ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ ಅಗಲಿಕೆ ನಮ್ಮೆಲ್ಲರಿಗೂ ದುಃಖ ತಂದಿದ್ದು, ಅವರ ಮಾರ್ಗದರ್ಶನ ಮತ್ತು ಕನಸಿನಂತೆ ಸೋಮನಾಥ ಮಂದಿರದ ನಿರ್ಮಾಣ ಕಾರ್ಯದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಬಾವನ ಸೌದತ್ತಿ ಓಂಕಾರ ಆಶ್ರಮದ ಮಾತೊಶ್ರೀ ಭ್ರಮರಾಂಭಿಕಾದೇವಿ ನುಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ ಅಗಲಿಕೆ ನಮ್ಮೆಲ್ಲರಿಗೂ ದುಃಖ ತಂದಿದ್ದು, ಅವರ ಮಾರ್ಗದರ್ಶನ ಮತ್ತು ಕನಸಿನಂತೆ ಸೋಮನಾಥ ಮಂದಿರದ ನಿರ್ಮಾಣ ಕಾರ್ಯದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಬಾವನ ಸೌದತ್ತಿ ಓಂಕಾರ ಆಶ್ರಮದ ಮಾತೊಶ್ರೀ ಭ್ರಮರಾಂಭಿಕಾದೇವಿ ನುಡಿದರು.

ತಾಲೂಕಿನ ಯಲಿಹಡಲಿಗಿ ಗ್ರಾಮದ ಅಖಿಲ ಕರ್ನಾಟಕ ಆದಿ ಬಣಜಿಗ ಸಮಾಜ ಅಭಿವೃದ್ಧಿ ಸಂಘ ಹಾಗೂ ಸೋಮನಾಥ ಮಂದಿರ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ನಡೆದ ಭಾರತ ಹುಣ್ಣಿಮೆಯ ಸತ್ಸಂಗ ಕಾರ್ಯಕ್ರಮದಲ್ಲಿ ಲಿಂ.ಶಿವಶಂಕರ ಸ್ವಾಮೀಜಿ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಶಂಕರ ಮಹಾಸ್ವಾಮೀಜಿ ಅವರ ಸರಳತೆ, ತ್ಯಾಗ ಮತ್ತು ಜ್ಞಾನಮಾರ್ಗ ನಮ್ಮೆಲ್ಲರಿಗೂ ಆದರ್ಶವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಸಮಾಜ ಸೇವೆ, ಪಾಠ, ಪ್ರವಚನ ಮತ್ತು ಶ್ರೀಮಠದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.ಯಲಿಹಡಲಗಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸೌರಾಷ್ಟ್ರ ಸೋಮನಾಥ ದೇವಸ್ಥಾನ ಅಭಿವೃದ್ಧಿ ಕಾರ್ಯ ನಿರ್ವಿಘ್ನವಾಗಿ ಸಾಗಲಿ, ಆದಿ ಬಣಜಿಗ ಸಮಾಜ ಬಂಧುಗಳು ಸಹಕಾರ ನೀಡುವ ಮೂಲಕ ಶ್ರೀಗಳ ಕನಸು ನನಸು ಮಾಡಲು ಶ್ರಮಿಸೋಣ ಎಂದು ತಿಳಿಸಿದರು.

