. ಸ್ಥಳೀಯ ಪ್ರಾಣಿ ದಯಾ ಸಂಘದ ಸಹಕಾರ ಅಥವಾ ಪಶು ಪಾಲನಾ ಇಲಾಖೆಯ ಸಹಕಾರದೊಂದಿಗೆ ಇವುಗಳ ಕಾರ್ಯರೂಪಕ್ಕೆ ಮುಂದಾಗಬೇಕು ಎಂದು ಹೇಳಿದರು.ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆಯನ್ವಯ ನಾಯಿಗಳ ಸಂತಾನೋತ್ಪತ್ತಿ ಮತ್ತು ಮಾರಾಟ ಹಾಗೂ ಮುದ್ದಿನ ಪ್ರಾಣಿಗಳ ಅಂಗಡಿ ಚಟುವಟಿಕೆಗಳನ್ನು ನಡೆಸಲು ವ್ಯಕ್ತಿಗಳು ಅಥವಾ ಸಂಸ್ಥೆಗಳು ಕಡ್ಡಾಯವಾಗಿ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಹಾಗೂ ಗ್ರಾಮೀಣ ಮತ್ತು ನಗರ ಮಿತಿಯ ಸ್ಥಳೀಯ ಸಂಸ್ಥೆಗಳಲ್ಲಿ ಪರವಾನಗಿಯನ್ನು ಪಡೆಯಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್, ಪ್ರಭಾರ ಅಪರ ಜಿಲ್ಲಾಧಿಕಾರಿ ನಾಗರಾಜ್ ವಿ. ನಾಯಕ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಎಂ.ಸಿ. ರೆಡ್ಡಪ್ಪ, ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Share this article