ಧಾರವಾಡ ಜಿಲ್ಲೆಗೆ 5 ಕೌಶಲ್ಯ ಕರ್ನಾಟಕ ಪ್ರಶಸ್ತಿ

KannadaprabhaNewsNetwork |  
Published : Nov 12, 2025, 02:15 AM IST
ಬೆಂಗಳೂರಿನ ಅಶೋಕಾ ಹೊಟೇಲ್‌ನಲ್ಲಿ ನ. 6ರಂದು ನಡೆದ ಕೌಶಲ್ಯ ಶೃಂಗಸಭೆಯಲ್ಲಿ ಅತ್ಯುತ್ತಮ ಪ್ರದರ್ಶನ ಜಿಟಿಟಿಸಿ ಪ್ರಶಸ್ತಿ ಪಡೆದ ಹುಬ್ಬಳ್ಳಿ ಮಲ್ಟಿ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್. | Kannada Prabha

ಸಾರಾಂಶ

ಕೌಶಲ್ಯಾಭಿವೃದ್ಧಿ ಮತ್ತು ಸರ್ಕಾರಿ ಯೋಜನೆಗಳ ಯಶಸ್ವಿ ಅನುಷ್ಠಾನದಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ರಾಜ್ಯದ ಅತ್ಯುತ್ತಮ ಕೌಶಲ್ಯಾಭಿವೃದ್ಧಿ ಜಿಲ್ಲೆ ಎಂಬ ಗೌರವಕ್ಕೆ ಪಾತ್ರವಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಕೌಶಲ್ಯಾಭಿವೃದ್ಧಿ ಮತ್ತು ಸರ್ಕಾರಿ ಯೋಜನೆಗಳ ಯಶಸ್ವಿ ಅನುಷ್ಠಾನದಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ರಾಜ್ಯದ ಅತ್ಯುತ್ತಮ ಕೌಶಲ್ಯಾಭಿವೃದ್ಧಿ ಜಿಲ್ಲೆ ಎಂಬ ಗೌರವಕ್ಕೆ ಪಾತ್ರವಾಗುವ ಜತೆಗೆ ಐದು ವಿಭಾಗಗಳಲ್ಲಿ ಕೌಶಲ್ಯ ಕರ್ನಾಟಕ ಪ್ರಶಸ್ತಿ ಬಾಚಿಕೊಂಡಿದೆ.

ಧಾರವಾಡ ಜಿಲ್ಲೆ ಆರು ವಿಭಾಗಗಳಲ್ಲಿ ಐದು ಪ್ರಶಸ್ತಿ ಪಡೆಯುತ್ತಿರುವುದು ವಿಶೇಷ. ಅತ್ಯುತ್ತಮ ಪ್ರದರ್ಶನ ಜಿಟಿಟಿಸಿ (ಸರ್ಕಾರದ ಟೂಲ್ ರೂಂ ಆ್ಯಂಡ್ ಟ್ರೇನಿಂಗ್ ಸೆಂಟರ್) ಪ್ರಶಸ್ತಿಯನ್ನು ಹುಬ್ಬಳ್ಳಿಯ ಮಲ್ಟಿ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (ಎಂಎಸ್‌ಡಿಸಿ) ಹಾಗೂ ನಿಗದಿಯ ಸರ್ಕಾರಿ ಐಟಿಐ ಕಾಲೇಜು ಪ್ರಶಸ್ತಿ ಪಡೆದಿವೆ. ಅತ್ಯುತ್ತಮ ತರಬೇತಿದಾರಿಕೆಗಾಗಿ ಧಾರವಾಡದ ಬಸವರಾಜ ಬಿ, ಅತ್ಯುತ್ತಮ ತರಬೇತಿ ಪಡೆಯುವ ವಿದ್ಯಾರ್ಥಿಯಾಗಿ ಸಮರ್ಥ ಹೆಗಡೆ ಅವರಿಗೆ ಪ್ರಶಸ್ತಿ ಜತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಅತ್ತುತ್ತಮ ಪ್ರದರ್ಶನ ನೀಡಿದ ಜಿಲ್ಲೆ ಪ್ರಶಸ್ತಿಯ ಗರಿಯನ್ನು ಧಾರವಾಡ ಜಿಲ್ಲೆ ಪಡೆದುಕೊಂಡಿದೆ.

ಅತ್ಯುತ್ತಮ ತರಬೇತುದಾರ ಪ್ರಶಸ್ತಿಗೆ ಪಾತ್ರರಾದ ಬಸವರಾಜ ಬಿ. ಅವರು ಪ್ರಸ್ತುತ ತರಬೇತಿ ಹಾಗೂ ಸ್ಕಿಲ್ ಡೆವಲಪ್‌ಮೆಂಟ್ ಸೆಲ್‌ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1999ರಲ್ಲಿ ಜಿಟಿಟಿಸಿಯಲ್ಲಿ ಸೇವೆ ಆರಂಭಿಸಿ, ಹೊಸಪೇಟೆಯಲ್ಲಿ 8 ವರ್ಷ ಪ್ರಭಾರಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಶಿಸ್ತಿನ ಪಾಠ ಹಾಗೂ ವಿದ್ಯಾರ್ಥಿಗಳಿಗೆ ಶೇ. 100ರಷ್ಟು ಪ್ಲೇಸ್‌ಮೆಂಟ್ ಒದಗಿಸಿದ್ದಕ್ಕಾಗಿ ಈ ಪ್ರಶಸ್ತಿ ದೊರೆತಿದೆ.