ಅಖಿಲ ಕರ್ನಾಟಕ ಆದಿಬಣಜಿಗ ಸಮಾಜ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಅಜ್ಜಪ್ಪ ನಾಗರಾಳೆ ಮಾತನಾಡಿ, ಓಂಕಾರ ಮಠದ ಶಿವಶಂಕರ ಮಹಾಸ್ವಾಮಿಗಳು ಮನುಕುಲದ ಒಳಿತಿಗಾಗಿ ಹೃದಯ ಮಿಡಿಯುತ್ತಿದ್ದರು. ಪ್ರಗತಿಪರ ಕೃಷಿ ಮತ್ತು ಆಯುರ್ವೇದ ಶಾಸ್ತ್ರದಲ್ಲಿ ತಜ್ಞರಾಗಿದ್ದರು. ಆದರೆ, ಅವರ ಅಗಲಿಕೆ ನಮ್ಮೆಲ್ಲರಿಗೂ ದುಃಖ ತಂದಿದೆ. ಸಮಾಜದ ಬಾಂಧವರು ತನು ಮನ ಧನ ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಸಮಾಜದ ಹಿರಿಯ ಬಸವರಾಜ ಜಾಬಣ್ಣವರ ಮಾತನಾಡಿ, ಶಿವಶಂಕರ ಸ್ವಾಮೀಜಿಗಳ ಬದುಕು ಮತ್ತು ಬೋಧನೆಗಳು ನಮ್ಮೆಲ್ಲರಿಗೆ ಮಾರ್ಗದರ್ಶನವಾಗಿವೆ. ಅವರು ಲಿಂಗೈಕ್ಯರಾಗುವ ಮೊದಲು ಮೃತ್ಯು ಪತ್ರ ನೋಂದಣಿ ಮಾಡಿದಂತೆ ಭ್ರಮರಾಂಬಿಕಾದೇವಿ ಅವರು ಪಟ್ಟಾಧಿಕಾರ ವಹಿಸಿಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕಾರ್ಯಗಳು ಜರುಗಲಿ, ಮರಿಸ್ವಾಮಿ ನೇಮಕ ಮಾಡುವ ಬಗ್ಗೆ ಚಿಂತನೆ ನಡೆಸಬೇಕಾದ ಅಗತ್ಯ ಇದೆ ಎಂದರು.ಸೌದತ್ತಿ ಓಂಕಾರ ಮಠದ ಮಾತೋಶ್ರೀ ನಾಗಲಂಬಿಕಾದೇವಿ, ಮದರಕಂಡಿಯ ಬಸಯ್ಯ ಸ್ವಾಮೀಜಿ, ಶೇಖರಣ್ಣ ಪರಪ್ಪನವರ, ಉದ್ಯಮಿ ಮಲ್ಲಿಕಾರ್ಜುನ ಬಿರಾದಾರ, ಆದಿ ಬಣಜಿಗ ಯುವ ವೇದಿಕೆ ಅಧ್ಯಕ್ಷ ರಾಜು ಅಲಬಾಳ, ನ್ಯಾಯವಾದಿ ಶಿವಪುತ್ರ ಬುರುಡೆ, ಬಸವರಾಜ ಬಾಳಿಕಾಯಿ, ಮಹಾದೇವ ರಂದಾಳೆ, ಪ್ರಕಾಶಗೌಡ ಪಾಟೀಲ, ಸಿ.ಎಸ್.ನೇಮಗೌಡ, ಶಿದರಾಯ ನಾಯಿಕ, ಚಿದಾನಂದ ಮಂಗಸುಳಿ, ಸತ್ಯಪ್ಪ ಬಿಸವೆ, ಗಂಗಪ್ಪ ಉಳ್ಳಾಗಡ್ಡಿ, ಪಾಪಣ್ಣ ಉಳ್ಳಾಗಡ್ಡಿ, ಸುರೇಶಗೌಡ ಪಾಟೀಲ, ವಿಜಯಗೌಡ ಪಾಟೀಲ, ಧರೆಪ್ಪ ನಂದೇಶ್ವರ, ಅಪ್ಪು ಹಣಮಾಪುರೆ, ಸದಾಶಿವ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸೂಕ್ತ ಮರಿಸ್ವಾಮಿ ನೇಮಕ, ಸೋಮನಾಥ ಮಂದಿರದ ಅಭಿವೃದ್ಧಿ ಬಗ್ಗೆ ಸಮಾಜದ ಗುರುಹಿರಿಯರು ಚಿಂತನ ಮಂಥನ ಸಭೆ ನಡೆಸಿದರು. ಕಲಾವಿದ ವಿಜಯ ಹುದ್ದಾರ ಪ್ರಾಸ್ತವಿಕವಾಗಿ ಮಾತನಾಡಿದರು. ಅಣ್ಣಾಸಾಬ ತೆಲಸಂಗ ಸ್ವಾಗತಿಸಿದರು. ಡಿ.ಜಿ.ನಂದೇಶ್ವರ ವಂದಿಸಿದರು.