ಜಿಟಿಟಿಸಿಯಿಂದ ಪ್ರೆಸಿಷನ್ ಡಿಪ್ಲೊಮಾ ಮ್ಯಾನುಫ್ಯಾಕ್ಟರಿಂಗ್‌ನಲ್ಲಿ ಪೂರೈಸಿದ ವಿದ್ಯಾರ್ಥಿ ಸಮರ್ಥ ಸಿ. ಹೆಗಡೆ, ಅತ್ಯುತ್ತಮ ತರಬೇತಿ ಪಡೆಯುವ ವಿದ್ಯಾರ್ಥಿಯಾಗಿ ಆಯ್ಕೆಯಾದರು. ಅವರು ಸಿಎನ್‌ಸಿ ಪ್ರೊಗ್ರಾಮಿಂಗ್, ಸಾಲಿಡ್ ವರ್ಕ್, ಟರ್ನಿಂಗ್ ಹಾಗೂ ಮಿಲ್ಲಿಂಗ್ ಸೇರಿದಂತೆ ಹಲವಾರು ತಾಂತ್ರಿಕ ಕೌಶಲ್ಯಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಹುಬ್ಬಳ್ಳಿಯ ಜಿಟಿಟಿಸಿ, ಎಂಎಸ್‌ಡಿಸಿ ಕಳೆದ ಒಂದು ವರ್ಷದಲ್ಲಿ 2,685ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ವಿವಿಧ ಸರ್ಕಾರಿ ಹಾಗೂ ಕೈಗಾರಿಕಾ ಸಂಬಂಧಿತ ಕೋರ್ಸ್‌ಗಳಲ್ಲಿ ತರಬೇತಿ ನೀಡಿದೆ. ಸಂಸ್ಥೆಯು ರೊಬೊಟಿಕ್ಸ್, ಎಲೆಕ್ಟ್ರಿಕಲ್ ಸೇರಿದಂತೆ ಹಲವು ಪ್ರಾಯೋಗಿಕ ತರಬೇತಿ ಆಯೋಜಿಸಿಸಲಾಗಿತ್ತು. ರೊಬೊಟಿಕ್ಸ್ ಬೇಸಿಗೆ ಶಿಬಿರದಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಯಶಸ್ವಿ ತರಬೇತಿ ಪಡೆದಿದ್ದಾರೆ. 700ಕ್ಕೂ ಹೆಚ್ಚು ಡಿಪ್ಲೊಮಾ, ಬಿಇ, ಬಿಸಿಎ ಮತ್ತು ಬಿಎಸ್ಸಿ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಕೌಶಲ್ಯ ಕೋರ್ಸ್‌ಗಳ ಮೂಲಕ ಪ್ರಯೋಜನ ಪಡೆದಿದ್ದಾರೆ. ಇದರಲ್ಲಿ ತರಬೇತಿ ಗುಣಮಟ್ಟ, ಉದ್ಯೋಗಾವಕಾಶ ಹಾಗೂ ಪ್ಲೇಸ್‌ಮೆಂಟ್‌ನಲ್ಲಿ ಉತ್ತಮ ಸಾಧನೆ ಕಂಡಿದೆ. ಈ ಪ್ರಶಸ್ತಿ ನಮ್ಮ ತಂಡದ ಗುಣಮಟ್ಟದ ತರಬೇತಿ, ನವೀನತೆ ಹಾಗೂ ಯುವಶಕ್ತಿಯ ಸಬಲೀಕರಣದ ಶ್ರಮವನ್ನು ಪ್ರತಿಬಿಂಬಿಸುತ್ತದೆ. ಈ ಪ್ರಶಸ್ತಿ ಲಭಿಸಿರುವುದಕ್ಕೆ ಸಂತಸವಾಗಿದೆ ಎಂದು ಜಿಟಿಟಿಸಿಯ ಪ್ರಾಂಶುಪಾಲ ಮಾರುತಿ ಭಜಂತ್ರಿ "ಕನ್ನಡಪ್ರಭ "ಕ್ಕೆ ತಿಳಿಸಿದರು.

ಪ್ರಶಸ್ತಿ ಸ್ವೀಕಾರ:

ನ. 4, 5 ಹಾಗೂ 6ರಂದು ಬೆಂಗಳೂರಿನ ಅಶೋಕಾ ಹೊಟೇಲ್‌ನಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಕೌಶಲ್ಯ ಶೃಂಗಸಭೆ ನಡೆಯಿತು. ನ. 4ರಂದು ಉದ್ಘಾಟನೆ, 5ರಂದು ಸಂವಾದ ಹಾಗೂ ನ. 6ರಂದು ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿವಿಧ ಕೌಶಲ್ಯ ಕೇಂದ್ರಗಳಲ್ಲಿ ಗುಣಮಟ್ಟದ ತರಬೇತಿ ನೀಡಲಾಗಿದೆ. ಇದರ ಪ್ರತಿಫಲವಾಗಿ ಜಿಲ್ಲೆಗೆ 5 ಪ್ರಶಸ್ತಿಗಳು ಲಭಿಸಿವೆ.

ಆರ್.ಪಿ. ದ್ಯಾಬೇರಿ, ಧಾರವಾಡ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ

PREV

Recommended Stories

ಪರಪ್ಪನ ಅಗ್ರಹಾರ ಜೈಲಿಗೆ ಅಂಶು ಕುಮಾರ್‌ ಅಧೀಕ್ಷಕ
ಬಟ್ಟೆ ವ್ಯಾಪಾರ ಸೋಗಲ್ಲಿ 1 ಕೋಟಿಯ ಬುಲೆಟ್‌ ಬೈಕ್‌ ಕದ್ದ